ಮಗನನ್ನು ಕಳೆದುಕೊಂಡು ತಾಯಿಯಿಂದ ನ್ಯಾಯ ಕೋರಿ ಉಡುಪಿ ಜಿಲ್ಲಾಧಿಕಾರಿಗೆ ಪತ್ರ – ಸಾಮಾಜಿಕ ಜಾಲತಾಣದಲ್ಲಿ ವೈರಲ್!

Spread the love

ಮಗನನ್ನು ಕಳೆದುಕೊಂಡು ತಾಯಿಯಿಂದ ನ್ಯಾಯ ಕೋರಿ ಉಡುಪಿ ಜಿಲ್ಲಾಧಿಕಾರಿಗೆ ಪತ್ರ – ಸಾಮಾಜಿಕ ಜಾಲತಾಣದಲ್ಲಿ ವೈರಲ್!

ಉಡುಪಿ: ಖಾಸಗಿ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಹೃದಯಾಘಾತದಿಂದ ಮೃತಪಟ್ಟ ಇಂಜಿನಿಯರಿಂಗ್ ವಿದ್ಯಾರ್ಥಿಯೋರ್ವನ ತಾಯಿಯೊಬ್ಬರು ಉಡುಪಿ ಜಿಲ್ಲಾಧಿಕಾರಿ ಜಿ ಜಗದೀಶ್ ಅವರಿಗೆ ಬರೆದಿರುವ ಪತ್ರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಜಿಲ್ಲಾಧಿಕಾರಿಗೆ ಬರೆದ ಪತ್ರದಲ್ಲೇನಿದೆ? ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಪತ್ರವನ್ನು ಯಥಾವತ್ತಾಗಿ ಇಲ್ಲಿ ಪ್ರಕಟಿಸಲಾಗಿದೆ.

ಸರ್ ನಮಸ್ತೇ,
ಇವನು ನನ್ನ ಒಬ್ಬನೇ ಮಗ ಸುಹಾಸ್ ಎಸ್. ಮಯ್ಯ 22 ವರ್ಷ “ಪ್ರೆಸಿಡೆನ್ಸಿ ಯೂನಿವರ್ಸಿಟಿ ರಾಜನಕುಂಟೆ ಬೆಂಗಳೂರು” ಇಲ್ಲಿ 4 ನೇ ವರ್ಷದ ಇಂಜಿನಿಯರಿಂಗ್ ಓದುತ್ತಿದ್ದ, ಮಾರ್ಚ್ 7 ರಂದು ಬೆಂಗಳೂರಿಂದ ಕುಂದಾಪುರಕ್ಕೆ ರಾತ್ರಿ 9:45 ರ ಖಾಸಗಿ ಬಸ್ಸಿನಲ್ಲಿ ಹೊರಟಿದ್ದ, ರಾತ್ರಿ 12:20 ಸಮಯಕ್ಕೆ ಹೋಟೆಲೊಂದರ ಬಳಿ ಬಸ್ ನಿಲ್ಲಿಸಿದಾಗ ಸುಹಾಸ್ ಚಹಾ ಕುಡಿದು ಮಿನರಲ್ ವಾಟರ್ ಬಾಟಲಿಯನ್ನು ತೆಗೆದುಕೊಂಡು ಬಂದಿದ್ದನಂತೆ, ಅಲ್ಲಿಯವರೆಗೂ ಚೆನ್ನಾಗಿಯೇ ಇದ್ದ ನನ್ನ ಮಗ ದಾರಿ ಮಧ್ಯೆ ಸುಸ್ತಾಗಿ ಎದೆ ನೋವು ಬರುತ್ತಿದೆ ಎಂದು ನಿರ್ವಾಕಹನ ಬಳಿ ಎರಡೆರಡು ಬಾರಿ ಹೇಳಿದ್ದಾನೆ,ಆದರೆ ಖಾಸಗಿ ಬಸ್ಸಿನ ನಿರ್ವಾಹಕ ಅವನ ಮಾತನ್ನು ತುಂಬಾ ಲಘುವಾಗಿ ತೆಗೆದುಕೊಂಡಿದ್ದಾನೆ ಅಲ್ಲದೆ ಬಸ್ಸನ್ನು ನಿಲ್ಲಿಸಿ ಆಸ್ಪತ್ರೆಗೆ ಕರೆದುಕೊಂಡು ಹೋಗುವ ಯಾವುದೇ ಪ್ರಯತ್ನವನ್ನು ಮಾಡಲಿಲ್ಲ,ಆದ್ದರಿಂದಲೇ ನನ್ನ ಮಗ ಖಾಸಗಿ ಬಸ್ಸಿನ ನಿರ್ವಾಹಕರ ನಿರ್ಲಕ್ಷದಿಂದ ಎದೆನೋವು ಜಾಸ್ತಿಯಾಗಿ ಹೃದಯಾಘಾತದಿಂದ ಮಾರ್ಗ ಮಧ್ಯದಲ್ಲೇ ಅಸುನೀಗಿದ್ದಾನೆ, ನನ್ನ ಮಗ ಎದೆ ನೋವು ಎಂದು ಖಾಸಗಿ ಬಸ್ಸಿನವರಲ್ಲಿ ಹೇಳುವಾಗ ಬಸ್ ಬಂಟ್ವಾಳ ದಲ್ಲಿತ್ತು ಎಂದು ಸಹ ಪ್ರಯಾಣಿಕರೇ ನನ್ನೊಂದಿಗೆ ಹೇಳಿಕೊಂಡಿದ್ದಾರೆ,ಇಂತಹ ಸಮಯ ಮತ್ತು ಸ್ಥಳದಲ್ಲಿ ಖಾಸಗಿ ಬಸ್ಸಿನವರು ಅಲ್ಲಿಯೇ ಯಾವುದಾದರೊಂದು ಆಸ್ಪತ್ರೆಗೆ ಕರೆದುಕೊಂಡು ಹೋಗಿ ನಂತರ ನಮಗೆ ತಿಳಿಸಬಹುದಿತ್ತು,

ನನ್ನ ಮಗ ಕಾಲ್ ಮಾಡಿದರೆ ರಿಸೀವ್ ಮಾಡಿರಲಿಲ್ಲ,ಅದಕ್ಕೆ ಬಸ್ ಸೀಟ್ ಬುಕ್ ಮಾಡಿದ ಆಫೀಸ್ಗೆ ಸತತ ಅರ್ಧ ಗಂಟೆಯಷ್ಟು ಕಾಲ ಕರೆ ಮಾಡಿದರೂ ಆ ಕಡೆಯಿಂದ ಯಾವುದೇ ರೆಸ್ಪಾನ್ಸ್ ಇರಲಿಲ್ಲ, ಸುಮಾರು 45 ನಿಮಿಷದ ಬಳಿಕಅಂದರೆ ಬೆಳಿಗ್ಗೆ 6:30 ಕ್ಕೆ ಕಾಲ್ ಪಿಕ್ ಮಾಡಿ Bus On The Way ಇದೆ ಅಂತ ಮಾತನಾಡಲು ಅವಕಾಶ ಕೊಡದೆ ಜೋರು ಮಾಡಿ ಕಾಲ್ ಡಿಸ್ಕನೆಕ್ಟ್ ಮಾಡಿ ಬಿಟ್ಟರು,ಆದರೆ ಮಗ ಕಾಲ್ ರಿಸೀವ್ ಮಾಡದೇ ಇದ್ದಾಗ ಭಯದಿಂದಲೇ ಪುನಃ ಬುಕ್ಕಿಂಗ್ ಆಫೀಸ್ಗೆ ಕಾಲ್ ಮಾಡಿದೆ, ನಾನು ಈ ಕಡೆಯಿಂದ ಹೇಳುತ್ತಲೇ ಇದ್ದೆ ನನ್ನ ಮಗ ಕಾಲ್ ಪಿಕ್ ಮಾಡ್ತಾ ಇಲ್ಲ ದಯವಿಟ್ಟು ಬಸ್ಸಿನ ನಿರ್ವಾಹಕನ ಮೊಬೈಲ್ ನಂಬರ್ ಕೊಡಿ ಅಂತ ಎಷ್ಟೇ ರಿಕ್ವೆಸ್ಟ್ ಮಾಡಿದರು ಕೊಡಲಿಲ್ಲ. ಪುನಃ ಪದೇ ಪದೇ ಕಾಲ್ ಮಾಡ್ತಾನೇ ಇದ್ದೆ ಆದರೂ ಯಾವುದೇ ಸಕಾರಾತ್ಮಕ ಉತ್ತರ ಕೊಡುವ ಗೋಜಿಗೆ ಬಸ್ ಸಿಬ್ಬಂದಿಗಳು ಹೋಗಲಿಲ್ಲ, ತದನಂತರ ಬೆಳಿಗ್ಗೆ ಸುಮಾರು 6:50 ರ ಸಮಯಕ್ಕೆ ಕಾಲ್ ಮಾಡಿ ಕೋಟೇಶ್ವರದಲ್ಲಿ ಇದ್ದೇವೆ ಅಂತ ಅಂದ್ರು, ಕೇಳೋ ತಾಳ್ಮೆ ಅವರಲ್ಲಿ ಇರಲಿಲ್ಲ,

ಮತ್ತೆ ಅದೇ ಪ್ರಯತ್ನ, ಆದರೆ ರಿಸೀವ್ ಮಾಡಲೇ ಇಲ್ಲ, ನನ್ನ ಮಗನ ಸೀಟ್ ಬುಕ್ ಮಾಡಿಕೊಂಡ ಖಾಸಗಿ ಬಸ್ಸಿನವರು, ನನ್ನ ಗಂಡ ಈವಾಗ ಬಸ್ ಬಂದಿರಬಹುದು ಬಸ್ ಹತ್ತಿರ ಹೋಗುತ್ತೇನೆ ಅಂತ ಹೋಗಿ 20 ನಿಮಿಷ ಕ್ಕೆ ಬೇರೆ ಮೊಬೈಲ್ ನಂಬರ್ನಿಂದ ಕಾಲ್ ಮಾಡಿ ನಿಮ್ಮ ಮಗ ಮಾತಾಡ್ತಾ ಇಲ್ಲಾ ಅಂತ ಹೇಳಿದರು, ಹೆತ್ತ ಕರುಳಿಗೆ ಹೇಗಾಗಬೇಡ ಸರ್…..? ಬೆಳಿಗ್ಗೆ 7:49 ಕ್ಕೆ ಮತ್ತೆ ನನ್ನ ಗಂಡನಿಗೆ ತಿಳಿಸಿ ಕುಂದಾಪುರ ಶಾಸ್ತ್ರೀ ಪಾರ್ಕ್ ಹತ್ತಿರ ನಾವು ನನ್ನ ಮಗನನ್ನು ಬಸ್ಸಿನಲ್ಲಿ ಕಂಡಿದ್ದು ಹೆಣವಾಗಿ. ತುಂಬಾ ಒಳ್ಳೆಯ ಮಗ ಸುಹಾಸ್ ಅವನ ಗುಣ ನಡತೆಯಿಂದ ಸ್ಕೂಲ್ನಿಂದ ಹಿಡಿದು ಎಲ್ಲಾ ಕಡೆಯೂ ಒಳ್ಳೆಯ ಹೆಸರು ತೆಗೆದುಕೊಂಡಿದ್ದ.

ನನ್ನ ಮಗನನ್ನು ನಾನು ಕಳೆದುಕೊಂಡೆ ನನಗಾದ ಶಿಕ್ಷೆ ಇನ್ನೂ ಯಾವ ತಾಯಿಗೂ ಬೇಡ, ಅದಕ್ಕೆ ದಕ್ಷರಾದ, ಸಹೃದಯರಾದ ನಿಮ್ಮಲ್ಲಿ ನನ್ನದೊಂದು ಕಿರು ಮನವಿ…..

ಬಸ್ಸಿನವರಿಗೆ ಸರಿಯಾದ ಬುದ್ಧಿ ಕಲಿಸಲು ನಿಮ್ಮಿಂದ ಸಾಧ್ಯ ಸರ್, ಇನ್ನೂ 100…200 ಹೆಚ್ಚು ಹಣತೆಗೆದುಕೊಂಡರು ಪರವಾಗಿಲ್ಲ ಆದರೆ ಹೀಗೆ ನಿರ್ಲಕ್ಷ ಮಾಡಿ ಜೀವ ತೆಗೆಯೋದು ಯಾವ ನ್ಯಾಯ ಸರ್ ? ಎಲ್ಲಾ ಮುಗಿದ ಮೇಲೆ ಸಾರಿ ಕೇಳುತ್ತಾರೆ ಸರ್….. ಹೆತ್ತ ತಾಯಿಯ ಹೊಟ್ಟೆ ಎಷ್ಟು ಉರಿಯುತ್ತಿದೆ ಅನ್ನೋದು ಬಸ್ ಮಾಲೀಕರಿಗೆ ಗೊತ್ತಾ….ಇರುವ ಒಬ್ಬನೇ ಮಗನನ್ನು ಕಳೆದುಕೊಂಡ ನನ್ನ ಸಂಕಟ ಅವರಿಗೆ ತಟ್ಟದೇ ಇರುವುದಿಲ್ಲ, ಎಲ್ಲಾ ಬಸ್ಸಿವರಿಗೂ ಒಂದು ಖಡಕ್ ಸಂದೇಶ ನಿಮ್ಮ ಕಡೆಯಿಂದ ರವಾನಿಸಿ, ಹೆತ್ತವರು ಮಕ್ಕಳ ಬಗ್ಗೆ ಏನೇನೋ ಆಸೆ ಆಕಾಂಕ್ಷೆ ಇಟ್ಟುಕೊಂಡಿರುತ್ತಾರೆ…..ಈ ಹೆತ್ತಬ್ಬೆಯ ಸಂಕಟ ಅವರನ್ನು ಸುಮ್ಮನೆ ಬಿಡುವುದಿಲ್ಲ….. ನಮಗಾದ ಅನ್ಯಾಯ ಇನ್ಮುಂದೆ ಯಾರಿಗೂ ಆಗಬಾರದು ಸರ್, ಇದೆಲ್ಲಾ ಸನ್ನಿವೇಶಗಳು ನಡೆದು ಒಂದು ವಾರ ಆಯ್ತು ಸರ್, ಪುತ್ರ ಶೋಕ ನಿರಂತರಂ ಎನ್ನುವಂತೆ ಅವನ ಅಗಲಿಕೆಯ ನೋವು ನಮಗೆಂದಿಗೂ ಹೋಗುವುದಿಲ್ಲ, ಹೋದ ಶನಿವಾರ ನನ್ನ ಹತ್ತಿರ ಚೆನ್ನಾಗಿ ಮಾತಾಡಿ ಹೊರಟಿದ್ದ ಮಗು ಇಂದು ನಮ್ಮೊಂದಿಗೆ ಇಲ್ಲ ಎಂದರೆ ಯಾವ ತಾಯಿ ಅರಗಿಸಿಕೊಳ್ಳುತ್ತಾಳೆ ಹೇಳಿ ಸರ್, ಇವತ್ತಿಗೂ ಊಟ ಮಾಡೋಕೆ ಆಗೋಲ್ಲ, ನಿದ್ರೇನೂ ಸರಿಯಾಗಿ ಬರ್ತಾ ಇಲ್ಲ, ಕಣ್ಮುಚ್ಚಿದರೆ ಅವನು ಕಣ್ಮುಂದೆ ಬಂದಂತೆ ಭಾಸವಾಗುತ್ತದೆ ಸರ್ ನಮಗೆ, ನಮಗಾದ ಅನ್ಯಾಯ ಇನ್ಯಾರಿಗೂ ಆಗಬಾರದು ಎಂಬುದೇ ನನ್ನ ಉದ್ದೇಶ ಸರ್.

ಮಾನ್ಯ ಉಡುಪಿ ಜಿಲ್ಲೆಯ ಜಿಲ್ಲಾಧಿಕಾರಿ ಗಳಾದ ಜಗದೀಶ್ ಸರ್….ನೀವು ನನ್ನ ಮಗನ ಸಾವಿನ ವಿಷಯದಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತೀರೆಂದು ನಂಬಿದ್ದೇನೆ. ನಿರೀಕ್ಷೆ ಜಾರಿಯಲ್ಲಿದೆ…..!! ನಿಮ್ಮ ಕ್ರಮದ ನಿರೀಕ್ಷೆಯಲ್ಲಿ….? ಹೀಗೆ, ನೊಂದ ತಾಯಿ ಜಿಲ್ಲಾಧಿಕಾರಿಗೆ ಸುಧೀರ್ಘ ಪತ್ರ ಬರೆದು ನೋವು ನೋಡಿಕೊಂಡಿದ್ದಾರೆ.

ಪತ್ರದ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ‘ಪತ್ರ ಓದಿ ಮನಸ್ಸಿಗೆ ನೋವಾಯಿತು. ಈ ವಿಚಾರವಾಗಿ ಎಸ್ಪಿ ವಿಷ್ಣುವರ್ಧನ್ ಹಾಗೂ ಎಎಸ್ಪಿ ಕುಮಾರಚಂದ್ರ ಅವರ ಬಳಿ ಮಾತನಾಡಿದ್ದು, ತಕ್ಷಣ ನೊಂದ ತಾಯಿಯ ಬಳಿ ದೂರು ಸ್ವೀಕರಿಸುವಂತೆ ಸೂಚಿಸಿದ್ದೇನೆ. ತನಿಖೆಯಲ್ಲಿ ಬಸ್ ಸಿಬ್ಬಂದಿಯ ನಿರ್ಲಕ್ಷ್ಯ ಕಂಡುಬಂದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು. ಮಗನನ್ನು ಕಳೆದುಕೊಂಡ ತಾಯಿಗೆ ಕರೆ ಮಾಡಿ ಸಾಂತ್ವನ ಹೇಳಿದ್ದೇನೆ. ಶೀಘ್ರ ಖಾಸಗಿ ಬಸ್ ಮಾಲೀಕರ ಸಭೆ ಕರೆದು, ಪ್ರಯಾಣಿಕರ ಹಿತದೃಷ್ಟಿಯಿಂದ ತೆಗೆದುಕೊಳ್ಳಬೇಕಾದ ಕ್ರಮಗಳ ಕುರಿತು ತಿಳಿಸಲಾಗುವುದು. ಮುಂದೆ ಈ ರೀತಿಯ ಪ್ರಕರಣಗಳಾಗದಂತೆ ಎಚ್ಚರವಹಿಸುವಂತೆ ಸೂಚನೆ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ.


Spread the love

2 Comments

  1. ಖಾಸಗಿ ಬಸ್ = ತನ್ನ ಕೆಟ್ಟ ಸರ್ವಿಸಿಗೆ ಕುಖ್ಯಾತಿ ಪಡೆದ ದುರ್ಗಂಬಾ ಟ್ರಾವೆಲ್ಸ್!

  2. I hope the post mortem was done to establish the cause of death.
    May his soul rest in peace.
    So sad to read.

Comments are closed.