ಭಾರತೀಯ ಮುಸ್ಲಿಂರ ರಕ್ತದ ಕಣಕಣದಲ್ಲೂ ದೇಶಪ್ರೇಮ ಇದೆ – ಮುಹಮ್ಮದ್ ಫಾಝಿಲ್ ರಝ್ವಿ

Spread the love

ಭಾರತೀಯ ಮುಸ್ಲಿಂರ ರಕ್ತದ ಕಣಕಣದಲ್ಲೂ ದೇಶಪ್ರೇಮ ಇದೆ – ಮುಹಮ್ಮದ್ ಫಾಝಿಲ್ ರಝ್ವಿ

ಉಡುಪಿ: ಭಾರತೀಯ ಮುಸ್ಲಿಮರು ತಮ್ಮ ಹೆತ್ತವರಂತೆ ಈ ನೆಲವನ್ನು ಪ್ರೀತಿಸುವವ ರಾಗಿದ್ದಾರೆ. ದೇಶಪ್ರೇಮ ಎಂಬುದು ನಮ್ಮ ರಕ್ತದ ಕಣಕಣದಲ್ಲೂ ಇದೆ. ಈ ದೇಶದ ರಕ್ಷಣೆಗೆ ಮುಸ್ಲಿಮರು ಸದಾ ಸಿದ್ಧರಿದ್ದಾರೆ ಎಂದು ಮುಸ್ಲಿ ಜಮಾಅತ್ ರಾಜ್ಯ ಉಪಾಧ್ಯಕ್ಷ ಡಾ. ಮುಹಮ್ಮದ್ ಫಾಝಿಲ್ ರಝ್ವಿ ಹೇಳಿದರು.

ಕರ್ನಾಟಕ ಮುಸ್ಲಿಂ ಜಮಾಅತ್ ಆಶ್ರಯದಲ್ಲಿ ಗುರುವಾರ ನಡೆದ ದ್ವೇಷ ಬಿಟ್ಟು ದೇಶ ಕಟ್ಟು ಧ್ಯೇಯವಾಕ್ಯದಡಿ ‘ಪ್ರಜಾ ಭಾರತ’ ರಾಜ್ಯ ಮಟ್ಟದ ಜನಜಾಗೃತಿ ಅಭಿಯಾನ ಉದ್ಘಾಟನೆ ನೆರವೇರಿಸಿ ಮಾತನಾಡಿದರು.

ಇಂದು ಮಾನವೀಯತೆ ಎಂಬುದು ಕ್ಷೀಣಿಸುತ್ತ ಬರುತ್ತಿದೆ. ಪರಸ್ಪರರಲ್ಲಿ ಅಪನಂಬಿಕೆ ಹೆಚ್ಚಾಗುತ್ತಿದೆ. ಇಂದು ಮನುಷ್ಯತ್ವವನ್ನು ಎಲ್ಲ ಕಡೆ ಪಸರಿಸುವ ಕೆಲಸ ಮಾಡಬೇಕು. ಇಂದು ಯುವಜನತೆ ಅಪರಾಧಿ ಕೃತ್ಯ, ಡ್ರಗ್ಸ್ ಮಾಫಿಯಾದಂತಹ ದುಶ್ಚಟಗಳಿಗೆ ಬಲಿ ಯಾಗುತ್ತಿದೆ. ಅದರಿಂದ ದೂರ ಮಾಡುವ ನಿಟ್ಟಿನಲ್ಲಿ ಕೆಲಸ ಮಾಡಬೇಕು ಎಂದರು.

ಭಾರತೀಯ ಮುಸ್ಲಿಮರು ತಮ್ಮ ಹೆತ್ತವರಂತೆ ಈ ನೆಲವನ್ನು ಪ್ರೀತಿಸುವವ ರಾಗಿದ್ದಾರೆ. ದೇಶಪ್ರೇಮ ಎಂಬುದು ನಮ್ಮ ರಕ್ತದ ಕಣಕಣದಲ್ಲೂ ಇದೆ. ಈ ದೇಶದ ರಕ್ಷಣೆಗೆ ಮುಸ್ಲಿಮರು ಸದಾ ಸಿದ್ಧರಿದ್ದಾರೆ. ಸಮಾಜದಲ್ಲಿ ಸೌಹಾರ್ದತೆ ಗಟ್ಟಿಗೊಳಿಸುವ ಮೂಲಕ ದೇಶ ಕಟ್ಟುವ ಕೆಲಸವನ್ನು ಎಲ್ಲರು ಮಾಡಬೇಕಾಗಿದೆ ಎಂದು ಅವರು ಹೇಳಿದರು.

ರಾಜ್ಯ ವಕ್ಫ್ ಬೋರ್ಡ್ ಸದಸ್ಯ ಹಾಗೂ ಕರ್ನಾಟಕ ಮುಸ್ಲಿಂ ಜಮಾಅತ್ ಪ್ರಧಾನ ಕಾರ್ಯದರ್ಶಿ ಎನ್.ಕೆ. ಮುಹಮ್ಮದ್ ಶಾಫಿ ಸಅದಿ ಮಾತನಾಡಿ ದೇಶದಲ್ಲಿ ಸಂವಿಧಾನದ ಆಡಳಿತವಿದೆ. ಯಾವುದೇ ಪಕ್ಷದ ಪ್ರಣಾಳಿಕೆ ಆಧಾರದಲ್ಲಿ ದೇಶ ನಡೆಸಲು ಸಾಧ್ಯವಿಲ್ಲ. ಹೀಗಾಗಿ ಮುಸ್ಲಿಂ ಸಮುದಾಯ ಉದ್ರೇಕ, ಆವೇಶಕ್ಕೆ ಒಳಗಾಗಬಾರದು. ರಾಜಕೀಯ ಪ್ರೇರಿತ ಷಡ್ಯಂತ್ರಕ್ಕೆ ಬಲಿಯಾಗಬಾರದು. ನಮ್ಮ ಬುದ್ಧಿವಂತಿಕೆಯನ್ನು ಪಕ್ಷಗಳಿಗೆ ಅಡವಿಡಬಾರದು.

ಇತ್ತೀಚೆಗೆ ಕೆಲವು ಘಟನೆಗಳಿಂದ ದೇಶದ ಸೌಹಾರ್ದತೆ ಮತ್ತು ಸಹಿಷ್ಣುತೆಗೆ ಧಕ್ಕೆಯಾಗಿದೆ. ಆದರೆ ರಾಷ್ಟ್ರೀಯತೆ ವಿಚಾರದಲ್ಲಿ ಹಿಂದೂ, ಮುಸ್ಲಿಂ, ಕ್ರೈಸ್ತ ಭೇದಭಾವವಿಲ್ಲದೆ ಎಲ್ಲರೂ ಒಗ್ಗಟ್ಟಾಗಬೇಕು. ಸಿಎಎ, ಎನ್ಆರ್ಸಿ ಕಾಯಿದೆ ಬಗ್ಗೆ ಕಾನೂನು ರೀತಿಯಲ್ಲಿ ಹೋರಾಟ ಮಾಡಬೇಕು ಎಂದರು.

ಹಿಂದು ಮುಸ್ಲಿಮ ಗಲಭೆಗೆ ಅವಕಾಶ ನೀಡುವುದಿಲ್ಲ. ವಿವೇಕದಿಂದ ವರ್ತಿಸ ಬೇಕು. ನಮ್ಮ ಬುದ್ದಿವಂತಿಕೆಯಲ್ಲಿ ಮುಂದುವರೆಯಬೇಕು. ಮುಸ್ಲಿಮರು ತಮ್ಮ ಬಗ್ಗೆಯೇ ಅವಲೋಕನ ಮಾಡಿಕೊಳ್ಳುವ ಅಗತ್ಯವಿದೆ. ದೇಶಕ್ಕೆ ಸ್ವಾತಂತ್ರೃ ದೊರೆತು 70 ವರ್ಷಗಳಾಗದರೂ ನಮ್ಮ ಹಕ್ಕುಗಳಿಗಾಗಿ ನಾವು ಇಂದು ಬೀದಿಯಲ್ಲಿದ್ದೇವೆ. ಆದರೆ ಬೇರೆ ಸಮುದಾಯ ಸಾಧಿಸಿದ ಪ್ರಗತಿ ನಮಗೇಕೆ ಸಾಧ್ಯವಾಗಿಲ್ಲ. ಕರ್ನಾಟಕದಲ್ಲಿ 80 ಲಕ್ಷ ಮುಸ್ಲಿಂ ಜನಸಂಖ್ಯೆ ಇದ್ದರೂ ಕೇವಲ ಏಳು ಮಂದಿ ಶಾಸಕರಿದ್ದಾರೆ. ಒಬ್ಬರೇ ಒಬ್ಬ ಸಂಸದರಿಲ್ಲ. 22 ಲಕ್ಷ ಮುಸ್ಲಿಂ ಕುಟುಂಬ ಕೊಳಚೆ ಪ್ರದೇಶದಲ್ಲಿ ವಾಸಿಸುತ್ತಿದೆ. ಶೇ. 51ರಷ್ಟು ಮುಸ್ಲಿಮರು ಮಾತ್ರ ಶಿಕ್ಷಣ ಪಡೆದಿದ್ದಾರೆ. ಶೇ. 12ರಷ್ಟು ಮಂದಿ ಮಾತ್ರ ಉನ್ನತ ಶಿಕ್ಷಣ ಪಡೆದಿದ್ದಾರೆ ಎಂದರು.

ಅಧ್ಯಕ್ಷತೆಯನ್ನು ಮುಸ್ಲಿಮ್ ಜಮಾಅತ್ ರಾಜ್ಯ ಉಪಾಧ್ಯಕ್ಷ ಅಬೂ ಸುಫಿ ಯಾನ್ ಇಬ್ರಾಹಿಂ ಮದನಿ ವಹಿಸಿದ್ದರು. ಹಿರಿಯ ಪತ್ರಕರ್ತ ಬಿ.ಎಂ.ಹನೀಫ್ ಬೆಂಗಳೂರು, ನಿವೃತ್ತ ಕೆಎಎಸ್ ಅಧಿಕಾರಿ ಇಜಾಝ್ ಅಹ್ಮದ್ ಬಳ್ಳಾರಿ ವಿಷಯ ಮಂಡನೆ ಮಾಡಿದರು.

ಜಮಾಅತ್ ರಾಜ್ಯ ಕಾರ್ಯದರ್ಶಿ ಕೆ.ಎಂ.ಅಬೂಬಕ್ಕರ್ ಸಿದ್ದೀಕ್ ಮೋಂಟುಗೋಳಿ, ರಾಜ್ಯ ವಕ್ಪ್ ಬೋರ್ಡ್ ಸದಸ್ಯ ಯಹ್ಕೂಬ್ ಯೂಸುಫ್ ಶಿವಮೊಗ್ಗ, ಸಯ್ಯಿದ್ ಜುನೈದ್ ತಂಙಳ್, ಜಮಾಅತ್ ಬೆಳ್ತಂಗಡಿ ತಾಲೂಕು ಅಧ್ಯಕ್ಷ ಸಯ್ಯಿದ್ ಎಸ್.ಎಂ. ತಂಙಳ್, ಜಅಮಾತ್ ಜಿಲ್ಲಾಧ್ಯಕ್ಷ ಮೌಲಾನಾ ನಝೀರ್ ಅಝ್ಹರಿ, ಕಾರ್ಯಕ್ರಮ ನಿರ್ವಣಾ ಸಮಿತಿ ಅಧ್ಯಕ್ಷ ಹಾಜಿ ಪಿ. ಅಬೂಬಕ್ಕರ್ ನೇಜಾರು ಮುಖ್ಯ ಅತಿಥಿಗಳಾಗಿದ್ದರು.

ಪ್ರಮುಖರಾದ ಸಯ್ಯಿದ್ ಫರೀದ್ ಉಡುಪಿ, ಮುಹಮ್ಮದ್ ನಯೀಮ್ ಕಟಪಾಡಿ, ಬಿಎಸ್ಎಫ್ ರಫೀಕ್ ಕುಂದಾಪುರ, ಕೆ.ಎಸ್.ಎಂ.ಮನ್ಸೂರು, ಹಾಜಿ ಅಬ್ದುಲ್ಲಾ ಪರ್ಕಳ, ಶೇಖ್ ಗೌಸ್ ಕಾರ್ಕಳ, ಅಬ್ದುರ್ರಹ್ಮಾನ್ ಮಲ್ಪೆ, ಮುಹಮ್ಮದ್ ಮೌಲಾ ಮೊದಲಾದ ವರು ಉಪಸ್ಥಿತರಿದ್ದರು.

ಜಮಾಅತ್ ರಾಜ್ಯ ಕಾರ್ಯದರ್ಶಿ ಎಂ.ಬಿ.ಎಂ.ಸ್ವಾದಿಕ್ ಸ್ವಾಗತಿಸಿದರು. ಜಿಲ್ಲಾ ಕಾರ್ಯದರ್ಶಿ ಸುಬ್ಹಾನ್ ಅಹ್ಮದ್ ಹೊನ್ನಾಳ ವಂದಿಸಿದರು. ಕೆ.ಎ. ಅಬ್ದುರ್ರಹ್ಮಾನ್ ರಝ್ವಿ ಕಲ್ಕಟ್ಟ ಹಾಗೂ ವೈಬಿಸಿ ಬಶೀರ್ ಅಲಿ ಮೂಳೂರು ಕಾರ್ಯಕ್ರಮ ನಿರೂಪಿಸಿದರು.


Spread the love