ಶಿಕ್ಷಕರು ನಮ್ಮ ಸಮಾಜದ ಶಿಲ್ಪಿಗಳು: ಶಿಕ್ಷಕರ ದಿನಾಚರಣೆಯ ಮಾತು

Spread the love

ಶಿಕ್ಷಕರು ನಮ್ಮ ಸಮಾಜದ ಶಿಲ್ಪಿಗಳು: ಶಿಕ್ಷಕರ ದಿನಾಚರಣೆಯ ಮಾತು

ಮುಂಬಯಿ: ಪ್ರತಿ ವರ್ಷ ಸೆಪ್ಟೆಂಬರ್ 5 ನೇ ತಾರೀಕಿನಂದು ನಾವೆಲ್ಲಾ ನಮ್ಮ ದೇಶದ ಎರಡನೇ ರಾಷ್ಟ್ರಪತಿ ಡಾ| ಸರ್ವಪಳ್ಳಿ ರಾಧಾಕೃಷ್ಣನ್ ಅವರ ಹುಟ್ಟುಹಬ್ಬವನ್ನು ಶಿಕ್ಷಕರ ದಿನಾಚರಣೆ ಎಂದು ಆಚರಿಸುತ್ತೇವೆ.

ಡಾ| ಸರ್ವಪಳ್ಳಿ ರಾಧಾಕೃಷ್ಣನ್ ಒಬ್ಬ ಶ್ರೇಷ್ಟ ತತ್ವಜ್ಞಾನಿ, ನೆನಪಿನಲ್ಲಿ ಅಚ್ಚಳಿಯದೆ ಉಳಿಯುವ ಶಿಕ್ಷಕ ಮಾತ್ರವಲ್ಲ ಹೃದಯವಂತಿಕೆಯಲ್ಲಿ ಒಬ್ಬ ಮಹಾನ್ ಮಾನವತಾವಾದಿ. ಹಾಗಾಗಿ ಈ ದೇಶದ ಭಾವೀ ನಾಯಕರನ್ನು ಬೆಳೆಸಿ, ಪೋಷಿಸುವ, ಅವರಲ್ಲಿ ದೂರದೃಷ್ಟಿತ್ವ ಬೆಳೆಸುವ ಮತ್ತು ಜವಾಬ್ದಾರಿಯುತ ನಾಗರಿಕರನ್ನು ಸೃಷ್ಟಿಸುವಲ್ಲಿ ಅಪಾರ ಕೊಡುಗೆಯನ್ನು ನೀಡುವ ಶಿಕ್ಷಕರಿಗೆ ಅವರ ಹುಟ್ಟಿದ ದಿನವನ್ನು ಅರ್ಪಿಸಲಾಗಿದೆ.

ನಮ್ಮ ಎಲ್ಲಾ ಶಿಕ್ಷಕರು ಜೀವಿತದ ಅಪಾರವಾದ ಶ್ರೇಷ್ಟ ಸೇವೆಯನ್ನು ರಾಷ್ಟ್ರಕ್ಕೆ ಮತ್ತು ಮಾನವತೆಗೆ ನೀಡುತ್ತಿದ್ದಾರೆ. ವಿದ್ಯಾರ್ಥಿ ಜೀವನದಲ್ಲಿ ದೇಶದ ಭಾವೀ ಪ್ರಜೆಗಳನ್ನು ಕೈ ಹಿಡಿದು ಮುನ್ನಡೆಸಿ ಉದಾತ್ತ ಮಾರ್ಗದಲ್ಲಿ ಹೆಜ್ಜೆ ಇಡಲು ಬೆಳಕು ನೀಡುವವರು ಈ ಶಿಕ್ಷಕರು. ಅವರು ಸಮಾಜಕ್ಕೆ ನೀಡುವ ನಿಲ್ಕಲ್ಮಷ ಮತ್ತು ನಿಸ್ವಾರ್ಥ ಸೇವೆಗೆ ನಾನು ಆ ಭಗವಂತನಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಶಿಕ್ಷಕರು ವಿದ್ಯಾರ್ಥಿಗಳಿಗೆ ಉತ್ತಮ ಮೌಲ್ಯಗಳನ್ನು ತಿಳಿಹೇಳುತ್ತಾರೆ, ವಿದ್ಯಾಥಿರ್sಗಳನ್ನು ಜವಾಬ್ದಾರಿಯುತ, ಕಾಳಜಿಯುಳ್ಳ ಮಾನವರಾಗಿ ರೂಪಿಸುತ್ತಾರೆ.

ನಮ್ಮ ಕಳೆದ ದಿನಗಳನ್ನು ಒಂದು ಬಾರಿ ಹಿಂತಿರುಗಿ ನೋಡಿದರೆ ನಮ್ಮ ಜೀವನವನ್ನು ರೂಪಿಸಲು ಶಿಕ್ಷಕರು ನಿರ್ವಹಿಸಿದ ಪಾತ್ರದ ಮಹತ್ವವೇನು ಎಂಬುದು ಅರ್ಥವಾಗುತ್ತದೆ. ಹೌದು, ನಮ್ಮ ಜೀವನಕ್ಕೆ ಆಕಾರ, ಸ್ವರೂಪ ನೀಡಿದ ಶಿಕ್ಷಕರಿಗೆ ನಾವು ಚಿರಋಣಿ.

ನೋಬೆಲ್ ಪ್ರಶಸ್ತಿಯನ್ನು ಅತ್ಯಂತ ಕಿರಿಯ ವಯಸ್ಸಿನಲ್ಲಿಯೇ ತನ್ನ ಮುಡಿಗೇರಿಸಿಕೊಂಡಿರುವ ಮಲಾಲಾ ಯೂಸುಫ್ಜಾಯಿ ಶಿಕ್ಷಕರ ಬಗ್ಗೆ ಒಂದು ಅರ್ಥಗರ್ಭಿತವಾದ ಹೇಳಿಕೆಯನ್ನು ನೀಡಿದ್ದಾರೆ. `ಒಂದು ಪುಸ್ತಕ, ಒಂದು ಪೆನ್ನು, ಒಂದು ಮಗು ಮತ್ತು ಒಂದು ಶಿಕ್ಷಕಿ ಇಡೀ ಜಗತ್ತನ್ನೇ ಬದಲಾಯಿಸಬಹುದು’’ ಎಂದು ಹೇಳಿದ್ದಾರೆ. ನಿಜಕ್ಕೂ ಒಬ್ಬ ಶಿಕ್ಷಕನ ಧನಾತ್ಮಕ ಪ್ರಭಾವ ಮಾನವ ಪೀಳಿಗೆಗೆ ಬರುತ್ತದೆ. ಶಿಕ್ಷಕರು ರಾಷ್ಟ್ರ ನಿರ್ಮಾಪಕರು, ನಮ್ಮ ಸಮಾಜದ ಶಿಲ್ಪಿಗಳು.

ಇಂದು ತಾಂತ್ರಿಕತೆಯ ಹುಟ್ಟು ಮತ್ತು ತ್ವರಿತ ಬೆಳವಣಿಗೆ ಶಿಕ್ಷಣದ ಭೂದೃಶ್ಯವನ್ನೇ ಬದಲಾಯಿಸಿದೆ. ಪರಿಣಾಮವಾಗಿ ನಮ್ಮ ಶಿಕ್ಷಕರ ಪಾತ್ರವೂ ಕಾಲಕ್ಕೆ ತಕ್ಕಂತೆ ಬದಲಾಗುತ್ತಿದೆ. ಶಿಕ್ಷಣದಲ್ಲಿ ತಾಂತ್ರಿಕತೆಯ ಸಮಗ್ರತೆ ಬಗ್ಗೆ ಮಾತನಾಡುತ್ತಾ ಬಿಲ್ ಗೇಟ್ಸ್ ಬಹಳ ಸುಂದರವಾಗಿ ಹೀಗೆ ಹೇಳಿದ್ದಾರೆ `ತಂತ್ರಜ್ಞಾನ ಕೇವಲ ಒಂದು ಸಾಧನವಾಗಿದೆ. ಮಕ್ಕಳನ್ನು ಒಟ್ಟಿಗೆ ಕೆಲಸ ಮಾಡಿಸುವುದು ಮತ್ತು ಪ್ರೇರೇಪಿಸುವುದು ಮೊದಲಾದ  ವಿಷಯದಲ್ಲಿ ಶಿಕ್ಷಕನು ಪ್ರಮುಖ ಪಾತ್ರ ವಹಿಸುತ್ತಾನೆ. ತಂತ್ರಜ್ಞಾನ ಶಿಕ್ಷಣವನ್ನು ಬದಲಿಸಲಿಕ್ಕಿರುವುದೇ ಹೊರತು ಶಿಕ್ಷಿತರನ್ನು ಬದಲಾಯಿಸುವುದಕ್ಕಲ್ಲ ಎಂದು ಅವರು ಅರ್ಥಪೂರ್ಣವಾಗಿ ವ್ಯಾಖ್ಯಾನಿಸಿದ್ದಾರೆ. ಜೀವನದ ಮಾರ್ಪಾಟು ಮತ್ತು ಕಲಿಕೆಯ ಫಲಿತಾಂಶಗಳನ್ನು ಹೆಚ್ಚಿಸಲು ಶಿಕ್ಷಕರ ಪಾತ್ರ ಬಹಳ ಪ್ರಮುಖವಾಗಿದೆ.

ತಂತ್ರಜ್ಞಾನ ಅವುಗಳ ಕೆಲಸವನ್ನು ನಿರ್ವಹಿಸುತ್ತದೆ, ಶಿಕ್ಷಕರು ಅವುಗಳಿಗೆ ಅನುಕೂಲಕ್ಕೆ ತಕ್ಕಂತೆ ಅಗತ್ಯವಾದ ಮಾನವ ಸ್ಪರ್ಶ ನೀಡಿ, ಸಮಗ್ರ ಅಭಿವೃದ್ದಿಯ ಮೌಲ್ಯಗಳನ್ನು ತುಂಬುವರು ಮತ್ತು ಶಿಕ್ಷಣದ ಮೂಲತತ್ವವನ್ನು ಉನ್ನತೀಕರಿಸುತ್ತಾರೆ ಎಂಬುದನ್ನು ನಾನು ಬಲವಾಗಿ ನಂಬಿದ್ದೇನೆ.

ಶಿಕ್ಷಕರು ಶಿಕ್ಷಣ ವ್ಯವಸ್ಥೆಯ ಸಮಗ್ರ ಭಾಗವಾಗಿದ್ದಾರೆ ಮತ್ತು ಈ ವಿಕಸಿಸುತ್ತಿರುವ ಜಾಗತೀಕರಣದ ಜಗತ್ತಿನಲ್ಲಿ ಶಿಕ್ಷಕರು ಎಂದಿಗೂ ನಿಂತ ನೀರಾಗಿಲ್ಲ ಅಥವಾ  ಕಲಿಕಾ ಪ್ರವೃತ್ತಿಯಲ್ಲಿ ಹಳೆಯ ಶೈಲಿಯಲ್ಲಿಲ್ಲ. ಶಿಕ್ಷಕರು ಕಲಿಕಾ ವಿಚಾರದಲ್ಲಿ ನಿರಂತರ ಮೇಲ್ದರ್ಜೆಗೇರುವ ಅಗತ್ಯವಿದೆ. ಕಲಿಕಾ ವಿಧಾನ ಮತ್ತು ಕಲಿಕಾ ವೈವಿಧ್ಯತೆಗಳ ವಿಕಸನಗೊಳಿಸುವುದು ಅವಶ್ಯಕ. ಅದಕ್ಕಾಗಿ ಜಾನ್ ಡಿವೇ ಹೇಳುತ್ತಾರೆ “ಒಂದು ವೇಳೆ ನಾವು ನಿನ್ನೆ ಕಲಿಸಿದಂತೆ ಇಂದು ಕಲಿಸಿದರೆ ನಾವು ನಮ್ಮ ಮಕ್ಕಳ ನಾಳೆಯನ್ನು ಕಸಿದುಕೊಂಡಂತೆ’’ ಎಂದು ಹೇಳಿದ್ದಾರೆ. ಯಾವಾಗಲೂ ಕಲಿಯಲು ಹೊಸ ವಿಚಾರಗಳು ಇರುತ್ತವೆ. ಒಂದು ವೇಳೆ ಶಿಕ್ಷಕರು ಇದನ್ನು ಮಾಡಲು ವಿಫಲವಾದರೆ ಅವರು ತಮ್ಮ ಉದಾತ್ತ ಕರೆಗೆ ಅನ್ಯಾಯ ಮಾಡಿದಂತೆ. ಶಿಕ್ಷಣ ವ್ಯವಸ್ಥೆಯು ಶಿಕ್ಷಕರನ್ನು ಸಂಪನ್ಮೂಲ ವ್ಯಕ್ತಿಗಳಾಗಿ ಕಾಣಲು ಬಯಸುತ್ತದೆ. ಶಿಕ್ಷಕರು ಮಾತ್ರ ವಿದ್ಯಾರ್ಥಿಗಳಿಗೆ ಸಲಹೆ ನೀಡಬಲ್ಲರು, ಸಮರ್ಪಕ ಮಾಹಿತಿ ನೀಡಿ ಸರಿ ದಾರಿ ತೋರಿಸಬಲ್ಲರು.

ಇಂದಿನ ದಿನಗಳಲ್ಲಿ ಒಂದು ಮೌಸ್ ಬಟನ್ ಕ್ಲಿಕ್ ಮಾಡಿದರೆ ಎಲ್ಲಾ ವಿಷಯಗಳು ದೊರೆಯಬಲ್ಲವು, ಆದರೆ ಹೊಸ ಪರಿಕಲ್ಪನೆ ಮತ್ತು ಕೌಶಲ್ಯಗಳನ್ನು ಕಲಿಯಲು ಶಿಕ್ಷಕರ ನೆರವು ಅಗತ್ಯವಾಗಿದೆ. ವಿದ್ಯಾರ್ಥಿಗಳು ಶಿಕ್ಷಕರಲ್ಲಿ ಮಾರ್ಗದರ್ಶಕರನ್ನು ಕಾಣುತ್ತಾರೆ. ಶಿಕ್ಷಕರು ವಿದ್ಯಾರ್ಥಿಗಳ ಧೈರ್ಯ ಮತ್ತು ವಿಶ್ವಾಸವನ್ನು ಹೆಚ್ಚಿಸುತ್ತಾರೆ. ಶಿಕ್ಷಕರು ವಿದ್ಯಾರ್ಥಿಗಳ ಜೀವನಕ್ಕೆ ಸ್ಪೂರ್ತಿಯ ಸೆಲೆಯಾಗಿದ್ದಾರೆ. ಸ್ವಸ್ಥ ಸಮಾಜದ ಭಾವೀ ಪ್ರಜೆಗಳ ನಿರ್ಮಾತೃಗಳಾಗಿದ್ದಾರೆ.

ಈ ಬಾರಿಯ ಶಿಕ್ಷಕರ ದಿನಾಚರಣೆಗೆ ನಾವೆಲ್ಲರೂ ಸಮಾಜಕ್ಕೆ ನೀವು ನೀಡಿದ ಅಮೂಲ್ಯವಾದ ಕೊಡುಗೆಯನ್ನು ಅರ್ಥೈಸಿಕೊಂಡು ಗೌರವಿಸುತ್ತೇವೆ, ಸಮಾಜಕ್ಕೆ ನೀವು ಕೊಡುತ್ತಿರುವ ನಿಸ್ವಾರ್ಥ ಸೇವೆಯನ್ನು ಉದಾರವಾಗಿ ಮುಂದುವರೆಸಿ. ಭಗವಂತನ ಕೃಪೆ ನಿಮ್ಮ ಮೇಲಿರಲಿ. ನಿಮಗೆ ನನ್ನ ಗೌರವಪೂರ್ಣ ಅಭಿನಂದನೆಗಳು… ನಿಮಗೆ ಶುಭವಾಗಲಿ. ಶಿಕ್ಷಕರ ದಿನದ ಶುಭಾಶಯಗಳು..

ಶ್ರೀಮತಿ ಗ್ರೇಸ್ ಪಿಂಟೋ, ವ್ಯವಸ್ಥಾಪನಾ ನಿರ್ದೇಶಕರು, ರಾಯಾನ್ ಅಂತರಾಷ್ಟ್ರೀಯ ಸಮೂಹ ಸಂಸ್ಥೆಗಳು


Spread the love