ಮಾಜಿ ಸಚಿವ ಡಿ.ಕೆ ಶಿವಕುಮಾರ್ ಗೆ ಷರತ್ತುಬದ್ಧ ಜಾಮೀನು

Spread the love

ಮಾಜಿ ಸಚಿವ ಡಿ.ಕೆ ಶಿವಕುಮಾರ್ ಗೆ ಷರತ್ತುಬದ್ಧ ಜಾಮೀನು

ನವದೆಹಲಿ: ಅಕ್ರಮ ಹಣ ಪತ್ತೆ ಪ್ರಕರಣದಲ್ಲಿ ತಿಹಾರ್ ಜೈಲಿನಲ್ಲಿದ್ದ ಡಿ.ಕೆ.ಶಿವಕುಮಾರ್​​ಗೆ ಜಾಮೀನು ಮಂಜೂರು ಮಾಡಿ ದೆಹಲಿ ಹೈಕೋರ್ಟ್​ ಆದೇಶ ಹೊರಡಿಸಿದೆ. 25 ಲಕ್ಷ ರೂಪಾಯಿ ಶ್ಯೂರಿಟಿ ಬಾಂಡ್​ ನೀಡುವಂತೆ ಹಾಗೂ ವಿಚಾರಣೆಗೆ ಕರೆದಾಗ ಹಾಜರಾಗುವಂತೆ ನ್ಯಾಯಾಧೀಶರು ಸೂಚನೆ ನೀಡಿದ್ದಾರೆ.

ಹಾಗೇ ಅನುಮತಿ ಇಲ್ಲದೆ ವಿದೇಶಕ್ಕೆ ತೆರಳಬಾರದು, ಪಾಸ್​ಪೋರ್ಟ್​ ಸರಂಡರ್​ ಮಾಡಬೇಕು ಎಂದು ಹೇಳಿ ಜಾಮೀನು ನೀಡಲಾಗಿದೆ. ಕಳೆದ 48 ದಿನಗಳಿಂದ ಜೈಲಿನಲ್ಲಿದ್ದ ಡಿಕೆಶಿಗೆ ಬಿಗ್​ ರಿಲೀಫ್ ಸಿಕ್ಕಂತಾಗಿದೆ. ಕೋರ್ಟ್ ಆದೇಶದ ಪ್ರತಿ ಇಂದು ಸಂಜೆ 4 ಗಂಟೆಯೊಳಗೆ ಜೈಲು ತಲುಪಲಿದೆ.

ಡಿ.ಕೆ.ಶಿವಕುಮಾರ್ ಅವರ ಜಾಮೀನು ಅರ್ಜಿ ತೀರ್ಪು ನೀಡುವ ವೇಳೆ ಕೋರ್ಟ್​ ಹಾಲ್​ನಲ್ಲಿ ಅನೇಕ ಮಂದಿ ಸೇರಿದ್ದರು. ಸಂಸದ ಡಿ.ಕೆ.ಸುರೇಶ್​ ಕೋರ್ಟ್ ಹಾಲ್​ನಲ್ಲಿ ಇದ್ದರು.

2017ರಲ್ಲಿ ಡಿ.ಕೆ.ಶಿವಕುಮಾರ್ ಅವರ ದೆಹಲಿ ಮನೆಯಲ್ಲಿ ಐಟಿ ದಾಳಿಯಾದಾಗ ದಾಖಲೆಗಳಿಲ್ಲದ ಹಣ ಪತ್ತೆಯಾಗಿತ್ತು. ಪ್ರಕರಣವನ್ನು ಕೈಗೆತ್ತಿಕೊಂಡಿದ್ದ ಇ.ಡಿ.ಅಧಿಕಾರಿಗಳು ಡಿ.ಕೆ.ಶಿವಕುಮಾರ್ ಅವರನ್ನು ವಿಚಾರಣೆಗೆಂದು ದೆಹಲಿಗೆ ಕರೆಸಿದ್ದರು. ಆದರೆ ವಿಚಾರಣೆಗೆ ಸರಿಯಾಗಿ ಸ್ಪಂದಿಸಲಿಲ್ಲ ಎಂಬ ಕಾರಣಕ್ಕೆ ಅವರನ್ನು ಬಂಧಿಸಲಾಗಿತ್ತು.

ಆರೋಗ್ಯದಲ್ಲಿ ಏರುಪೇರಾದ ನಿಮಿತ್ತ ಆಸ್ಪತ್ರೆಗೆ ದಾಖಲಾಗಿದ್ದ ಡಿ.ಕೆ.ಶಿವಕುಮಾರ್ ಬಳಿಕ ತಿಹಾರ್​ ಜೈಲಿನಲ್ಲಿ ಇದ್ದರು. ಈ ಮಧ್ಯೆ ಜಾಮೀನು ಮಂಜೂರು ಮಾಡುವಂತೆ ದೆಹಲಿ ಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು. ಡಿ.ಕೆ.ಶಿವಕುಮಾರ್ ಪರ ವಾದ ಮಂಡಿಸಿದ್ದ ಹಿರಿಯ ವಕೀಲ ಮುಕುಲ್​ ರೋಹಟಗಿ ಈ ಹಿಂದಿನ ಹಲವು ಅಕ್ರಮ ಹಣಕ್ಕೆ ಸಂಬಂಧಪಟ್ಟ ಪ್ರಕರಣಗಳನ್ನು ಉದಾಹರಣೆ ನೀಡಿ, ಇದು ಬಂಧಿಸುವಂತಹ ಕೇಸ್​ ಅಲ್ಲ. ಇ.ಡಿ.ಅಧಿಕಾರಿಗಳು ಎಡವಿದ್ದಾರೆ ಎಂದು ಹೇಳಿದ್ದರು.

ಅಲ್ಲದೆ ಡಿ.ಕೆ.ಶಿವಕುಮಾರ್​ ವಿಚಾರಣೆಗೆ ನುಣುಚಿಕೊಂಡಿಲ್ಲ. ಅವರ ಆರೋಗ್ಯವೂ ಸರಿಯಾಗಿಲ್ಲ. ಈ ಎಲ್ಲ ವಿಚಾರಗಳನ್ನೂ ಪರಿಗಣಿಸಿ ಅವರಿಗೆ ಜಾಮೀನು ನೀಡಬೇಕು ಎಂದು ಮನವಿ ಮಾಡಿದ್ದರು.
ಅದಕ್ಕೆ ಪ್ರತಿಯಾಗಿ ವಾದ ಮಾಡಿದ್ದ ಇ.ಡಿ.ಪರ ವಕೀಲ ನಟರಾಜ್​, ಡಿ.ಕೆ.ಶಿವಕುಮಾರ್​ಗೆ ಯಾವುದೇ ಕಾರಣಕ್ಕೂ ಜಾಮೀನು ನೀಡಬಾರದು. ಅವರ ಪ್ರಕರಣದಲ್ಲಿ ಅಕ್ರಮ ಸ್ಪಷ್ಟವಾಗಿ ಗೋಚರಿಸುತ್ತದೆ. ಅವರು ವಿಚಾರಣೆಗೆ ಸಹಕರಿಸಿಲ್ಲ. ಇನ್ನೂ ವಿಚಾರಣೆ ಬಾಕಿಯಿದೆ ಎಂದು ಹೇಳಿದ್ದರು.

ವಾದ ಪ್ರತಿವಾದ ಆಲಿಸಿದ್ದ ನ್ಯಾಯಾಧೀಶ ಸುರೇಶ್​ ಕುಮಾರ್​ ಕೈಟ್​ ತೀರ್ಪು ಕಾಯ್ದಿರಿಸಿದ್ದರು.


Spread the love