ಪ್ಲಾಸ್ಟಿಕ್ ಬಳಕೆ ನಿಲ್ಲಿಸಲು ಜಿಲ್ಲಾಧಿಕಾರಿ ಮನವಿ

Spread the love

ಮ0ಗಳೂರು: ಪ್ಲಾಸ್ಟಿಕ್ ಕ್ಯಾರಿ ಬ್ಯಾಗ್ ಗಳು ಹಾಗೂ ದೈನಂದಿನ ಬಳಕೆಯಲ್ಲಿರುವ ಇತರೆ ಪ್ಲಾಸ್ಟಿಕ್ ವಸ್ತುಗಳು ಅಲ್ಫಾವಧಿ ಹಾಗೂ ಧೀರ್ಘಾವಧಿಯಲ್ಲಿ ಪರಿಸರಕ್ಕೆ ಹಾನಿಯನ್ನು ಮತ್ತು ಆರೋಗ್ಯಕ್ಕೆ ಅಪಾಯವನ್ನು ಉಂಟುಮಾಡಲು ಕಾರಣವಾಗಿರುತ್ತದೆ. ಭಾರತದ ಸಂವಿಧಾನದ ಕಲಂ -48ಎ ಅನ್ವಯ ಪ್ರತೀ ರಾಜ್ಯ ಸರ್ಕಾರವು ಪರಿಸರದ ಮಟ್ಟವನ್ನು ಉತ್ತಮ ಪಡಿಸುವ ಜವಬ್ದಾರಿಯನ್ನು ಹೊಂದಿರುತ್ತದೆ. ಪ್ಲಾಸ್ಟಿಕ್ ಕ್ಯಾರಿ ಬ್ಯಾಗ್, ಪ್ಲಾಸ್ಟಿಕ್ ಭಿತ್ತಿಪತ್ರ, ಪ್ಲಾಸ್ಟಿಕ್ ತೋರಣ, ಫ್ಲೆಕ್ಸ್, ಬಾವುಟ, ಪ್ಲಾಸ್ಟಿಕ್ ತಟ್ಟೆ, ಪ್ಲಾಸ್ಟಿಕ್ ಲೋಟ, ಪ್ಲಾಸ್ಟಿಕ್ ಚಮಚ, ಕ್ಲಿಂಗ್ ಫಿಲ್ಮ್ ಮತ್ತು ಪ್ಲಾಸ್ಟಿಕ್ ಹಾಳೆ ಮತ್ತು ಥರ್ಮಕೋಲ್ ನಿಂದ ತಯಾರಾದ ವಸ್ತುಗಳ ವ್ಯಾಪಕ ಬಳಕೆಯಿಂದಾಗಿ ಪರಿಸರಕ್ಕೆ ಹಾನಿ ಹಾಗೂ ಮಾನವ ಮತ್ತಿತರ ಪ್ರಾಣಿಗಳ ಆರೋಗ್ಯಕ್ಕೆ ಅಪಾಯ ಉಂಟಾಗುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿರುತ್ತದೆ.
ಪ್ಲಾಸ್ಟಿಕ್ ತ್ಯಾಜ್ಯಗಳು ಚರಂಡಿಗಳ, ಮೋರಿಗಳ ಮತ್ತು ಒಳಚರಂಡಿಗಳ ಸರಾಗ ಹರಿವಿಗೆ ತಡೆಯನ್ನು ಉಂಟುಮಾಡುವುದರ ಜೊತೆಗೆ ನಗರ ಪ್ರದೇಶಗಳಲ್ಲಿನ ಜಲಕಾಯಗಳ ಮಾಲಿನ್ಯಕ್ಕೆ ಕಾರಣವಾಗುತ್ತಿರುವುದನ್ನು ಗಮನಿಸಲಾಗಿದೆ ಹಾಗೂ ಮಣ್ಣಿನಡಿಯಲ್ಲಿ ಸೇರಿಕೊಂಡಿರುವ ಈ ಪ್ಲಾಸ್ಟಿಕ್ ಗಳು ಮಣ್ಣಿನಲ್ಲಿ ಕರಗದೆ ಮಳೆಯ ನೀರು ಭೂಮಿಯಲ್ಲಿ ಇಂಗುವಿಕೆಗೆ ತಡೆಯಾಗಿರುತ್ತದೆ. ಆದುದರಿಂದ ಇಂತಹ ಸಮಸ್ಯೆಗಳು ಪುನರವರ್ತನೆಯಾಗದಂತೆ ಪರಿಣಾಮಕಾರಿಯಾಗಿ ತಡೆಯುವ ದೃಷ್ಟಿಯಿಂದ ರಾಜ್ಯ ಸರ್ಕಾರಕ್ಕೆ ಪ್ರದತ್ತವಾಗಿರುವ ಪರಿಸರ (ಸಂರಕ್ಷಣೆ ) ಕಾಯಿದೆ 1986ರ ಸೆಕ್ಷನ್ 5 ರಲ್ಲಿನ ಅಧಿಕಾರವನ್ನು ಚಲಾಯಿಸಿ ಪ್ಲಾಸ್ಟಿಕ್ ಕ್ಯಾರಿ ಬ್ಯಾಗ್, ಪ್ಲಾಸ್ಟಿಕ್ ಭಿತ್ತಿಪತ್ರ, ಪ್ಲಾಸ್ಟಿಕ್ ತೋರಣ, ಫ್ಲೆಕ್ಸ್, ಬಾವುಟ, ಪ್ಲಾಸ್ಟಿಕ್ ತಟ್ಟೆ, ಪ್ಲಾಸ್ಟಿಕ್ ಲೋಟ, ಪ್ಲಾಸ್ಟಿಕ್ ಚಮಚ, ಕ್ಲಿಂಗ್ ಫಿಲ್ಮ್ ಮತ್ತು ಪ್ಲಾಸ್ಟಿಕ್ ಹಾಳೆ ಮತ್ತು ಥರ್ಮಕೋಲ್ ಮತ್ತು ಪ್ಲಾಸ್ಟಿಕ್ ಮೈಕ್ರೋ ಬೀಡ್ಸ್ ನಿಂದ ತಯಾರಾದಂತಹ ಮೇಲ್ಕಂಡ ವಸ್ತುಗಳ ತಯಾರಿಕೆ, ಸರಬರಾಜು ಮತ್ತು ಬಳಕೆಯನ್ನು ಸರ್ಕಾರದ ಸಂಖ್ಯೆ ಅಪಜೀ 17 ಇಪಿಸಿ 2012 ಬೆಂಗಳೂರು, ದಿನಾಂಕ 11-03-2016 ರಿಂದ ನಿಷೇಧಿಸಿ ಜ್ಯಾರಿಗೆ ಬಂದಿರುತ್ತದೆ.
ಈ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ನಗರಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಮೇಲ್ಕಂಡ ಪ್ಲಾಸ್ಟಿಕ್ ಗೆ ಸಂಬಂಧಿಸಿದ ಸಾಮಾಗ್ರಿಗಳ ತಯಾರಿಕೆ, ಸರಬರಾಜು ಮತ್ತು ಬಳಕೆಯನ್ನು ನಿಷೇಧಿಸಲಾಗಿರುವುದರಿಂದ ಪ್ಲಾಸ್ಟಿಕ್ ಗೆ ಸಂಬಂಧಿಸಿದ ಸಾಮಾಗ್ರಿಗಳ ತಯಾರಿಕೆ ಮತ್ತು ಬಳಕೆಯಲ್ಲಿ ತಯಾರಕರು, ವಿತರಕರು ಈ ವೃತ್ತಿಯನ್ನು ಮುಂದುವರಿಸಿದಲ್ಲಿ ಅಂತಹ ಸಂಸ್ಥೆ, ಮಳಿಗೆ, ಅಂಗಡಿಗಳ ಮೇಲೆ ನಗರ ಸ್ಥಳೀಯ ಸಂಸ್ಥೆಯ ಅಧಿಕಾರಿಗಳು ದಾಳಿ ಮಾಡಿ ವಸ್ತುಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುವುದು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಪ್ಲಾಸ್ಟಿಕ್ ತೋರಣ, ಫ್ಲೆಕ್ಸ್, ಪ್ಲಾಸ್ಟಿಕ್ ಬಾವುಟಗಳನ್ನು ಕಟ್ಟಿದ್ದರೆ ಸಮರೋಪಾಧಿಯಲ್ಲಿ ತೆರವುಗೊಳಿಸಲಾಗುವುದು ಈ ರೀತಿಯ ದಾಳಿ ಮತ್ತು ತೆರವು ಪ್ರಕ್ರಿಯೆಯನ್ನು ನಗರ ಸ್ಥಳೀಯ ಸಂಸ್ಥೆಗಳಲ್ಲಿ ಈಗಾಗಲೇ ಪ್ರಾರಂಭಿಸಲಾಗಿದ್ದು, ನಿರಂತರವಾಗಿ ಕಾರ್ಯ ರೂಪದಲ್ಲಿರುತ್ತದೆ. ಆದುದರಿಂದ ಸಾರ್ವಜನಿಕರು ಮೇಲ್ಕಂಡ ಪ್ಲಾಸ್ಟಿಕ್ ಸಾಮಾಗ್ರಿಗಳ ಬಳಕೆಯನ್ನು ನಿಲ್ಲಿಸಿ ಬದಲಿ ವ್ಯವಸ್ಥೆಯಾಗಿ ಬಟ್ಟೆ, ರೆಕ್ಸಿನ್, ಪೇಪರ್ ಗಳಿಂದ ಮಾಡಿದ ಸಾಮಾಗ್ರಿಗಳನ್ನು ಉಪಯೋಗಿಸುವಂತೆ ಹಾಗೂ ಈ ನಿಟ್ಟಿನಲ್ಲಿ ಜಿಲ್ಲಾಡಳಿತಕ್ಕೆ ಸಾರ್ವಜನಿಕ ಸಹಕಾರ ನೀಡುವಂತೆ ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Spread the love