ಮೂಲ್ಕಿ – ಮೂಡುಬಿದ್ರಿ ಕ್ಷೇತ್ರದಲ್ಲಿ ಐವನ್ ಡಿಸೋಜಾರಿಗೆ ಟಿಕೇಟ್ ನೀಡಲು ಇಫ್ಕಾ ಒತ್ತಾಯ

Spread the love

ಮೂಲ್ಕಿ – ಮೂಡುಬಿದ್ರಿ ಕ್ಷೇತ್ರದಲ್ಲಿ ಐವನ್ ಡಿಸೋಜಾರಿಗೆ ಟಿಕೇಟ್ ನೀಡಲು ಇಫ್ಕಾ ಒತ್ತಾಯ

ಉಡುಪಿ:  ರಾಜ್ಯದ ಉಡುಪಿ, ದ.ಕ., ಶಿವಮೊಗ್ಗ, ಚಿಕ್ಕಮಗಳೂರು, ಬೆಂಗಳೂರು ನಗರ, ಬೀದರ್, ದಾವಣಗೆರೆ, ಮಡಿಕೇರಿಯಲ್ಲಿ ಕ್ರೈಸ್ತ ಮತ ನಿರ್ಣಾಯಕವಾಗಿದ್ದು ಮುಂಬರು ವಿಧಾನ ಸಭಾ ಚುನಾವಣೆಯಲ್ಲಿ ರಾಜ್ಯದ ಕನಿಷ್ಠ 5 ಕ್ಷೇತ್ರದಲ್ಲಿ ಕ್ರೈಸ್ತ ಸಮುದಾಯದ ಅಭ್ಯರ್ಥಿಗಳಿಗೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಸ್ಪರ್ಧೆಗೆ ಅವಕಾಸ ನೀಡಬೇಕು ಎಂದು ಕರ್ನಾಟಕ ರಾಜ್ಯ ಕ್ರೈಸ್ತ ಸಂಘಟನೆಗಳ ಅಂತರಾಷ್ಟ್ರೀಯ ಒಕ್ಕೂಟ ಬೆಂಗಳೂರು ಇದರ ಉಡುಪಿ ಜಿಲ್ಲಾ ಘಟಕ ಆಗ್ರಹಿಸಿದೆ.

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಒಕ್ಕೂಟದ ಅಧ್ಯಕ್ಷ ಪ್ರಶಾಂತ್ ಜತ್ತನ್ನ,  ಕಾಂಗ್ರೆಸ್ ಪಕ್ಷಕ್ಕೆ ಮೊದಲಿನಿಂದಲೂ ಕ್ರೈಸ್ತ ಸಮುದಾಯವು ನಿಷ್ಠಾವಂತರಾಗಿ ಇಂದಿನವರೆಗೂ ಪಕ್ಷದ ಅಭ್ಯರ್ಥಿಗಳನ್ನು ಜಾತಿ, ಮತ, ಭೇಧವಿಲ್ಲದೆ ಗೆಲ್ಲಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.ಕರ್ನಾಟಕದ ಕೆಲವೊಂದು ಕ್ಷೇತ್ರಗಳಲ್ಲಿ ಪ್ರಮುಖವಾಗಿ ಉಡುಪಿ, ದಕ್ಷಿಣ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು, ಬೆಂಗಳೂರು ನಗರ, ಬೀದರ್ ದಾವಣಗೆರೆ, ಮಡಿಕೇರಿ ಜಿಲ್ಲೆಗಳಲ್ಲಿ ಕ್ರೈಸ್ರ ಮತ ನಿರ್ಣಾಯಕ ಮಟ್ಟದಲ್ಲಿದೆ. ಆದರೆ ಇದುವರೆಗೆ ಸಮುದಾಯಕ್ಕೆ ಅರ್ಹ ಪ್ರಾತಿನಿದ್ಯ ದೊರಕಿಲ್ಲ. ಪ್ರಸ್ತುತ ಕಾಂಗ್ರೆಸಿನಿಂದ ಮಂಗಳೂರ ದಕ್ಷಿಣ ಹಾಗೂ ಬೆಂಗಳೂರಿನ ಸರ್ವಜ್ಞ ನಗರದಿಂದ ಜೆ ಆರ್ ಲೋಬೊ ಹಾಗೂ ಕೆ ಜೆ ಜೋರ್ಜ್ ಹಾಗೂ ವಿಧಾನಪರಿಷತ್ತಿನಲ್ಲಿ ಐವನ್ ಡಿಸೋಜಾ ಕ್ರೈಸ್ತ ಸಮಾಜವನ್ನು ಪ್ರತಿನಿಧಿಸುತ್ತಿದ್ದಾರೆ.

ಆಸ್ಕರ್ ಫೆರ್ನಾಂಡಿಸ್ ಅವರು ಸುಮಾರ್ 50 ವರ್ಷಗಳಿಂದ ಕಾಂಗ್ರೆಸ್ ಪಕ್ಷದಲ್ಲಿ ತಳಹಂತದಿಂದ ದುಡಿದು, ಲೋಕಸಭಾ ಸದಸ್ಯರು, ಕೇಂದ್ರ ಮಂತ್ರಿ, ರಾಜ್ಯಸಭಾ ಸದಸ್ಯರು, ಎಐಸಿಸಿಯ ಪ್ರಧಾನ ಕಾರ್ಯದರ್ಶಿಯಾಗಿ, ಕರ್ನಾಟಕ ಪ್ರದೇಶ ಕಾಂಗ್ರೆಸಿನ ಅಧ್ಯಕ್ಷರಾಗಿ, ಸರಕಾರ ಹಾಗೂ ಪಕ್ಷದಲ್ಲಿ ಅತ್ಯುನ್ನತ ಸ್ಥಾನಕ್ಕೆ ಏರಿದ್ದು, ಇಂದು ಕ್ರೈಸ್ತ ಸಮಾಜಕ್ಕೆ ಹೆಮ್ಮೆಯ ವಿಚಾರ. ಕ್ರೈಸ್ತ ಸಮಾಜಕ್ಕೆ ಹಾಗೂ ಇತರ ಎಲ್ಲಾ ಸಮುದಾಯದವರಿಗೂ ತನ್ನಿಂದಾದಷ್ಟು ಸಹಾಯ, ಕೊಡುಗೆಗಳನ್ನು ಜಿಲ್ಲಾ, ರಾಜ್ಯ, ಹಾಗೂ ರಾಷ್ಟ್ರಮಟ್ಟದಲ್ಲಿ ನೀಡಿದ್ದಾರೆ

ಕರ್ನಾಟಕದ 7 ಕ್ಷೇತ್ರಗಳಲ್ಲಿ ಕ್ರೈಸ್ತ ಮತದಾರರ ಸಂಖ್ಯೆ ಶೇ. 25ಕ್ಕಿಂತ ಅಧಿಕವಿದೆ. ಅಲ್ಪಸಂಖ್ಯಾತರೇ ಬಹುಸಂಖ್ಯಾತರಾಗಿದ್ದಾರೆ. ಹೀಗಾಗಿ ಬೆಂಗಳೂರು ಸರ್ವಜ್ಞನಗರದಲ್ಲಿ ಕೆ.ಜೆ. ಜಾರ್ಜ್, ಶಾಂತಿನಗರ, ಮೂಲ್ಕಿ-ಮೂಡುಬಿದ್ರಿಗೆ ಐವನ್ ಡಿಸೋಜಾ, ಮಂಗಳೂರು ದಕ್ಷಿಣದಲ್ಲಿ ಜೆ.ಆರ್. ಲೋಬೋ, ಬೀದರ್ ದಕ್ಷಿಣದಲ್ಲಿ ಡೇವಿಡ್ ಸಿಮಿಯೋನ್ ಅವರಿಗೆ ಟಿಕೇಟ್ ನೀಡಬೇಕು ಎಂದು ಆಗ್ರಹಿಸಿದರು.

ಪ್ರಸ್ತುತ ವಿಧಾನ ಪರಿಷತ್ ಸದಸ್ಯ , ಸರಕಾರದ ಮುಖ್ಯ ಸಚೇತಕ ಐವನ್ ಡಿಸೋಜಾ ಅವರು ಈ ಬಾರಿ ವಿಧಾನಸಭೆಗೆ ಸ್ಪರ್ಧಿಸಲು ತಮ್ಮ ಇಂಗಿತ ವ್ಯಕ್ತಪಡಿಸಿದ್ದಾರೆ. ಪ್ರಸ್ತುತ ಮೂಲ್ಕಿ -ಮೂಡುಬಿದ್ರಿ ಕ್ಷೇತ್ರದಲ್ಲಿ ಅಭಯಚಂದ್ರ ಜೈನ್ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ ಅಲ್ಲದೆ ಈ ಕ್ಷೇತ್ರವನ್ನೂ ಇನ್ನೂ ಹೆಚ್ಚಿನ ಅಭಿವೃದ್ಧಿಪಡಿಸಲು ಐವನ್ ಡಿಸೋಜಾರೇ ಸೂಕ್ತ ವ್ಯಕ್ತಿ ಎಂದು ಕೂಡ ಜೈನ್ ಹಿಂದೆ ತಿಳಿಸಿದ್ದಾರೆ. ಆದ್ದರಿಂದ ಅಲ್ಲಿನ ಮತದಾರರ ಒತ್ತಾಯದ ಮೇರೆಗೆ ಕ್ಷೇತ್ರದ ಅಭಿವೃದ್ಧಿಗೋಸ್ಕರ ಜನಸ್ಪಂದನ ಕಚೇರಿಯನ್ನು ತೆರೆದು ಜನರಿಗೆ ಅಗತ್ಯ ಸೇವೆಯನ್ನು ನೀಡಿಕೊಂಡು ಬಂದಿರುತ್ತಾರೆ ಆದ್ದರಿಂದ ಕಾಂಗ್ರೆಸ್ ಪಕ್ಷ ಐವನ್ ಡಿಸೋಜಾ ಅವರಿಗೆ ಅವಕಾಶ ನೀಡಬೇಕು ಎಂದರು.

ಸುದ್ದಿಗೋಷ್ಠಿಯಲ್ಲಿ ಒಕ್ಕೂಟದ ಕಾರ್ಯದರ್ಶಿ ಡಾ. ನೇರಿ ಕರ್ನೇಲಿಯೋ, ನಿಕಟಪೂರ್ವ ಅಧ್ಯಕ್ಷ ಲೂಯಿಸ್ ಲೋಬೋ, ಜಿಪಂ ಸದಸ್ಯ ವಿಲ್ಸನ್ ರೋಡ್ರಿಗಸ್ ಹಾಗೂ ಇತರರು ಉಪಸ್ಥಿತರಿದ್ದರು.


Spread the love