ಪಕ್ಷದ ಜವಾಬ್ದಾರಿ ಎಂಬ ನೆಪವೊಡ್ಡಿ ಕ್ಷೇತ್ರವನ್ನು ನಿರ್ಲಕ್ಷಿಸಿದ ಶೋಭಾರನ್ನು ತಿರಸ್ಕರಿಸಿ – ಪ್ರಮೋದ್

Spread the love

ಪಕ್ಷದ ಜವಾಬ್ದಾರಿ ಎಂಬ ನೆಪವೊಡ್ಡಿ ಕ್ಷೇತ್ರವನ್ನು ನಿರ್ಲಕ್ಷಿಸಿದ ಶೋಭಾರನ್ನು ತಿರಸ್ಕರಿಸಿ – ಪ್ರಮೋದ್

ಬಿ.ಎಚ್.ಕೈಮರ (ಎನ್.ಆರ್.ಪುರ): ಕಳೆದ ಲೋಕಸಭಾ ಚುನಾವಣೆಯಲ್ಲಿ 1.80ಲಕ್ಷ ಮತಗಳಿಂದ ಗೆದ್ದ ಸಂಸದೆ ಶೋಭಾ ಕರದ್ಲಾಂಜೆ ಕ್ಷೇತ್ರದ ಜನರ ಸಮಸ್ಯೆಗಳಿಗೆ ಸ್ಪಂದಿಸದೆ ಸಂಪೂರ್ಣ ನಿರ್ಲಕ್ಷ್ಯ ಮಾಡಿದರು ಎಂದು ಉಡುಪಿ–ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಪ್ರಮೋದ್ ಮಧ್ವರಾಜ್ ದೂರಿದರು.

ತಾಲ್ಲೂಕಿನ ಬಿ.ಎಚ್.ಕೈಮರದಲ್ಲಿ ಸೋಮವಾರ ಸಂಜೆ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದರು. ಚುನಾವಣೆಯಲ್ಲಿ ಗೆದ್ದ ಮೇಲೆ ಪಕ್ಷದ ರಾಜ್ಯದ ಜವಾಬ್ದಾರಿಯಿದೆ ಎಂದು ಕಾರಣ ಹೇಳುವ ಮೂಲಕ ಕ್ಷೇತ್ರದ ಸಮಸ್ಯೆಯನ್ನು ಆಲಿಸಲು ಮನೆಯನ್ನು ಮಾಡಲಿಲ್ಲ. ಕಸ್ತೂರಿರಂಗನ್ ವರದಿ ಜಾರಿಯ ಸಭೆಯಲ್ಲಿ ಭಾಗವಹಿಸಲಿಲ್ಲ. ಅರಣ್ಯ ವಾಸಿಗಳನ್ನು ಒಕ್ಕಲೆಬ್ಬಿಸುವ ತೀರ್ಮಾನವಾದಾಗಲೂ ಸಂಸತ್ತಿನಲ್ಲಿ ಧ್ವನಿ ಎತ್ತಿಲ್ಲ ಎಂದು ದೂರಿದರು.

‘ನಾನು ಉಡುಪಿ ಕ್ಷೇತ್ರದ ಶಾಸಕನಾಗಿದ್ದಾಗ ₹ 2ಸಾವಿರ ಕೋಟಿ ಅನುದಾನವನ್ನು ತಂದು ಕ್ಷೇತ್ರವನ್ನು ಅಭಿವೃದ್ಧಿಪಡಿಸಿದೆ. ಆದರೆ, ಹಿಂದುತ್ವದ ಹೆಸರಿನಲ್ಲಿ, ಮೋದಿಯ ಹೆಸರಿನಲ್ಲಿ ನನಗೆ ಸೋಲಾಯಿತು. ಪ್ರಸ್ತುತ ಚುನಾವಣೆಯಲ್ಲಿ ಮತದಾರರು ಕೆಲಸ ಮಾಡದ ಶೋಭಾ ಕರಂದ್ಲಾಜೆ ಬೇಕೋ ಅಥವಾ ಕೆಲಸ ಮಾಡುವ ಪ್ರಮೋದ್ ಮಧ್ವರಾಜ್ ಬೇಕೋ ಎಂಬುದನ್ನು ನಿರ್ಧರಿಸಬೇಕು’ ಎಂದರು.

ದೇಶದಲ್ಲಿ 25 ಕೋಟಿ ಜನ ಬಡವರಿದ್ದು ಅವರನ್ನು ಬಡತನ ರೇಖೆಯಿಂದ ಮೇಲೆತ್ತಲು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಇಂತಹ ಕುಟುಂಬ ಪ್ರತಿ ಮಹಿಳೆಗೆ ಮಾಸಿಕ ₹ 6ಸಾವಿರದಂತೆ ವಾರ್ಷಿಕ ₹ 72 ಸಾವಿರ ಆದಾಯ ನೀಡುವ ಮಹಾಕ್ರಾಂತಿಕಾರಕ ಘೋಷಣೆ ಮಾಡಿದ್ದಾರೆ. ಸಂಸದರು ತಮ್ಮ ವೈಫಲ್ಯ ಮುಚ್ಚಿಹಾಕಿಕೊಳ್ಳಲು ಮೋದಿ ನೋಡಿ ಮತಹಾಕಿ ಎನ್ನುತ್ತಿದ್ದಾರೆ. ಆದರೆ, ಸ್ಥಳೀಯ ಜನರ ಸಮಸ್ಯೆಗಳನ್ನು ಆಲಿಸಲು ಮೋದಿ ಬರುವುದಿಲ್ಲ. ಹಾಗಾಗಿ ಸ್ಥಳೀಯವಾಗಿ ಲಭ್ಯವಾಗುವ ಅಭ್ಯರ್ಥಿಗಳನ್ನೇ ಅವರು ಚುನಾವಣೆಯಲ್ಲಿ ಗೆಲ್ಲಿಸಬೇಕು ಎಂದರು.

‘ಬಿಜೆಪಿಯವರು ಆರಂಭಿಸಿರುವ ಗೋ ಬ್ಯಾಕ್ ಶೋಭಾ ಅಭಿಯಾನವನ್ನು ಅವರಿಗೆ ಚುನಾವಣೆಯಲ್ಲಿ ಸೋಲಿಸುವ ಮೂಲಕ ಕಾಂಗ್ರೆಸ್ ಮತ್ತು ಜೆಡಿಎಸ್ ಕಾರ್ಯಕರ್ತರು ಯಶಸ್ವಿಯಾಗಿ ಮುಗಿಸುವ ಕೆಲಸ ಮಾಡಬೇಕು. ಚುನಾವಣೆಯಲ್ಲಿ ಗೆದ್ದರೆ ಕ್ಷೇತ್ರದ ಪ್ರತಿಹಳ್ಳಿಗೂ ಭೇಟಿ ನೀಡಿ ಜನರ ಸಮಸ್ಯೆ ಆಲಿಸಲಾಗುವುದು. ಜನರ ವಿರೋಧಿ ಕಾನೂನುಗಳನ್ನು ತಿದ್ದುಪಡಿ ಮಾಡುವ ಕೆಲಸ ಮಾಡಲಾಗುವುದು. ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಅನುದಾನವನ್ನು ತಂದು ಶೃಂಗೇರಿ ಕ್ಷೇತ್ರವನ್ನು ಹಾಗೂ ಲೋಕಸಭಾ ಕ್ಷೇತ್ರವನ್ನು ಮಾದರಿಯನ್ನಾಗಿಸಲಾಗುವುದು. ಪ್ರಜೆಗಳ ತೆರಿಗೆಯಲ್ಲಿ ಸಂಬಳ ಪಡೆಯುವ ಜನಪ್ರತಿನಿಧಿಯಾಗಿ ಪ್ರಜಾಪ್ರಭುತ್ವದಲ್ಲಿ ಪ್ರಭುಗಳಾದ ಪ್ರಜೆಗಳ ಸೇವೆಯನ್ನು ಸೇವಕನಂತೆ ಮಾಡುತ್ತೇನೆ’ ಎಂದರು.

ಮಲೆನಾಡು ಅಭಿವೃದ್ಧಿ ಮಂಡಳಿ ಅಧ್ಯಕ್ಷ ಟಿ.ಡಿ.ರಾಜೇಗೌಡ ಮಾತನಾಡಿ, ‘ಕಳೆದ ಚುನಾವಣೆಯ ಸಂದರ್ಭದಲ್ಲಿ ಬಿಜೆಪಿ ನೀಡಿದ ಯಾವುದೇ ಭರವಸೆಯನ್ನು ಈಡೇರಿಸಿಲ್ಲ. 2ಕೋಟಿ ಉದ್ಯೋಗ ಸೃಷ್ಟಿಸಿಲ್ಲ. ಡಾಲರ್ ಎದುರು ರೂಪಾಯಿ ಮೌಲ್ಯ ಹೆಚ್ಚಿಸಿಲ್ಲ, ನೆರೆಹೊರೆಯ ರಾಷ್ಟ್ರಗಳ ಸೈನಿಕರ ದಾಳಿಯನ್ನು ತಡೆಯಲು ಸಾಧ್ಯವಾಗಲಿಲ್ಲ. ರಾಷ್ಟ್ರೀಕೃತ ಬ್ಯಾಂಕುಗಳ ನಷ್ಟದ ಸ್ಥಿತಿ ಅನುಭವಿಸುವಂತಾಯಿತು’ ಎಂದು ದೂರಿದರು.

ತಾಲ್ಲೂಕು ಕಾಂಗ್ರೆಸ್ ಘಟಕದ ಅಧ್ಯಕ್ಷ ಡಾ.ಅಂಶುಮಂತ್, ಜಿಲ್ಲಾ ಪಂಚಾಯಿತಿ ಸದಸ್ಯ ಪಿ.ಆರ್.ಸದಾಶಿವ, ಮುಖಂಡರಾದ ಈ.ಸಿ.ಜೋಯಿ, ಉಪೇಂದ್ರ, ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ಚಂದ್ರಶೇಖರ್, ಶಿವದಾಸ್, ಸಾಧಿಕ್ ಭಾಷ, ಅಬೂಬಕ್ಕರ್ ಮತ್ತಿತರರಿದ್ದರು.

ಬಿಜೆಪಿಯಿಂದ ಒಡೆದು ಆಳುವ ನೀತಿ
ಬಿ.ಎಚ್.ಕೈಮರ(ಎನ್.ಆರ್ .ಪುರ): ಬಿಜೆಪಿಯವರು ಸಮಾಜವನ್ನು ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಎಂದು ವಿಭಜಿಸುವ ಕೆಲಸ ಮಾಡಿದ್ದಾರೆ. ಪ್ರಸ್ತುತ ಗೋವುಗಳ ಮಧ್ಯೆಯು ಜರ್ಸಿ ಮತ್ತು ಮಲೆನಾಡು ಗಿಡ್ಡ ತಳಿ ಎಂದು ಒಡೆದು ಆಳುವ ನೀತಿಯನ್ನು ಅನುಸರಿಸಿ, ಹೋರಾಟ ಮಾಡುವ ಸಂಚು ರೂಪಿಸುತ್ತಿದ್ದಾರೆಂದು ಪ್ರಮೋದ್ ಮಧ್ವರಾಜ್ ಟೀಕಿಸಿದರು.

ಇಲ್ಲಿ ಸೋಮವಾರ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದರು. ‘ಬಿಜೆಪಿಯವರು ಗೋವನ್ನು ಮಾತೆ ಎಂದು ಬೊಬ್ಬಿಡುತ್ತಾರೆ. ಆದರೆ ಯಾವುದೇ ಬಿಜೆಪಿ ಮುಖಂಡ ಗೋ ಶಾಲೆ ಪ್ರಾರಂಭಿಸಿಲ್ಲ. ಗೋಶಾಲೆ ಪ್ರಾರಂಭಿಸಿರುವ ಬಿಜೆಪಿ ಮುಖಂಡ ಯಾರಾದರೂ ಇದ್ದರೆ ಸನ್ಮಾನ ಮಾಡಿ ಅವರ ಮನೆಗೆ ಹೋಗಿ ಬರುತ್ತೇನೆ, ನಾನು 25 ಗೋವುಗಳ ಗೋಶಾಲೆ ಆರಂಭಿಸಿದ್ದೇನೆ. ಎಲ್ಲಾ ತಳಿಯ ಗೋವುಗಳಿಗೂ ಆಶ್ರಯ ನೀಡಲಾಗಿದೆ. ಗೋವಿನಲ್ಲಿ 33 ಕೋಟಿ ದೇವತೆಗಳಿವೆ ಎಂದು ಹೇಳುವ ಬಿಜೆಪಿಯವರು ಗೋವಿಗೆ ಕೇಸರಿ ಬಣ್ಣ ಹಚ್ಚಿ ಅದಕ್ಕೆ ಕಮಲದ ಚಿತ್ರ ಬಿಡಿಸಿ ಹಿಂಸೆ ನೀಡಿ ಮತಯಾಚಿಸುತ್ತಿದ್ದಾರೆ’ ಎಂದು ಆರೋಪಿಸಿದರು.

ತಾವು ಹಿಂದೂ ವಿರೋಧಿ ಎಂದು ಅಪಪ್ರಚಾರ ಮಾಡಲಾಗುತ್ತಿದೆ. ತಮ್ಮ ಕುಟುಂಬ 60ವರ್ಷಗಳ ರಾಜಕೀಯ ಜೀವನದಲ್ಲಿ ಹಿಂದೂ ದೇವಸ್ಥಾನ, ಧಾರ್ಮಿಕ ಕಾರ್ಯಗಳಿಗೆ ಕೊಟ್ಟಷ್ಟು ಕೊಡುಗೆ ಬಿಜೆಪಿಯ ಯಾವ ಮುಖಂಡನೂ ಸಹ ನೀಡಿಲ್ಲ ಎಂದರು.


Spread the love