ಮುಂದಿನ ರಾಜಕೀಯ ನಡೆಯ ಕುರಿತು ವಾರದಲ್ಲಿ ನಿರ್ಧಾರ – ಕೆ. ಜಯಪ್ರಕಾಶ್ ಹೆಗ್ಡೆ
ಉಡುಪಿ: ನನ್ನ ರಾಜಕೀಯದ ಮುಂದಿನ ನಡೆಯ ಕುರಿತು ಮುಂದಿನ ಒಂದೆರಡು ದಿನಗಳಲ್ಲಿ ಗೆಳೆಯರೊಂದಿಗೆ ಚರ್ಚಿಸಿ ವಾರದೊಳಗೆ ತೀರ್ಮಾನ ತೆಗೆದುಕೊಳ್ಳುವುದಾಗಿ ಕರ್ನಾಟಕ ಸರಕಾರಕ್ಕೆ ಜಾತಿಗಣತಿ ವರದಿ ಸಲ್ಲಿಸಿದ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ನಿಕಟಪೂರ್ವ ಅಧ್ಯಕ್ಷ ಕೆ ಜಯಪ್ರಕಾಶ್ ಹೆಗ್ಡೆ ತಿಳಿಸಿದ್ದಾರೆ.
ಸೋಮವಾರ ಉಡುಪಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿ ಈ ವರೆಗೆ ನಾನು ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷರಾಗಿ ಯಾವುದೇ ಪಕ್ಷದ ಸದಸ್ಯನಾಗಿ ಗುರುತಿಸಿಕೊಂಡಿಲ್ಲ ಈಗ ಸರಕಾರಕ್ಕೆ ವರದಿ ಸಲ್ಲಿಸಿದ್ದೇನೆ. ಇಂದು ನಾನು ಬೆಂಗಳೂರಿಗೆ ತೆರಳಿದ್ದು ಅಲ್ಲಿ ನನ್ನ ಕೆಲವೊಂದು ವೈಯುಕ್ತಿಕ ಕೆಲಸಗಳಿದ್ದು ಅದು ಮುಗಿಸಿದ ಬಳಿಕ ರಾಜಕೀಯ ನಡೆಯ ಬಗ್ಗೆ ಸೂಕ್ತ ತೀರ್ಮಾನ ಕೈಗೊಳ್ಳುವೆ. ಮೊದಲು ನಾನು ಚುನಾವಣೆಯಲ್ಲಿ ಸ್ಪರ್ಧಿಸಬೇಕೋ ಬೇಡವೋ ಎಂಬ ಕುರಿತು ಮೊದಲು ತೀರ್ಮಾನ ಕೈಗೊಳ್ಳಬೇಕು ಬಳಿಕ ಯಾವ ಪಕ್ಷ ಎಂದು ತೀರ್ಮಾನ ಮಾಡಲಾಗುವುದು ಎಂದರು.
ನಾನು ಹಿಂದಿನಿಂದಲೂ ಅಧಿಕಾರಲ್ಲಿ ಇಲ್ಲದೇ ಹೋದರೂ ಕೂಡ ಚರ್ಚೆಯಲ್ಲಿದ್ದೇನೆ. ನನಗಿಂತ ಹೆಚ್ಚು ಮಾಧ್ಯಮದವರೇ ನನ್ನ ರಾಜಕೀಯ ನಡೆಯ ಕುರಿತು ಉತ್ಸುಕರಾಗಿದ್ದಾರೆ. ನಾನು ಇದುವರೆಗೆ ಯಾವುದೇ ತೀರ್ಮಾನ ಆಗಿಲ್ಲ. ಮಾನಸಿಕವಾಗಿ ನಿರ್ಧಾರಗೊಂಡ ಬಳಿಕ ಯಾವ ಪಕ್ಷದಲ್ಲಿ ಇರುವುದಾಗಿ ನಿರ್ಧರಿಸಲಾಗುವುದು ಎಂದರು.
ಚಿಕ್ಕಮಗಳೂರಿನಲ್ಲಿ ಗೋಬ್ಯಾಕ್ ಅಭಿಯಾನದ ಕುರಿತು ಪ್ರತಿಕ್ರಿಯಿಸಿದ ಅವರು ನಾನು ಯಾವುದೇ ಪಕ್ಷದಲ್ಲಿ ಸೇರ್ಪಡೆಯಾಗದೆ, ನಿರ್ಧಾರ ಪ್ರಕಟಿಸದೆ ಅಭಿಯಾನ ನಡೆಸುವುದು ಹೇಗೆ ಎಂದು ಪ್ರಶ್ನಿಸಿದರು.