ನೌಕಾಪಡೆ ಸಂಬಂಧಿತ ರಹಸ್ಯ ಮಾಹಿತಿ ಸೋರಿಕೆ ಪ್ರಕರಣ ಉನ್ನತ ಮಟ್ಟದ ತನಿಖೆಗೆ ಯಶ್ಪಾಲ್ ಸುವರ್ಣ ಆಗ್ರಹ

Spread the love

ನೌಕಾಪಡೆ ಸಂಬಂಧಿತ ರಹಸ್ಯ ಮಾಹಿತಿ ಸೋರಿಕೆ ಪ್ರಕರಣ ಉನ್ನತ ಮಟ್ಟದ ತನಿಖೆಗೆ ಯಶ್ಪಾಲ್ ಸುವರ್ಣ ಆಗ್ರಹ

ಉಡುಪಿ: ಮಲ್ಪೆ ಉಡುಪಿ ಕೊಚ್ಚಿನ್ ಶಿಪ್ ಯಾರ್ಡ್ ನಲ್ಲಿ ನಿರ್ಮಾಣಗೊಂಡಿರುವ ನೌಕಾಪಡೆಯ ಹಡಗುಗಳ ಬಗ್ಗೆ ರಹಸ್ಯ ಮಾಹಿತಿಯನ್ನು ಪಾಕಿಸ್ತಾನಕ್ಕೆ ರವಾನಿಸಿರುವ ಘಟನೆ ಅತ್ಯಂತ ಆತಂಕಕಾರಿ ಬೆಳವಣಿಗೆಯಾಗಿದ್ದು ಈ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸುವಂತೆ ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ಗೃಹ ಇಲಾಖೆಗೆ ಆಗ್ರಹ ಮಾಡಿದ್ದಾರೆ.

ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ನೇತೃತ್ವದಲ್ಲಿ ಜಿಲ್ಲಾ ಪೊಲೀಸ್ ಇಲಾಖೆ ಪ್ರಕರಣವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿ ಸಕಾಲಿಕ ಕಾರ್ಯಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದು ಅಭಿನಂದನೀಯ.

ಕರಾವಳಿ ಭಾಗದ ಆರ್ಥಿಕತೆಗೆ ಬಹುದೊಡ್ಡ ಕೊಡುಗೆ ನೀಡುತ್ತಿರುವ ದೇಶದ ಅತೀದೊಡ್ಡ ಸರ್ವಕಾಲಿಕ ಬಂದರಾಗಿ ಗುರುತಿಸಿಕೊಂಡಿರುವ ಮಲ್ಪೆ ಮೀನುಗಾರಿಕಾ ಬಂದರಿನಲ್ಲಿ ಕಾರ್ಯಾಚರಿಸುತ್ತಿರುವ ಉಡುಪಿ ಕೊಚ್ಚಿನ್ ಶಿಪ್ ಯಾರ್ಡ್ ಘಟಕದಲ್ಲಿ ದೇಶದ ಭದ್ರತೆಗೆ ಧಕ್ಕೆ ತರುವ ಘಟನೆ ನಡೆದಿರುವುದು ಅತ್ಯಂತ ಆಘಾತಕಾರಿಯಾಗಿದೆ.

ದಿನಂಪ್ರತಿ ಸಾವಿರಾರು ಮಂದಿ ಮೀನುಗಾರಿಕಾ ಚಟುವಟಿಕೆಯಲ್ಲಿ ತೊಡಗಿಕೊಂಡಿರುವ, ಕೋಟ್ಯಾಂತರ ವ್ಯಾಪಾರ ವಹಿವಾಟು ನಡೆಸುವ ಮಲ್ಪೆ ಮೀನುಗಾರಿಕಾ ಬಂದರಿನ ಸಮರ್ಪಕ ನಿರ್ವಹಣೆ ಬಗ್ಗೆ ಹಲವು ವರ್ಷಗಳಿಂದ ಮೀನುಗಾರರು ದೂರು ನೀಡಿದ್ದರೂ ಈವರೆಗೆ ಸ್ವಚ್ಚತೆ, ಸಿ ಸಿ ಟಿ ವಿ ಅಳವಡಿಕೆ, ಭದ್ರತೆ ವ್ಯವಸ್ಥೆ ಮಾಡದೇ ಮೀನುಗಾರಿಕೆ ಇಲಾಖೆ ದಿವ್ಯ ನಿರ್ಲಕ್ಷ್ಯವಹಿಸಿದೆ.

ಒಂದು ವರ್ಷದ ಹಿಂದೆ ಮಲ್ಪೆ ಭಾಗದಲ್ಲಿ ಅಕ್ರಮ ಬಾಂಗ್ಲಾ ವಲಸಿಗರನ್ನು ಕೂಡಾ ಬಂಧಿಸಿತ್ತು, ಇಂತಹ ಘಟನೆಗಳು ಮಲ್ಪೆ ಪರಿಸರದಲ್ಲಿ ನಿರಂತರ ನಡೆಯುತ್ತಿರುವ ಹಿನ್ನೆಲೆಯಲ್ಲಿ ಈ ಪ್ರಕರಣವನ್ನು ಅತ್ಯಂತ ಗಂಭೀರವಾಗಿ ಪರಿಗಣಸಿ ಮಲ್ಪೆ ಮೀನುಗಾರಿಕಾ ಬಂದರಿನಲ್ಲಿ ಸೂಕ್ತ ಭದ್ರತೆ ಒದಗಿಸುವ ನಿಟ್ಟಿನಲ್ಲಿ ಕ್ರಮವಹಿಸಿ, ಅಕ್ರಮ ವಲಸಿಗರು ಹಾಗೂ ಬಂಧಿತ ಆರೋಪಿಗಳ ಜಾಲದ ಬಗ್ಗೆ ಉನ್ನತ ಮಟ್ಟದ ತನಿಖೆಯನ್ನೂ ನಡೆಸಿ ದೇಶದ ಭದ್ರತೆಗೆ ಸವಾಲಾಗಿರುವ ದೇಶ ವಿರೋಧಿ ಶಕ್ತಿಗಳನ್ನು ಹತ್ತಿಕ್ಕುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ಗೃಹ ಸಚಿವಾಲಯ ಉನ್ನತ ಮಟ್ಟದ ತನಿಖೆಯನ್ನೂ ನಡೆಸುವಂತೆ ಶಾಸಕ ಯಶ್ ಪಾಲ್ ಸುವರ್ಣ ಆಗ್ರಹಿಸಿದ್ದಾರೆ.


Spread the love