ಬಿಜೆಪಿಗರಿಗೆ ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಇಲ್ಲ: ದಿನೇಶ್ ಗುಂಡೂರಾವ್

Spread the love

ಬಿಜೆಪಿಗರಿಗೆ ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಇಲ್ಲ: ದಿನೇಶ್ ಗುಂಡೂರಾವ್

ಕುಂದಾಪುರ: ಕಳೆದ ಐದು ವರ್ಷಗಳಿಂದ ಬಿಜೆಪಿಗರು ಕಾಂಗ್ರೆಸ್ ಮುಕ್ತ ಭಾರತ ಮಾಡುತ್ತೇವೆ ಎಂದು ತಿರುಗುತ್ತಿದ್ದಾರೆ. ಆದರೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಆಡಳಿತ ಪಕ್ಷ ಹಾಗೂ ವಿರೋಧ ಪಕ್ಷಗಳಿರಬೇಕು. ಒಂದು ಪಕ್ಷವನ್ನು ಮುಗಿಸುತ್ತೇವೆ ಎಂಬ ಮಾತು ಈ ದೇಶದಲ್ಲಿ ಯಾರ ಬಾಯಲ್ಲೂ ಬರಬಾರದು. 70 ವರ್ಷ ಇತಿಹಾಸ ಇರುವ ಕಾಂಗ್ರೆಸ್ ಪಕ್ಷ ಎಂದೂ ಬಿಜೆಪಿ ಮುಕ್ತ ಭಾರತ, ಜನತಾ ದಳ, ಕಮ್ಯೂನಿಸ್ಟ್ ಮುಕ್ತ ಭಾರತ ಮಾಡುತ್ತೇವೆಂದು ಕರೆ ಕೊಟ್ಟಿಲ್ಲ. ನಮಗೆ ಪ್ರಜಾಪ್ರಭುತ್ವದ ಮೇಲೆ ಅತೀವ ನಂಬಿಕೆ ಇದೆ. ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಇಲ್ಲದ ಬಿಜೆಪಿಗರು ಕಾಂಗ್ರೆಸ್ ಮುಕ್ತ ಭಾರತ ಮಾಡುತ್ತೇವೆ ಎಂದು ಕನಸು ಕಾಣುತ್ತಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಕಿಡಿಕಾರಿದರು.

ಅವರು ಭಾನುವಾರ ಸಂಜೆ ಬಗ್ವಾಡಿ ಎನ್‍ಟಿಎಸ್ ಸಾಗರ್ ಪ್ಯಾಲೇಸ್‍ನಲ್ಲಿ ನಡೆದ ಬ್ಲಾಕ್ ಕಾಂಗ್ರೆಸ್ ವಂಡ್ಸೆ ಇದರ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಪ್ರದೀಪ್ ಕುಮಾರ್ ಶೆಟ್ಟಿ ಗುಡಿಬೆಟ್ಟು ಇವರ ಪ್ರದಪ್ರಧಾನ ಸಮಾರಂಭ ಮತ್ತು ಪದಾಧಿಕಾರಿಗಳ ಅಧಿಕಾರ ಸ್ವೀಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಹಿಂದಿನ ಚುನಾವಣೆಯಲ್ಲಿ ಕರಾವಳಿ ಭಾಗದಲ್ಲಿ ಕಾಂಗ್ರೆಸ್‍ಗೆ ಭಾರೀ ಹಿನ್ನಡೆಯಾಗಿತ್ತು. ಹಿಂದಿನ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಜನಪರ ಕಾರ್ಯಗಳನ್ನು ಮಾಡಿತ್ತು. ಭ್ರಷ್ಟಾಚಾರರಹಿತ ಆಡಳಿತ ಕೊಟ್ಟು ರಾಜ್ಯದ ಜನರ ಪ್ರಾಮಾಣಿಕ ಸೇವೆ ಮಾಡಿತ್ತು. ನಮಗೆ ಸಾಕಷ್ಟು ನಿರೀಕ್ಷೆಗಳಿದ್ದವು. ಆದರೆ ಬಿಜೆಪಿಯವವರು ಭಾವನಾತ್ಮಕ ವಿಚಾರಗಳನ್ನು, ಹಸಿಸುಳ್ಳುಗಳನ್ನು ಜನತೆಯ ಮುಂದಿಟ್ಟು ಚುನಾವಣೆಯನ್ನು ಎದುರಿಸಿದರು. ಬಿಜೆಪಿಗೆ ಅಧಿಕಾರ ಕೊಟ್ಟರೆ ಅಚ್ಚೇ ದಿನ್ ತರುತ್ತೇನೆ ಎಂದು ಮೋದಿ ಚುನಾವಣಾ ಪ್ರಚಾರ ಸಭೆಗಳಲ್ಲಿ ಭಾಷಣ ಮಾಡಿದ್ದರು. ಇಂದು ಮೋದಿ, ಅಮಿತ್ ಶಾ ಕರ್ನಾಟಕಕ್ಕೆ ಬಂದರೆ ಅಚ್ಛೇ ದಿನ್ ಬಗ್ಗೆ ಮಾತನಾಡಲ್ಲ. ಅವರು ಅಚ್ಛೇ ದಿನ್ ಮರೆತೇ ಬಿಟ್ಟಿದ್ದಾರೆ. ಮೋದಿಯ ಅಚ್ಛೇ ದಿನ್ ಇಂದು ಮಾಯವಾಗಿದೆ. ಮೋದಿ ಮಾತಿನ ಮಾಯಲೋಕವನ್ನೇ ಸೃಷ್ಠಿ ಮಾಡಿದ್ದಾರೆಯೇ ಹೊರತು ಅದನ್ನು ಕಾರ್ಯರೂಪಕ್ಕೆ ತಂದಿಲ್ಲ ಎಂದು ಮೋದಿ ನೇತೃತ್ವದ ಬಿಜೆಪಿ ಸರ್ಕಾರದ ವಿರುದ್ದ ಗುಂಡುರಾವ್ ವಾಗ್ದಾಳಿ ನಡೆಸಿದರು.

ಚುನಾವಣಾ ಪೂರ್ವದಲ್ಲಿ ಬಿಜೆಪಿ ಕೊಟ್ಟ ಭರವಸೆಗಳಲ್ಲಿ ಒಂದನ್ನೂ ಈಡೇರಿಸಿಲ್ಲ. ಉದ್ಯೋಗ ಸೃಷ್ಠಿ ಮಾಡಿಲ್ಲ. ಸುಳ್ಳು ಅಂಕಿಅಂಶಗಳನ್ನು ಕೊಟ್ಟು ಕೈತೊಳೆದುಕೊಳ್ಳುತ್ತಿದ್ದಾರೆ. ಈ ದೇಶದ ಪ್ರಧಾನಿಯಾಗಿದ್ದ ಮನಮೋಹನ್ ಸಿಂಗ್ ಎಂದೂ ಪಾಕಿಸ್ತಾನಕ್ಕೆ ಹೋಗಿರಲಿಲ್ಲ. ಆದರೆ ಪ್ರಧಾನಿ ಮೋದಿ ಪಾಕಿಸ್ತಾನಕ್ಕೆ ಹೋಗಿ ಅಲ್ಲಿಯ ಮುಖಂಡರನ್ನು ತಬ್ಬಿಕೊಂಡು, ಬಿರಿಯಾನಿ ತಿಂದು ಬಂದಿದ್ದಾರೆ. ಐಸಿಸ್‍ನವರು ನಮ್ಮ ದೇಶಕ್ಕೆ ಬರಲು ಅನುವು ಮಾಡಿಕೊಡುವ ಮೋದಿ ಸರ್ಕಾರ ಕಾಂಗ್ರೆಸ್‍ಗೆ ದೇಶಪ್ರೇಮದ ಮಾಠ ಮಾಡುತ್ತಿದೆ. ದೇಶಪ್ರೇಮ ಬಿಜೆಪಿಯ ಆಸ್ತಿಯಲ್ಲ. ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಪಕ್ಷ ನಮ್ಮದು ಎಂದು ಗುಂಡುರಾವ್ ಕಾಂಗ್ರೆಸ್ ಪಕ್ಷದ ಸಾಧನೆಗಳನ್ನು ಜನರ ಮುಂದಿಟ್ಟರು.

ಬಿಜೆಪಿಗೆ ಚುನಾವಣೆ ಬಂದಾಗ ಮಾತ್ರ ರಾಮನ ನೆನಪಾಗಿ ರಾಮಮಂದಿರ ಕಟ್ಟಬೇಕು ಎನ್ನುವ ನಾಟಕವಾಡುತ್ತಾರೆ. ಆರು ವರ್ಷ ವಾಜುಪೇಯಿ, ಐದು ವರ್ಷ ಮೋದಿ ಪ್ರಧಾನಿಯಾಗಿದ್ದರು. ಈ ಹನ್ನೊಂದು ವರ್ಷ ಕೇಂದ್ರದಲ್ಲಿ ಆಡಳಿತ ನಡೆಸಿದ ಬಿಜೆಪಿಗೆ ರಾಮಮಂದಿರ ಕಟ್ಟಲು ಸಾಧ್ಯವಾಗಿಲ್ಲ ಎಂದರೆ ಬಿಜೆಪಿಗರಿಗೆÉ ಏನು ಬದ್ದತೆ ಇದೆ ಎಂದು ಗುಂಡುರಾವ್ ಪ್ರಶ್ನಿಸಿದರು.

ಸುಳ್ಳುಗಾರ ಎಂದು ಒಪ್ಪಿಕೊಳ್ಳಿ: ಗೋಪಾಲ ಪೂಜಾರಿ
ನಾನು ಹಿಂದೆ ತಂದ ಕಾಮಗಾರಿಗಳಿಗೆ ಈಗಿನ ಶಾಸಕರು ತನ್ನ ಪರಿಶ್ರಮ ಎಂದು ಗುದ್ದಲಿ ಪೂಜೆ ಮಾಡಿ ಪ್ರಚಾರ ನಡೆಸುತ್ತಿದ್ದಾರೆ. ನಾನು ತಂದ ಕಾಮಗಾರಿಗಳ ಬಗ್ಗೆ ದಾಖಲೆ ನೀಡುತ್ತೇನೆ. ವಿಮಾನ ನಿಲ್ದಾಣ, ಐದು ನದಿಗಳ ಜೋಡಣೆ, ಮೆಡಿಕಲ್ ಕಾಲೇಜುಗಳನ್ನು ಸ್ಥಾಪಿಸುತ್ತೇನೆಂದ ಶಾಸಕರು ಮೊದಲು ಆ ಕೆಲಸ ಮಾಡಲಿ. ಸುಳ್ಳುಗಳನ್ನು ಆಮೇಲೆ ಪ್ರಚಾರ ಮಾಡಲಿ. ಬೈಂದೂರು ಜನತೆಗೆ ಕೊಟ್ಟ ಆಶ್ವಾಸನೆಗಳನ್ನು ಈಡೇರಿಸಿ, ಇಲ್ಲವಾದಲ್ಲಿ ತಾನೊಬ್ಬ ಸುಳ್ಳುಗಾರ ಎಂದು ಜನತೆಯ ಮುಂದೆ ಒಪ್ಪಿಕೊಳ್ಳಿ ಎಂದು ಮಾಜಿ ಶಾಸಕ ಗೋಪಾಲ ಪೂಜಾರಿ ಶಾಸಕ ಸುಕುಮಾರ ಶೆಟ್ಟರ ಆಶ್ವಾಸನೆಗಳನ್ನು ಪ್ರಸ್ತಾಪಿಸಿ ಲೇವಡಿ ಮಾಡಿದರು. ಈಗಲೂ ಕ್ಷೇತ್ರದ ಅಭಿವೃದ್ದಿಗಳ ಬಗ್ಗೆ ಸಚಿವರಲ್ಲಿ ಮಾತನಾಡಿ ಅನುದಾನ ತರಿಸುವ ಕೆಲಸ ಮಾಡುತ್ತಿದ್ದೇನೆ. ಗ್ರಾ.ಪಂ ರಸ್ತೆಗೆ ಹತ್ತು ಕೋಟಿ ಹಣವನ್ನು ತರಿಸುವ ಕೆಲಸ ಮಾಡಿದ್ದೇನೆ. ಗೋಪಾಲ ಪೂಜಾರಿ ಶಾಸಕ ಸ್ಥಾನದಲ್ಲಿರಲಿ, ಇಲ್ಲದಿರಲಿ. ಸರ್ಕಾರ ನಮ್ಮದಿದ್ದಾಗ ಜನರ ಕೆಲಸವನ್ನು ಶ್ರದ್ದೆಯಿಂದ ಮಾಡಿಕೊಡುತ್ತೇನೆ. ಮಾಡಿಕೊಡುವ ಕರ್ತವ್ಯ ನನ್ನದು. ನನ್ನ ಸೋಲಿನ ಸೇಡನ್ನು ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬೈಂದೂರು ಕ್ಷೇತ್ರದಲ್ಲಿ ಮುನ್ನಡೆ ತರುವ ಕೆಲಸವನ್ನು ಮತದಾರರು ಮಾಡಬೇಕು ಎಂದು ಮನವಿ ಮಾಡಿಕೊಂಡರು.

ಸಮಾರಂಭದಲ್ಲಿ ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ಕಾಂಗ್ರೆಸ್ ಜಿಲ್ಲಾ ಉಸ್ತುವಾರಿ ಜಿ.ಎ ಬಾವಾ, ಜಿಲ್ಲಾಧ್ಯಕ್ಷ ಅಶೋಕ್ ಕೊಡವೂರು, ನೂತನ ವಂಡ್ಸೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರದೀಪ್ ಪುಮಾರ್ ಶೆಟ್ಟಿ ಗುಡಿಬೆಟ್ಟು ಮಾತನಾಡಿದರು.

ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡುರಾವ್ ನೂತನವಾಗಿ ಆಯ್ಕೆಗೊಂಡ ವಂಡ್ಸೆ ಬ್ಲಾಕ್ ಪದಾಧಿಕಾರಿಗಳಿಗೆ ಪಕ್ಷದ ಧ್ವಜ ನೀಡಿ ಶಾಲು ಹೊದಿಸಿ ಅಧಿಕಾರ ಹಸ್ತಾಂತರಿಸಿದರು.

ಮುಖ್ಯತಿಥಿಗಳಾಗಿ ಎಮ್.ಎಸ್ ಮೊಹಮ್ಮದ್, ಶಿವರಾಮ ಶೆಟ್ಟಿ ಮಲ್ಯಾಡಿ, ಮುರುಳಿ ಶೆಟ್ಟಿ, ಎಂ.ಎ ಗಫೂರ್, ಗೀತಾ ವಾಗ್ಲೆ, ಯೂತ್ ಕಾಂಗ್ರೆಸ್‍ನ ಶೇಖರ್ ಪೂಜಾರಿ, ರಾಜು ಪೂಜಾರಿ, ಮದನ್ ಕುಮಾರ್ ಬೈಂದೂರು, ಮಂಜಯ್ಯ ಶೆಟ್ಟಿ ಆಲೂರು, ರಘುರಾಮ ಶೆಟ್ಟಿ, ಸಂತೋಷ್ ಕುಮಾರ್ ಶೆಟ್ಟಿ, ಪ್ರಸನ್ನ ಕುಮಾರ್ ಶೆಟ್ಟಿ, ಕೆಪಿಸಿಸಿ ಕಾರ್ಯದರ್ಶಿ ನವೀನ್ ಡಿಸೋಜಾ, ವಿನಂiÀiರಾಜ್ ಮೊದಲಾದವರು ಇದ್ದರು.

ಸಂಪಿಗೇಡಿ ಸಂಜೀವ ಶೆಟ್ಟಿ ಸ್ವಾಗತಿಸಿದರು, ಶರತ್ ಕುಮಾರ್ ಶೆಟ್ಟಿ ಧನ್ಯವಾದವಿತ್ತರು. ಪ್ರದೀಪ್ ಕುಮಾರ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.


Spread the love