ರಾಜ್ಯಾಧ್ಯಕ್ಷ ಬದಲಾವಣೆ ಕುರಿತು ತನಗೆ ಯಾವುದೇ ಮಾಹಿತಿ ಇಲ್ಲ : ವಿ. ಸೋಮಣ್ಣ

Spread the love

ರಾಜ್ಯಾಧ್ಯಕ್ಷ ಬದಲಾವಣೆ ಕುರಿತು ತನಗೆ ಯಾವುದೇ ಮಾಹಿತಿ ಇಲ್ಲ : ವಿ. ಸೋಮಣ್ಣ

ಮಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷರ ಆಯ್ಕೆ ಕುರಿತು ಪ್ರತಿಕ್ರಿಯೆ ನೀಡಿರುವ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ, ವ್ಯಕ್ತಿಗಿಂತ ಪಕ್ಷ ದೊಡ್ಡದು ಹಾಗೂ ಪಕ್ಷಕ್ಕಿಂತ ದೇಶ ದೊಡ್ಡದು ಎಂದು ಹೇಳಿದ್ದಾರೆ. ರಾಜ್ಯಾಧ್ಯಕ್ಷ ಬದಲಾವಣೆ ಕುರಿತು ತನಗೆ ಯಾವುದೇ ಮಾಹಿತಿ ಇಲ್ಲ ಎಂದು ಸ್ಪಷ್ಟಪಡಿಸಿದ ಅವರು, ಪಕ್ಷದಲ್ಲಿ ಕೆಲವೊಂದು ಸುಧಾರಣೆ ತರಲು ಸಲಹೆಗಳನ್ನು ಕೇಳಿರುವ ಹಿನ್ನೆಲೆಯಲ್ಲಿ ತಮ್ಮ ರಾಜಕೀಯ ಅನುಭವದ ಆಧಾರದಲ್ಲಿ ಅಭಿಪ್ರಾಯ ಹಂಚಿಕೊಂಡಿರುವುದಾಗಿ ತಿಳಿಸಿದರು.

ಕಳೆದ 48 ವರ್ಷಗಳಿಂದ ರಾಜಕಾರಣದಲ್ಲಿ ತೊಡಗಿಸಿಕೊಂಡಿರುವುದಾಗಿ ಹೇಳಿದ ಅವರು, ಪಕ್ಷದ ಎಲ್ಲಾ ಅಂತಿಮ ನಿರ್ಧಾರಗಳನ್ನು ಹಿರಿಯ ನಾಯಕರು ಕೈಗೊಳ್ಳಲಿದ್ದಾರೆ ಎಂದರು.

ರಾಜ್ಯಸಭೆಗೆ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರನ್ನು ಪುನರಾಯ್ಕೆ ಮಾಡುವ ಕುರಿತು ಪ್ರತಿಕ್ರಿಯಿಸಿದ ಸಚಿವರು, ಈ ಬಗ್ಗೆ ತಮಗೆ ಯಾವುದೇ ಮಾಹಿತಿ ಇಲ್ಲ ಎಂದರು. ಎನ್‌ಡಿಎ ಮೈತ್ರಿಕೂಟದಲ್ಲಿ ದೇವೇಗೌಡರಿದ್ದು, ಈ ಸಂಬಂಧ ಪ್ರಧಾನಿ ಮತ್ತು ಪಕ್ಷದ ಹೈಕಮಾಂಡ್ ತೀರ್ಮಾನ ಕೈಗೊಳ್ಳಲಿದ್ದು, ಅವರಿಗೆ ಯಾವ ಸ್ಥಾನಮಾನ ನೀಡಬೇಕು ಎಂಬುದರ ಬಗ್ಗೆ ಮಾತನಾಡುವಷ್ಟು ತಾವು ದೊಡ್ಡವರಲ್ಲ ಎಂದು ಹೇಳಿದರು.

ರಾಜ್ಯ ಸರ್ಕಾರ 55 ಪ್ರಕರಣಗಳನ್ನು ವಾಪಸ್ ಪಡೆದಿರುವ ವಿಚಾರಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ವಿ. ಸೋಮಣ್ಣ, ರಾಜ್ಯದಲ್ಲಿ ಸರ್ಕಾರ ಅಸ್ತಿತ್ವದಲ್ಲಿದೆಯೇ ಎಂಬ ಪ್ರಶ್ನೆ ಎತ್ತಿದರು. ಇದು ಮಾಡಬಾರದ ಕೆಲಸವಾಗಿದ್ದು, ಸರ್ಕಾರ ನಿರ್ಲಿಪ್ತವಾಗಿದೆ ಎಂದು ಟೀಕಿಸಿದರು.

ಏಳು ಬಾರಿ ಶಾಸಕರಾಗಿ ಹಾಗೂ ಸಚಿವರಾಗಿ ಕೆಲಸ ಮಾಡಿದ ಅನುಭವದಲ್ಲಿ ರಾಜ್ಯದ ಬೆಳವಣಿಗೆಗಳನ್ನು ಸಮೀಪದಿಂದ ಗಮನಿಸಿದ್ದೇನೆ ಎಂದು ಹೇಳಿದ ಅವರು, ಸರ್ಕಾರದಲ್ಲಿ ಇಚ್ಛಾಶಕ್ತಿಯ ಕೊರತೆ ಇದ್ದು ಜನರನ್ನು ದಾರಿ ತಪ್ಪಿಸುವ ಪ್ರಯತ್ನ ನಡೆಯುತ್ತಿದೆ ಎಂದು ಆರೋಪಿಸಿದರು. ಮುಂದಿನ ದಿನಗಳಲ್ಲಿ ಜನರು ತಕ್ಕ ಉತ್ತರ ನೀಡಲಿದ್ದಾರೆ ಎಂದರು.

ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವರು, ಇದು ನಡೆಯಬಾರದ ಘಟನೆ ಆಗಿದೆ ಎಂದರು. ಇದರ ಹಿಂದೆ ಇರುವ ತಪ್ಪಿತಸ್ಥರನ್ನು ಪತ್ತೆಹಚ್ಚಿ ಕಠಿಣ ಶಿಕ್ಷೆಗೆ ಒಳಪಡಿಸಲು ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ಹೇಳಿದರು.

ಮತ್ತೆ ರಾಜ್ಯ ರಾಜಕಾರಣಕ್ಕೆ ಮರಳುವ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಈ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದರು. ಪ್ರಧಾನಿ ಸಚಿವ ಸ್ಥಾನ ನೀಡಿದ್ದಾರೆ, ದೇಶಾದ್ಯಂತ ಪ್ರವಾಸ ಮಾಡಿ ತಮ್ಮ ಜವಾಬ್ದಾರಿ ನಿರ್ವಹಿಸುತ್ತಿದ್ದೇನೆ ಎಂದು ಹೇಳಿದರು. ಮುಂದಿನ ತೀರ್ಮಾನವನ್ನು ಪಕ್ಷದ ಹೈಕಮಾಂಡ್ ಕೈಗೊಳ್ಳಲಿದೆ ಎಂದರು.

ಕೆಲವು ಹೊಸ ರಾಜಕೀಯ ಪಕ್ಷಗಳ ಕುರಿತು ವ್ಯಂಗ್ಯವಾಗಿ ಮಾತನಾಡಿದ ಅವರು, ದೇಶದಲ್ಲಿ ಅನೇಕ ಪಕ್ಷಗಳು ಹುಟ್ಟಿ ಅಣಬೆಗಳಂತೆ ಮಾಯವಾಗಿವೆ ಎಂದು ಹೇಳಿದರು. ಸುಳ್ಳನ್ನು ಸತ್ಯವಾಗಿ ತೋರಿಸುವ ಪ್ರಯತ್ನ ನಡೆಯುತ್ತಿದೆ ಎಂದು ಟೀಕಿಸಿದರು.

ಮಂಗಳೂರನ್ನು ಪ್ರತ್ಯೇಕ ರೈಲ್ವೆ ವಿಭಾಗವಾಗಿ ರೂಪಿಸುವ ಕುರಿತು ಚಿಂತನೆ ನಡೆಯುತ್ತಿದೆ ಎಂದು ತಿಳಿಸಿದ ಸಚಿವರು, ಈ ಸಂಬಂಧ ಸಭೆಗಳು ನಡೆಯುತ್ತಿವೆ ಎಂದರು. ಪ್ರಸ್ತುತ ಮಂಗಳೂರು ಮೂರು ರೈಲ್ವೆ ವಿಭಾಗಗಳಲ್ಲಿ ಹಂಚಿಕೆಯಾಗಿದ್ದು, ಪ್ರತ್ಯೇಕ ವಿಭಾಗವಾದರೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಹೇಳಿದರು.

ಇದೇ ವೇಳೆ ಸುಬ್ರಹ್ಮಣ್ಯ–ಸಕಲೇಶಪುರ ನಡುವಿನ 55 ಕಿ.ಮೀ. ರೈಲು ಮಾರ್ಗ ಕಾಮಗಾರಿ ಮತ್ತು ವಿದ್ಯುದೀಕರಣ ಪೂರ್ಣಗೊಂಡಿದ್ದು, ಇನ್ನೊಂದು ತಿಂಗಳಲ್ಲಿ ಮಂಗಳೂರು–ಬೆಂಗಳೂರು ವಂದೇ ಭಾರತ್ ರೈಲು ಸೇವೆ ಆರಂಭವಾಗುವ ಸಾಧ್ಯತೆ ಇದೆ ಎಂದು ಮಾಹಿತಿ ನೀಡಿದರು.


Spread the love
Subscribe
Notify of

0 Comments
Inline Feedbacks
View all comments