ಮೇ 12 ರಂದು 177 ವಿದೇಶೀ ಪ್ರಯಾಣಿಕರು  ಮಂಗಳೂರಿಗೆ 

Spread the love

ಮೇ 12 ರಂದು 177 ವಿದೇಶೀ ಪ್ರಯಾಣಿಕರು  ಮಂಗಳೂರಿಗೆ 

ಮಂಗಳೂರು: ವಿದೇಶದಲ್ಲಿರುವ ಭಾರತೀಯರನ್ನು ಮಂಗಳೂರಿಗೆ ಕರೆತರಲು ಮೊದಲ ವಿಮಾನ ಸಜ್ಜಾಗಿದ್ದು ಮೇ 12 ರಂದು ರಾತ್ರಿ ಸುಮಾರು 10 ಗಂಟೆಗೆ ಮಂಗಳೂರು ವಿಮಾನ ನಿಲ್ದಾಣ ತಲುಪಲಿದೆ ಎಂದು ಐ.ಎ.ಎಸ್ ಅಧಿಕಾರಿ ರಾಹುಲ್ ಶಿಂಧೆ ತಿಳಿಸಿದರು.

ಅವರು ಸೋಮವಾರ ಮಂಗಳೂರು ಮಹಾನಗರಪಾಲಿಕೆ ಮಂಗಳಾ ಸಭಾಂಗಣದಲ್ಲಿ ಈ ಕುರಿತು ನಡೆದ ಸಭೆಯಲ್ಲಿ ಮಾತನಾಡುತ್ತಾ, ವಿದೇಶದಲ್ಲಿರುವ ಭಾರತೀಯರನ್ನು ತಾಯ್ನಾಡಿಗೆ ಕರೆತರಲು ಜಿಲ್ಲಾಡಳಿತವು ಅಗತ್ಯ ಸಿದ್ಧತೆಗಳನ್ನು ಮಾಡಿಕೊಂಡಿದೆ. ವಿಮಾನ ನಿಲ್ದಾಣದಲ್ಲೇ ಪ್ರಯಾಣಿಕರಿಗೆ ಆರೋಗ್ಯ ತಪಾಸಣೆ ಮಾಡಲಾಗುವುದು ಎಂದರು.

ಯು.ಎ.ಇ ನಿಂದ ಮಂಗಳೂರಿಗೆ ವಿಮಾನದಲ್ಲಿ ಒಟ್ಟು 177 ಪ್ರಯಾಣಿಕರು ಆಗಮಿಸಲಿದ್ದಾರೆ. 17 ಹೋಟೆಲ್‍ಗಳು ಹಾಗೂ 12 ಹಾಸ್ಟೆಲ್ ಗಳಲ್ಲಿ ಇರಿಸಲು ವ್ಯವಸ್ಥೆ ಮಾಡಲಾಗಿದೆ. ವಿಮಾನ ನಿಲ್ದಾಣದಲ್ಲಿ ನೇಮಿಸಿರುವ ಅಧಿಕಾರಿಯು ಪ್ರಯಾಣಿಕರಿಂದ ಸಂಬಂಧಿಸಿದ ಎಲ್ಲಾ ಮಾಹಿತಿಗಳನ್ನು ಪಡೆಯುವರು ಎಂದು ತಿಳಿಸಿದರು.

ಪ್ರಯಾಣಿಕರನ್ನು ಸ್ವೀಕರಿಸುವಲ್ಲಿ, ಹೋಟೆಲ್ ಬುಕ್ಕಿಂಗ್ ವ್ಯವಸ್ಥೆ, ವಾಹನ ವ್ಯವಸ್ಥೆ, ಹೋಟೆಲ್ ಕ್ವಾರಂಟೈನ್ ವ್ಯವಸ್ಥೆ ಪ್ರತಿಯೊಂದು ವಿಭಾಗಕ್ಕೂ ಒಬ್ಬ ಅಧಿಕಾರಿಯನ್ನು ನೇಮಕ ಮಾಡಲಾಗಿದ್ದು, ಅಧಿಕಾರಿಗಳು ಎಲ್ಲಾ ಕಡೆ ಭೇಟಿ ನೀಡಿ ಮಾಹಿತಿ ನೀಡಬೇಕು ಎಂದು ರಾಹುಲ್ ಸೂಚಿಸಿದರು.

ಪ್ರಯಾಣಿಕರಲ್ಲಿ ಎ ಮತ್ತು ಬಿ ಎಂದು 2 ವಿಭಾಗ ಮಾಡಲಾಗುವುದು. ಕೆಮ್ಮು, ಜ್ವರ, ನೆಗಡಿ ಇರುವವರು ಎ ವಿಭಾಗದ ಪ್ರಯಾಣಿಕರು. ಇವರಿಗೆ ಜಿಲ್ಲಾ ವೆನ್ಲಾಕ್ ಆಸ್ಪತ್ರೆಯಲ್ಲಿ 14 ದಿನಗಳವರೆಗೆ ಕ್ವಾರಂಟೈನ್ ಮಾಡಿ ಬೇಕಾಗುವ ಅಗತ್ಯ ಚಿಕಿತ್ಸೆ ನೀಡಲಾಗುವುದು ಎಂದರು. ಬಿ ವಿಭಾಗ ಎಂದರೆ ಯಾವುದೇ ರೋಗ ಲಕ್ಷಣ ಇಲ್ಲದವರು ಅಂತವರನ್ನು ಹೋಟೆಲ್/ಹಾಸ್ಟೆಲ್ ಕ್ವಾರೆಂಟೈನ್‍ನಲ್ಲಿ ಇರಿಸಲಾಗುವುದು. ವಿಮಾನ ನಿಲ್ದಾಣದಲ್ಲೇ ಹೋಟೆಲ್‍ಗಳನ್ನು ಗುರುತಿಸಲು ಏರ್‍ಪೆÇೀರ್ಟ್‍ನಲ್ಲೇ ಆನ್‍ಲೈನ್ ಬುಕಿಂಗ್ ವ್ಯವಸ್ಥೆ ಮಾಡಲಾಗಿದೆ. ಅಲ್ಲಿಂದ ಪ್ರಯಾಣಿಕರು ಗುರುತಿಸಿರುವ ಹೋಟೆಲ್‍ಗಳಿಗೆ ತಲುಪಿಸಲು ವಾಹನದ ವ್ಯವಸ್ಥೆ ಮಾಡಲಾಗಿದೆ ಎಂದರು.

ಜಿಲ್ಲಾ ಆರೋಗ್ಯ ಅಧಿಕಾರಿ ಡಾ. ರಾಮಚಂದ್ರ ಬಾಯರಿ, ಮಂಗಳೂರು ಮಹಾನಗರಪಾಲಿಕೆ ಪರಿಸರ ಅಭಿಯಂತರ ಮಧು ಮನೋಹರ್ ಇತರ ಇಲಾಖಾ ಅಧಿಕಾರಿಗಳು ಉಪಸ್ಥಿತರಿದ್ದರು.


Spread the love