ಫೆಬ್ರವರಿ 7 ರಿಂದ 28 ರವರೆಗೆ ದಡಾರ, ರುಬೆಲ್ಲಾ ಚುಚ್ಚುಮದ್ದು ಅಭಿಯಾನ

Spread the love

ಫೆಬ್ರವರಿ 7 ರಿಂದ 28 ರವರೆಗೆ ದಡಾರ, ರುಬೆಲ್ಲಾ ಚುಚ್ಚುಮದ್ದು ಅಭಿಯಾನ
ಉಡುಪಿ : ಜಿಲ್ಲೆಯಾದ್ಯಂತ ಫೆಬ್ರವರಿ 7 ರಿಂದ 28 ರವರೆಗೆ 9 ತಿಂಗಳಿಂದ 15 ವರ್ಷದೊಳಗಿನ ಮಕ್ಕಳಿಗೆ ರೋಗ ನಿರೋಧಕ ದಡಾರ, ರುಬೆಲ್ಲಾ ಚುಚ್ಚು ಮದ್ದು ಹಾಕುವ ಕಾರ್ಯಕ್ರಮ ನಡೆಯಲಿದೆ ಎಂದು ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಹೇಳಿದರು.
ಅವರಿಂದು ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ದಡಾರ, ರುಬೆಲ್ಲಾ ಚುಚ್ಚುಮದ್ದು ಅಭಿಯಾನದ ಜಿಲ್ಲಾ ಮಟ್ಟದ ಲಸಿಕಾ ಕಾರ್ಯಪಡೆ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಜಿಲ್ಲೆಯ ಒಂದೂ ಮಗುವು ಈ ಅಭಿಯಾನದಿಂದ ಹೊರಗುಳಿಯದಂತೆ ಕ್ರಿಯಾ ಯೋಜನೆ ರೂಪಿಸಿ ರೋಗ ನಿರೋಧಕ ಲಸಿಕೆ ಹಾಕಿಸಿ ಎಂದು ಜಿಲ್ಲಾಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದ ಎಲ್ಲ ಇಲಾಖಾಧಿಕಾರಿಗಳಿಗೆ ಸೂಚಿಸಿದರು.
ಚುಚ್ಚುಮದ್ದು ಕಡ್ಡಾಯ ಹಾಕಿಸುವ ಬಗ್ಗೆ ಹೆತ್ತವರು ಸಮ್ಮತಿಸುವುದಿಲ್ಲ ಎಂದು ಖಾಸಗಿ ಶಾಲೆಯ ಪ್ರತಿನಿಧಿಯೊಬ್ಬರು ಜಿಲ್ಲಾಧಿಕಾರಿಗಳ ಗಮನ ಸೆಳೆದಾಗ, ಹೆತ್ತವರ ಸಭೆ ಕರೆದು ಡಾಕ್ಟರ್‍ಗಳ ಮೂಲಕ ಪ್ರತಿಯೊಬ್ಬರಿಗೂ ಸ್ಪಷ್ಟ ಸಂದೇಶ ತಲುಪಿಸಿ ಎಂದ ಜಿಲ್ಲಾಧಿಕಾರಿಗಳು ಆರೋಗ್ಯಕ್ಕೆ ಸಂಬಂಧಿಸಿದ ಪ್ರಮುಖ ನಿರ್ಧಾರ ಇದಾಗಿದ್ದು ಎಲ್ಲರೂ ಇದರಲ್ಲಿ ಕಡ್ಡಾಯವಾಗಿ ಪಾಲ್ಗೊಂಡು ಅಭಿಯಾನವನ್ನು ಯಶಸ್ವಿಗೊಳಿಸಬೇಕೆಂದರು.
ಮಣಿಪಾಲ ಆಸ್ಪತ್ರೆಯ ಮಕ್ಕಳ ತಜ್ಞ ಡಾ ಮುರಳೀಧರ ಪೈ ಅವರು ಮಾತನಾಡಿ, ರೋಗ ನಿರೋಧಕ ಶಕ್ತಿಯನ್ನು ಮಕ್ಕಳಲ್ಲಿ ತುಂಬುವ ಉಪಯುಕ್ತ ಚುಚ್ಚುಮದ್ದು ಕಾರ್ಯಕ್ರಮ ಇದಾಗಿದ್ದು, ಪ್ರತಿಯೊಬ್ಬ ಹೆತ್ತವರು ಕಾರ್ಯಕ್ರಮದ ಗಂಭೀರತೆಯನ್ನು ಅರಿತುಕೊಂಡು ರೋಗ ನಿರೋಧಕ ಲಸಿಕಾ ಕಾರ್ಯಕ್ರಮ ಯಶಸ್ವಿಯಾಗಿಸಲು ನೆರವಾಗಬೇಕೆಂದರು.
ಸರ್ವೇಕ್ಷಣಾ ವೈದ್ಯಾಧಿಕಾರಿ ಡಾ ಸತೀಶ್ಚಂದ್ರ ಮಾತನಾಡಿ, ದೇಶದಲ್ಲಿ ದಡಾರ ಮತ್ತು ರುಬೆಲ್ಲಾ ಹೆಚ್ಚಾಗುತ್ತಿದ್ದು, ವೈರಸ್ ಶಕ್ತಿಯುತವಾಗಿರುವುದರಿಂದ ಲಸಿಕೆ ಹಾಕಿಸಿ ಮಕ್ಕಳನ್ನು ಸಂರಕ್ಷಿಸಿಕೊಳ್ಳಿ ಎಂದರು. ಮೂರು ವಾರಗಳ ಕಾಲ ನಡೆಯುವ ಈ ಅಭಿಯಾನದಲ್ಲಿ ಮೊದಲ ವಾರ ಎಲ್ಲ ಶಾಲೆಗಳಲ್ಲಿ, ಮುಂದಿನವಾರ ಅಂಗನವಾಡಿಗಳಲ್ಲಿ, ಮೂರನೇ ವಾರ ಲಸಿಕೆ ಹಾಕಲ್ಪಡುವುದರಿಂದ ಬಿಟ್ಟು ಹೋಗಿರುವ ಮಕ್ಕಳನ್ನು ಪತ್ತೆ ಹಚ್ಚಲು ಮೀಸಲಿಡುವುದಾಗಿ ಆರ್ ಸಿ ಎಚ್ ಡಾ ರಾಮ ಅವರು ಸಭೆಗೆ ವಿವರಿಸಿದರು.
ಮುಖ್ಯವಾಗಿ ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕಾರ್ಮಿಕ ಇಲಾಖೆ, ಧಾರ್ಮಿಕ ದತ್ತಿ ಇಲಾಖೆ ಮೂಲಕ ಎಲ್ಲ ಮಕ್ಕಳನ್ನು ತಲುಪುವಂತೆ ಮಾಡಬೇಕು ಎಂದು ಅವರು ಹೇಳಿದರು.
ಡಿಎಚ್‍ಒ ಡಾ ರೋಹಿಣಿ, ಮಣಿಪಾಲ ಆಸ್ಪತ್ರೆಯ ಮಕ್ಕಳ ತಜ್ಞ ಡಾ ಲೆಸ್ಲಿ, ಡಾ ಸ್ನೇಹ ಸಮುದಾಯ ಆರೋಗ್ಯ ವಿಭಾಗ , ರೊಟೇರಿಯನ್ ಗಳಾದ ಐ ಕೆ ಜಯಚಂದ್ರ ಮುಂತಾದವರು ಉಪಸ್ಥಿತರಿದ್ದರು.


Spread the love