ಸ್ವಯಂ ನಿಯಂತ್ರಣದಿಂದಲೇ ಕೊರೋನಾ ಗೆಲ್ಲೋಣ – ಡಾ. ಚೂಂತಾರು  

Spread the love

ಸ್ವಯಂ ನಿಯಂತ್ರಣದಿಂದಲೇ ಕೊರೋನಾ ಗೆಲ್ಲೋಣ – ಡಾ. ಚೂಂತಾರು  

ಮಂಗಳೂರು: ಕೊರೋನಾ ವೈರಾಣು ಮನುಷ್ಯನ ದೇಹದಲ್ಲಿ ಮಾತ್ರ ಬದುಕುತ್ತದೆ.  ದೇಹದಿಂದ ಹೊರಗೆ ಬದುಕಲು ಸಾಧ್ಯವಿಲ್ಲ. ನಮ್ಮ ಆಶ್ರಯವಿಲ್ಲದೆ ಕೊರೋನಾ ಪುನರುತ್ಪತ್ತಿಯಾಗದು. ನಾವೆಲ್ಲಾ ಒಟ್ಟಾಗಿ ನಮ್ಮ ಸ್ವಯಂ ನಿಯಂತ್ರಣದಿಂದ ರೋಗ ಹರಡದಂತೆ ಅತೀ ಜಾಗರೂಕತೆ ವಹಿಸಬೇಕಾದ ಕಾಲಘಟ್ಟದಲ್ಲಿ ಇದ್ದೇವೆ ಎಂದು ಜಿಲ್ಲಾ ಗೃಹರಕ್ಷಕದಳ ಸಮಾದೇಷ್ಠ  ಡಾ.ಮುರಲೀಮೋಹನ್ ಚೂಂತಾರು ಹೇಳಿದ್ದಾರೆ.

ಅವರು ಮೇರಿಹಿಲ್‍ನಲ್ಲಿರುವ ಜಿಲ್ಲಾ ಗೃಹರಕ್ಷಕದಳದ ಕಚೇರಿಯಲ್ಲಿ ಗೃಹರಕ್ಷಕರಿಗೆ ಕೊರೋನಾ ಜಾಗೃತಿ ಮತ್ತು ಮಾಹಿತಿ ಶಿಬಿರ ನಡೆಯಿತು. ಸಾರ್ವಜನಿಕ ಪ್ರದೇಶಗಳಲ್ಲಿ ಸೀನುವುದು, ಉಗಿಯುವುದು ಮಾಡಬಾರದು. ರೋಗ ಲಕ್ಷಣಗಳು  ಜ್ವರ, ಶೀತ, ನೆಗಡಿ ಇದ್ದಲ್ಲಿ ಮನೆಯೊಳಗೆ ಇದ್ದು, ಇತರರಿಗೆ ಹರಡದಂತೆ ಜಾಗ್ರತೆ ವಹಿಸಬೇಕು.

ತಕ್ಷಣವೇ ವೈದ್ಯರಿಗೆ ತೋರಿಸಿ ರೋಗ ಇತರರಿಗೆ ಹರಡದಂತೆ ತಡೆಯುವ ಸಾಮಾಜಿಕ ಹೊಣೆಗಾರಿಕೆ ಮತ್ತು ಬದ್ದತೆಯನ್ನು ಪ್ರದರ್ಶಿಸಬೇಕಾದ ಅನಿವಾರ್ಯತೆ ಇದೆ. ಇಂತಹ ರೋಗ ಲಕ್ಷಣಗಳಿರುವ ವ್ಯಕ್ತಿ ಸಾರ್ವಜನಿಕ ಪ್ರದೇಶಗಳಲ್ಲಿ ಮತ್ತು ನೆರೆಹೊರೆಯ ಮನೆಗಳಲ್ಲಿ ಇದ್ದಲ್ಲಿ ತಕ್ಷಣವೇ ಆರೋಗ್ಯ ಇಲಾಖೆ ಮತ್ತು ಜಿಲ್ಲಾಡಳಿತಕ್ಕೆ ತಿಳಿಸಬೇಕು ಎಂದು ಗೃಹರಕ್ಷಕರಿಗೆ ಕಿವಿಮಾತು ಹೇಳಿದರು.

ಉಪ ಸಮಾದೇಷ್ಟ ರಮೇಶ್ ಮತ್ತು ಹಿರಿಯ ಗೃಹರಕ್ಷಕ ರಮೇಶ್ ಭಂಡಾರಿ, ಸುರೇಶ್ ಶೇಟ್, ಭಾಸ್ಕರ್ ಇನ್ನಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.


Spread the love