ಫೆ.26-27 ರಂದು ಬೆಂಗಳೂರಿನಲ್ಲಿ ಬೃಹತ್ ಉದ್ಯೋಗ ಮೇಳ

Spread the love

ಫೆ.26-27 ರಂದು ಬೆಂಗಳೂರಿನಲ್ಲಿ ಬೃಹತ್ ಉದ್ಯೋಗ ಮೇಳ

ಮಂಗಳೂರು: ಯುವಜನರು ಸೇರಿದಂತೆ ಪದವಿ, ಇಂಜನಿಯರಿಂಗ್, ಡಿಪ್ಲೋಮಾ ಹಾಗೂ ವೃತ್ತಿಪರ ಕೋರ್ಸ್ಗಳನ್ನು ಪೂರ್ಣಗೊಳಿಸಿರುವವರಿಗೆ ಉದ್ಯೋಗ ಅವಕಾಶ ಕಲ್ಪಿಸುವ ಬೃಹತ್ ಯುವ ಸಮೃದ್ಧಿ ಸಮ್ಮೇಳ ಇದೇ ತಿಂಗಳ 26ರಿಂದ ಎರಡು ದಿನಗಳ ಕಾಲ ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯಲಿದೆ.

ಕೌಶಲ್ಯಾಭಿವೃದ್ದಿ ಹಾಗೂ ಜೀವನೋಪಾಯ ಇಲಾಖೆ ಸಹಭಾಗಿತ್ವದಲ್ಲಿ ನಡೆಯಲಿರುವ ಯುವ ಸಮೃದ್ಧಿ ಸಮ್ಮೇಳನದ ಉದ್ಯೋಗ ಮೇಳ ಕುರಿತು ಬುಧವಾರ ವಿಧಾನಸೌಧದ ಸಮ್ಮೇಳನದ ಸಭಾಂಗಣದಲ್ಲಿ ಸಚಿವರಾದ ಡಾ. ಶರಣ ಪ್ರಕಾಶ್ ಪಾಟೀಲ್ ಹಾಗೂ ಐಟಿ- ಬಿಟಿ ಸಚಿವರಾದ ಪ್ರಿಯಾಂಕ್ ಖರ್ಗೆ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ಮಾತನಾಡಿ, ಇದೇ ತಿಂಗಳ 26 ಮತ್ತು 27ರಂದು ಬೆಂಗಳೂರಿನ ಅರಮನೆಯಲ್ಲಿ ಯುವ ಸಮೃದ್ಧಿ ಸಮ್ಮೇಳನ ಎಂಬ ಹೆಸರಿನಡಿ ಉದ್ಯೋಗ ಮೇಳವನ್ನು ಆಯೋಜಿಸಲಾಗಿದೆ. ಪದವಿ, ಎಂಜಿನಿಯರಿಂಗ್, ಡಿಪೆÇ್ಲಮಾ, ಐಟಿಐ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸ್ಗಳನ್ನು ಮುಗಿಸಿರುವ ಉದ್ಯೋಗ ಆಕಾಂಕ್ಷಿಗಳಿಗೆ ಉದ್ಯೋಗ ಒದಗಿಸಿಕೊಡುವ ಮೇಳ ಇದಾಗಿದೆ ಎಂದು ಹೇಳಿದರು.

ಈಗಾಗಲೇ ಈ ಮೇಳಕ್ಕೆ ರಾಜ್ಯಾದ್ಯಂತ ಒಟ್ಟು 31 ಸಾವಿರ ಅರ್ಹ ಅಭ್ಯರ್ಥಿಗಳು ಆನ್ಲೈನ್ ರಿಜಿಸ್ಟರ್ ಮೂಲಕ ತಮ್ಮ ಹೆಸರುಗಳನ್ನು ನೋಂದಣಿ ಮಾಡಿಕೊಂಡಿದ್ದಾರೆ. ಇನ್ನು ಹೆಚ್ಚಿನ ಸಂಖ್ಯೆಯಲ್ಲಿ ನೋಂದಣಿ ಮಾಡಿಕೊಳ್ಳುವ ಸಾಧ್ಯತೆ ಇದೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು.

ಉದ್ಯೋಗ ಮೇಳದಲ್ಲಿ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಹೆಸರಾಂತ 500ಕ್ಕೂ ಹೆಚ್ಚು ಕಂಪನಿಗಳು ಪಾಲ್ಗೊಳ್ಳಲಿವೆ. ಅಂದಾಜು ಒಂದು ಲಕ್ಷ ಹುದ್ದೆಗಳು ನಮ್ಮ ಬಳಿ ಲಭ್ಯವಿದೆ ಎಂಬ ಮಾಹಿತಿಯನ್ನು ನೀಡಿದ್ದಾರೆ. ಶೈಕ್ಷಣಿಕ ಅರ್ಹತೆಗೆ ತಕ್ಕಂತೆ ಉದ್ಯೋಗಗಳನ್ನು ಒದಗಿಸಿಕೊಡಲು ಇದು ವೇದಿಕೆಯಾಗಲಿದೆ. ಹೆಚ್ಚಿನ ಸಂಖ್ಯೆಯಲ್ಲಿ ಇದನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದು ಸಚಿವರು ಮನವಿ ಮಾಡಿದರು.

ಉದ್ಯೋಗ ಮೇಳದಲ್ಲಿ ಅನುಕೂಲ ಕಲ್ಪಿಸುವ ಸದುದ್ದೇಶದಿಂದ 600ಕ್ಕೂ ಹೆಚ್ಚು ಸ್ಟಾಲ್ ಗಳನ್ನು ಹಾಕಲಾಗಿದೆ. ಅಭ್ಯರ್ಥಿಗಳು ಪ್ರತಿಯೊಂದು ಸ್ಟಾಲಿಗೂ ಭೇಟಿ ನೀಡಿ, ತಮ್ಮ ಶೈಕ್ಷಣಿಕ ಅರ್ಹತೆಗೆ ಅನುಗುಣವಾಗಿ ಎಲ್ಲಿ ಯಾವ ಹುದ್ದೆಗಳು ಖಾಲಿ ಇವೆ ಎಂಬುದರ ಕುರಿತು ಮಾಹಿತಿ ಪಡೆಯಬಹುದು. ಇದಕ್ಕಾಗಿ ಆಯಾ ಕಂಪನಿಗಳ ನುರಿತ ತಜ್ಞರು, ಪರಿಣಿತರು ಇರುತ್ತಾರೆ. ಉದ್ಯೋಗವನ್ನರಸಿ ಬರುವವರಿಗೆ ಸಂಪೂರ್ಣವಾದ ಮಾಹಿತಿ ಲಭ್ಯವಿರಲಿದೆ ಎಂದು ಪಾಟೀಲ್ ಮಾಹಿತಿ ನೀಡಿದರು.

ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರ ಅಧಿಕಾರ ಅವಧಿಯಲ್ಲಿ ಬೃಹತ್ ಉದ್ಯೋಗ ಮೇಳವನ್ನು ನಡೆಸಲಾಗಿತ್ತು. ಪ್ರಸ್ತುತ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಾಡಿನ ಯುವ ಜನತೆಗೆ ಉದ್ಯೋಗ ಒದಗಿಸಿಕೊಡಲು ಉದ್ಯೋಗ ಮೇಳ ಆರಂಭಿಸಬೇಕೆಂದು ಸೂಚನೆ ಕೊಟ್ಟಿದ್ದರು. ಇದು ಬೃಹತ್ ಮೇಳವಾಗಲಿದ್ದು, ಬೇರೆ ಯಾವುದೇ ರಾಜ್ಯದಲ್ಲೂ ಇಂಥ ಮೇಳ ನಡೆಯುವುದಿಲ್ಲ ಎಂದು ಪಾಟೀಲ್ ಮೆಚ್ಚುಗೆ ವ್ಯಕ್ತಪಡಿಸಿದರು.

ಉದ್ಯೋಗ ಮೇಳದಲ್ಲಿ ಯಾರಿಗೆ ಕೆಲಸ ಸಿಗುವುದಿಲ್ಲವೋ ಅಂಥವರಿಗೆ ತರಬೇತಿ ನೀಡುವ ಉದ್ದೇಶವನ್ನು ಇಟ್ಟುಕೊಂಡಿದ್ದೇವೆ. ತರಬೇತಿ ಪಡೆದವರು ಮುಂದಿನ ದಿನಗಳಲ್ಲಿ ಉದ್ಯೋಗಗಿಟ್ಟಿಸಿಕೊಳ್ಳಬಹುದು. ಈ ತರಬೇತಿ ನೀಡಲು ನುರಿತ ತಜ್ಞರು ಮುಂದೆ ಬಂದಿದ್ದಾರೆ ಎಂದರು.

ಉದ್ಯೋಗ ಮೇಳದಲ್ಲಿ ಹೆಸರು ನೋಂದಣಿ ಮಾಡಿಕೊಂಡವರು ಇಂತಿಂತಹ ಸ್ಟಾಲ್ಗಳಿಗೆ ಹೋಗಲು ಅವರಿಗೆ ಪ್ರತ್ಯೇಕ ಮೆಸೇಜ್ ಕಳಿಸಲಾಗುವುದು. ಯಾರೂ ಕೂಡ ತೊಂದರೆ ಅನುಭವಿಸಬಾರದು ಎಂಬ ಕಾರಣಕ್ಕಾಗಿ ಇಲಾಖೆ ವತಿಯಿಂದಲೇ ಇದನ್ನು ನಿರ್ವಹಣೆ ಮಾಡುತ್ತಿದ್ದೇವೆ. ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಉದ್ಯೋಗ ಪಡೆದುಕೊಂಡರೆ ಸಾರ್ಥಕವಾಗುತ್ತದೆ ಎಂದು ಪಾಟೀಲ್ ಸಲಹೆ ಮಾಡಿದರು.

ದೇಶದಲ್ಲಿ ದೊಡ್ಡ ಪ್ರಮಾಣದ ಉದ್ಯೋಗ ಮೇಳ ನಡೆದಿದ್ದರೆ ಅದು ನಮ್ಮ ಸರ್ಕಾರದಿಂದ ಮಾತ್ರ. ಇಲ್ಲಿರುವ ಮಾನವ ಸಂಪನ್ಮೂಲ, ಮೂಲ ಸೌಕರ್ಯಗಳು ಸೇರಿದಂತೆ ಹಲವಾರು ಕಾರಣಗಳಿಂದ ದೊಡ್ಡ ದೊಡ್ಡ ಕಂಪನಿಗಳು ಮುಂದೆ ಬಂದಿವೆ. ಯುವಜನತೆ ಇದನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು ಸಚಿವರಾದ ಪ್ರಿಯಾಂಕ್ ಖರ್ಗೆ ಕರೆ ನೀಡಿದರು.

ನಾವು ಕೇವಲ ಉದ್ಯೋಗ ಮಾತ್ರ ಕೊಡುತ್ತಿಲ್ಲ. ಅವರ ಸ್ಕಿಲ್ ಗ್ಯಾಪ್ಗಳನ್ನು ಸರಿಮಾಡಲು ನಾವು ಸೆಂಟರ್ ಗಳನ್ನು ಮಾಡಿಕೊಂಡಿದ್ದೇವೆ. ಇಲ್ಲಿ ನೋಂದಣಿ ಮಾಡಿಕೊಂಡವರನ್ನು ಟ್ರ್ಯಾಕ್ ಮಾಡಿ ಉದ್ಯೋಗ ಕೊಡಿಸುವ ಪ್ರಯತ್ನ ಮಾಡುತ್ತೇವೆ ಎಂದು ಪ್ರಿಯಾಂಕ್ ಖರ್ಗೆ ಮಾಹಿತಿ ನೀಡಿದರು.

ಯುವ ಸಮೃದ್ದಿ ಸಮ್ಮೇಳನವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಉದ್ಘಾಟಿಸಲಿದ್ದಾರೆ. ಸಮ್ಮೇಳನಕ್ಕೆ ಬರುವವರಿಗೆ ಉಚಿತ ಊಟದ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ ಎಂದು ತಿಳಿಸಿದರು.

ಉಚಿತ ಬಸ್ ವ್ಯವಸ್ಥೆ: ಉದ್ಯೋಗ ಮೇಳಕ್ಕಾಗಿ ರಾಜ್ಯದ ವಿವಿಧ ಭಾಗಗಳಿಂದ ಬರುವ ಅಭ್ಯರ್ಥಿಗಳಿಗೆ ಅನುಕೂಲ ಕಲ್ಪಿಸಲು ಮೆಜೆಸ್ಟಿಕ್ ರೈಲ್ವೆ ಹಾಗು ಬಸ್ ನಿಲ್ದಾಣಗಳಿಂದ ಮತ್ತು ಶಾಂತಿ ನಗರ ಬಸ್ ನಿಲ್ದಾಣದಿಂದ ಉಚಿತ ಬಸ್ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಉದ್ಯೋಗ ಮೇಳಕ್ಕಾಗಿ ವಿಶೇಷ ಬಸ್ಗಳು ಬರಲಿವೆ.

ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಉಮಾ ಮಹಾದೇವನ್, ಕರ್ನಾಟಕ ಕೌಶಲ್ಯಾಭಿವೃದ್ದಿ ನಿಗಮದ ವ್ಯವಸ್ಥಾಪಕ ನಿದೇರ್ಶಕಿ ಎಂ.ಕನಗವಳ್ಳಿ ಉಪಸ್ಥಿತರಿದ್ದರು.


Spread the love