ಪ್ರಮೋದ್ ಮಧ್ವರಾಜ್ ಅವರ ವೈಫಲಗಳ ವಿರುದ್ದ ಉಡುಪಿ ಬಿಜೆಪಿಯಿಂದ ಆರೋಪ ಪಟ್ಟಿ ಬಿಡುಗಡೆ

Spread the love

ಪ್ರಮೋದ್ ಮಧ್ವರಾಜ್ ಅವರ ವೈಫಲಗಳ ವಿರುದ್ದ ಉಡುಪಿ ಬಿಜೆಪಿಯಿಂದ ಆರೋಪ ಪಟ್ಟಿ ಬಿಡುಗಡೆ

ಉಡುಪಿ: ಕಳೆದ ವಿಧಾನಸಭಾ ಚುನಾವಣೇಯ ವೇಳೆ ಪ್ರಣಾಳಿಕೆಯಲ್ಲಿ ಸುಳ್ಳು ಭರವಸೆಗಳನ್ನು ನೀಡಿ ಅನುಷ್ಠಾನ ಮಾಡಲಾಗದೆ ವೈಫಲ್ಯ ಹೊಂದಿದ ಹಾಗೂ ಯಾವುದೇ ಗಮನಾರ್ಹ ಅಭಿವೃದ್ಧಿ ಕಾರ್ಯಕ್ರಮಗಳನ್ನು ಉಡುಪಿ ವಿಧಾನಸಭಾಕ್ಷೇತ್ರದಲ್ಲಿ ಜಾರಿಗೆ ತರಲಾಗದ, ಶಾಸಕರಾಗಿ ಐದು ವರ್ಷಗಳ ಕಾಲ ಉಡುಪಿಯ ಆಶೋತ್ತರಗಳಿಗೆ ವಿರುದ್ಧವಾಗಿ ಭೃಷ್ಟಾಚಾರ ಮಾಡಿ ಪ್ರಗತಿಯನ್ನು ಕುಂಠಿತಗೊಳಿಸಿ ಜನರನ್ನು ವಂಚಿಸಿದ ಉಡುಪಿ ಶಾಸಕ ಪ್ರಮೋದ್ ಮಧ್ವರಾಜ್ ವಿರುದ್ದ ಶುಕ್ರವಾರ ಉಡುಪಿ ಬಿಜೆಪಿ ಆರೋಪ ಪಟ್ಟಿಯನ್ನು ಬಿಡುಗಡೆಗೊಳಿಸಿತು.

ಉಡುಪಿಯ ಮಾಜಿ ಶಾಸಕ ರಘುಪತಿ ಭಟ್ ಮತ್ತು ಉಡುಪಿ ಬಿಜೆಪಿ ಜಿಲ್ಲಾಧ್ಯಕ್ಷ ಮಟ್ಟಾರ್ ರತ್ನಾಕರ ಹೆಗ್ಡೆಯವರು ಉಡುಪಿ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಶಾಸಕ ಪ್ರಮೋದ್ ಮಧ್ವರಾಜ್ ವಿರುದ್ದ ಆರೋಪ ಪಟ್ಟಿಯನ್ನು ಬಿಡುಗಡೆಗೊಳಿಸಿದರು.

ಬಳಿಕ ಮಾತಾನಾಡಿದ ಮಾಜಿ ಶಾಸಕ ರಘುಪತಿ ಭಟ್ ಅವರು, ಪ್ರಮೋದ್ ಮಧ್ವರಾಜ್ ಉಡುಪಿಯ ಶಾಸಕರಾಗಿ ಆಯ್ಕೆಯಾದ ಬಳಿಕ ಉಡುಪಿಯ ಅಭಿವೃದ್ಧಿ ಸಂಫೂರ್ಣ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಚುನಾವಣಾ ಪ್ರಣಾಳಿಕೆಯಲ್ಲಿ 500 ಕೋಟಿ ವೆಚ್ಚದ ಮಲ್ಪಿಸ್ಪೆಷಾಲಿಟಿ ಆಸ್ಪತ್ರೆಯನ್ನು ಉಡುಪಿಯಲ್ಲಿ ಮಾಡಲಾಗುತ್ತದೆ ಎಂದು ಘೋಷಿಸಿ ಐದು ವರ್ಷಗಳಲ್ಲಿ ಈ ಕುರಿತು ಯಾವುದೇ ಚಕಾರವೆತ್ತದೆ, ಇರುವ ಜಿಲ್ಲಾ ಆಸ್ಪತ್ರೆಯನ್ನು ಕೂಡ ಅಭಿವೃದ್ದಿಗೊಳಿಸದೆ ಇರುವುದು ಇವರ ನಿರ್ಲಕ್ಷ್ಯತನವನ್ನು ತೋರಿಸುತ್ತದೆ.

ಉಡುಪಿ ಹೃದಯಭಾಗದಲ್ಲಿರುವ ಸರಕಾರಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯನ್ನು ಯಾವುದೇ ಟೆಂಡರ್ ಕರೆಯದೆ, ಯಾವುದೇ ಜನಪ್ರತಿನಿಧಿಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಏಕಾಏಕಿ ದುಬೈ ಮೂಲದ ಉದ್ಯಮಿಗೆ 30 ವರ್ಷಗಳ ಗುತ್ತಿಗೆ ನೀಡಿ ಕೋಟ್ಯಾಂತರ ಬೃಷ್ಟಾಚಾರಕ್ಕೆ ಕಾರಣರಾಗಿದ್ದಾರೆ.

ಪ್ರಮೋದ್ ಅವರು ಶಾಸಕರಾದ ಬಳಿಕ ಉಡುಪಿ ವಿಧಾನಸಭಾ ಕ್ಷೇತ್ರದಲ್ಲಿ ಯಾವುದೇ ರಸ್ತೆಯನ್ನು ಚತುಷ್ಪಥವಾಗಿ ಅಭಿವೃದ್ಧಿಪಡಿಸಿಲ್ಲ. ಉಡುಪಿಗೆ ಮಂಜೂರಾದ ಸ್ನಾತಕೊತ್ತರ ಕೇಂದ್ರವನ್ನು ಉಳಿಸಿಕೊಳ್ಳುವಲ್ಲಿ ಕೂಡ ಶಾಸಕರು ವಿಫಲರಾಗಿದ್ದಾರೆ.

ಬ್ರಹ್ಮಾವರ ಪುರಸಭೆ  ರಚನೆಗೆ ನೈಜವಾಗಿ ಅರ್ಹತೆ ಇದ್ದರೂ ಅದನ್ನು ಮಂಜೂರು ಮಾಡಿಸಿಕೊಳ್ಳಲು ಶಾಸಕ ಪ್ರಮೋದ್ ವಿಫಲರಾಗಿದ್ದು, ಕೊನೆಯ ಕ್ಷಣದಲ್ಲಿ ತಾಲೂಕು ಘೋಷಣೆ ಮಾಡಿಕೊಂಡದ್ದು ಬಿಟ್ಟರೆ ಅದರ ಕುರಿತಾದ ಯಾವುದೇ ಅಭಿವೃದ್ದಿ ಕಾರ್ಯಗಳು ಕೈಗೊಂಡಿಲ್ಲ ಎಂದು ಆರೋಪಿಸಿದರು.

ಬಿಜೆಪಿ ಆಡಳಿತದಲ್ಲಿ ಮಂಜೂರಾದ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳನ್ನು ಕಾಂಗ್ರೆಸ್ ಸರಕಾರ ನೆನೆಗುದಿಗೆ ಹಾಕಿದ್ದು, ಸಚಿವ ಪ್ರಮೋದ್ ಮಧ್ವರಾಜ್ ಅವರು ಜಿಲ್ಲೆಯಲ್ಲಿ ಎರಡು ವರ್ಷಗಳ ಕಾಲ ಮರಳು ಸಮಸ್ಯೆ ಉಂಟಾದರೂ ಕೂಡ ಯಾವುದೇ ಚಕಾರವೆತ್ತದೆ ಮೌನವಾಗಿದ್ದು ಅಲ್ಲದೆ ಕರಾವಳಿಗೆ ಪ್ರತ್ಯೇಕ ಮರಳು ನೀತಿಯನ್ನು ತರುವಲ್ಲಿ ವೈಫಲ್ಯ ಕಂಡಿದ್ದಾರೆ.

ಅಲ್ಲದೆ ಇನ್ನೂ ಹಲವಾರು ವಿಚಾರಗಳಲ್ಲಿ ಶಾಸಕ ಪ್ರಮೋದ್ ಮಧ್ವರಾಜ್ ಅವರು ಸಂಪೂರ್ಣ ವಿಫಲತೆಯನ್ನು ಕಂಡಿದ್ದಾರೆ ಎಂದು ಅವರು ಆರೋಪಿಸಿದರು.

ಸುದ್ದಿಗೋಷ್ಟಿಯಲ್ಲಿ ನಗರ ಬಿಜೆಪಿ ಅಧ್ಯಕ್ಷ ಪ್ರಭಾಕರ ಪೂಜಾರಿ, ಜಿಲ್ಲಾ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಶ್ರೀಶ ನಾಯಕ್, ನಗರ ಯುವ ಮೋರ್ಚಾ ಅಧ್ಯಕ್ಷ ಅಕ್ಷಿತ್ ಶೆಟ್ಟಿ ಹಾಗೂ ಇತರರು ಉಪಸ್ಥಿತರಿದ್ದರು.


Spread the love