ರಾಷ್ಟ್ರೀಯ ಹೆದ್ದಾರಿ 66 ರಲ್ಲಿ 6 ಹೆಚ್ಚುವರಿ ಸಿಗ್ನಲ್ ಅಳವಡಿಕೆಗೆ ಪ್ರಸ್ತಾವನೆ – ಎಸ್ಪಿ ನಿಶಾ ಜೇಮ್ಸ್

Spread the love

ರಾಷ್ಟ್ರೀಯ ಹೆದ್ದಾರಿ 66 ರಲ್ಲಿ 6 ಹೆಚ್ಚುವರಿ ಸಿಗ್ನಲ್ ಅಳವಡಿಕೆಗೆ ಪ್ರಸ್ತಾವನೆ – ಎಸ್ಪಿ ನಿಶಾ ಜೇಮ್ಸ್

ಉಡುಪಿ: ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ 66 ಹಾಗೂ 169 (ಎ)ರಲ್ಲಿ ಬರುವ ಪ್ರಮುಖ 18 ಜಂಕ್ಷನ್‌ಗಳಲ್ಲಿ ಸಿಸಿಟಿವಿ ಸಹಿತ ಟ್ರಾಫಿಕ್‌ ಸಿಗ್ನಲ್‌ ಅಳವಡಿಸುವಂತೆ ಉಡುಪಿ ಜಿಲ್ಲಾ ಪೊಲೀಸ್‌ ಇಲಾಖೆ ವತಿಯಿಂದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ ಎಂದು ಉಡುಪಿ ಜಿಲ್ಲಾ ಎಸ್‌ಪಿ ನಿಶಾ ಜೇಮ್ಸ್‌ ಹೇಳಿದರು.

ಉಡುಪಿ ಎಸ್‌ಪಿ ಕಚೇರಿಯಲ್ಲಿ ಶುಕ್ರವಾರ ನಡೆದ ಫೋನ್‌ ಇನ್‌ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ರಾಷ್ಟ್ರೀಯ ಹೆದ್ದಾರಿ 66ರ ಸಂತೆಕಟ್ಟೆ, ಕಟಪಾಡಿ ಹಾಗೂ ಅಂಬಲಪಾಡಿ ಜಂಕ್ಷನ್‌ಗಳಲ್ಲಿ ಟ್ರಾಫಿಕ್‌ ಸಿಗ್ನಲ್‌ ಅಳವಡಿಸುವಂತೆ ಹಿಂದಿನ ಎಸ್‌ಪಿ ಲಕ್ಷ್ಮಣ್‌ ನಿಂಬರಗಿ ಅವರ ಅವಧಿಯಲ್ಲಿ ಪ್ರಸ್ತಾವ ಕಳುಹಿಸಲಾಗಿತ್ತು. ಅದು ಈಗ ಅನುಷ್ಠಾನದ ಹಂತದಲ್ಲಿದೆ’ ಎಂದರು.

ಇದೀಗ ಸಾರ್ವಜನಿಕರ ಬೇಡಿಕೆಗೆ ಅನುಗುಣವಾಗಿ ಹಾಗೂ ಹೆದ್ದಾರಿಯ ಪ್ರಮುಖ ಜಂಕ್ಷನ್‌ನಲ್ಲಿ ಸಂಚಾರ ದಟ್ಟಣೆ ನಿಯಂತ್ರಿಸುವ ಉದ್ದೇಶದಿಂದ ಹೆಚ್ಚುವರಿಯಾಗಿ ಅಂಬಾಗಿಲು, ಪಡುಬಿದ್ರಿ, ಉದ್ಯಾವರದ ಬಲಾಯಿಪಾದೆ, ಕುಂದಾಪುರದ ಸಂಗಮ್‌, ಹೆಮ್ಮಾಡಿ ಹಾಗೂ ತಲ್ಲೂರಿನಲ್ಲಿ ಟ್ರಾಫಿಕ್‌ ಸಿಗ್ನಲ್‌ ಅಳವಡಿಸುವಂತೆ ಪ್ರಾಧಿಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ ಎಂದು ವಿವರ ನೀಡಿದರು.

ರಾಷ್ಟ್ರೀಯ ಹೆದ್ದಾರಿ 169 (ಎ)ರಲ್ಲಿ ನಗರ ವ್ಯಾಪ್ತಿಯಲ್ಲಿ ಬರುವ ಪ್ರಮುಖ ಜಂಕ್ಷನ್‌ಗಳಾದ ಮಲ್ಪೆ, ಕರಾವಳಿ, ಬನ್ನಂಜೆ, ಶಿರಿಬೀಡು, ಕಲ್ಸಂಕ, ಎಂಜಿಎಂ, ಮಣಿಪಾಲದ ಸಿಂಡಿಕೇಟ್‌ ಸರ್ಕಲ್‌, ಟೈಗರ್‌ ಸರ್ಕಲ್‌ ಹಾಗೂ ಎಂಐಟಿ ಜಂಕ್ಷನ್‌ನಲ್ಲಿ ಸಿಸಿಟಿವಿ ಅಳವಡಿಸುವಂತೆ ಪ್ರಸ್ತಾನೆ ಕಳುಹಿಸಲಾಗಿದೆ ಎಂದರು.

ತಾಂತ್ರಿಕ ತಂಡ ರಚನೆ: ಹೆದ್ದಾರಿಯ ಪ್ರಮುಖ ಜಂಕ್ಷನ್‌ಗಳಲ್ಲಿ ಸಿಸಿಟಿವಿ ಕ್ಯಾಮೆರಾ ಸಹಿತ ಟ್ರಾಫಿಕ್‌ ಸಿಗ್ನಲ್‌ ಅಳವಡಿಸುವ ಕುರಿತಂತೆ ಡಿವೈಎಸ್‌ಪಿ ನೇತೃತ್ವದಲ್ಲಿ ತಾಂತ್ರಿಕ ತಂಡ ರಚನೆ ಮಾಡಲಾಗಿದೆ. ಈ ತಂಡವು ಹೆಚ್ಚು ಅಪಘಾತ, ಸಂಚಾರ ದಟ್ಟನಣೆ ಹಾಗೂ ಸಾರ್ವಜನಿಕರಿಗೆ ರಸ್ತೆ ದಾಟಲು ಕಷ್ಟ ಆಗುವ ಜಂಕ್ಷನ್‌ಗಳನ್ನು ಗುರುತಿಸಿ ವರದಿ ನೀಡಿದೆ ಎಂದರು.

ಅದರ ಆಧಾರದಲ್ಲಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ 9 ಹಾಗೂ 169 (ಎ)ರಲ್ಲಿ 9 ಕಡೆಗಳಲ್ಲಿ ಟ್ರಾಫಿಕ್‌ ಸಿಗ್ನಲ್‌ ಅಳವಡಿಸಲು ನಿರ್ಧರಿಸಲಾಗಿದೆ. ಈ ಬಗ್ಗೆ ಪ್ರಸ್ತಾವವನ್ನು ತಯಾರಿಸಿ ಪ್ರಾಧಿಕಾರಕ್ಕೆ ಕಳುಹಿಸಿಕೊಡಲಾಗಿದೆ ಎಂದು ತಿಳಿಸಿದರು.


Spread the love