ಶಿಕ್ಷಣ ಕ್ಷೇತ್ರಕ್ಕೆ ದಯಾನಂದ ಪೈ ಮತ್ತು ಪಿ.ಸತೀಶ್ ಪೈ ಕೊಡಗೆ ಅಪಾರ- ಕೋಟ ಶ್ರೀನಿವಾಸ ಪೂಜಾರಿ  

Spread the love

ಶಿಕ್ಷಣ ಕ್ಷೇತ್ರಕ್ಕೆ ದಯಾನಂದ ಪೈ ಮತ್ತು ಪಿ.ಸತೀಶ್ ಪೈ ಕೊಡಗೆ ಅಪಾರ- ಕೋಟ ಶ್ರೀನಿವಾಸ ಪೂಜಾರಿ  

ಮಂಗಳೂರು : ಸರಕಾರಿ ಶಾಲೆಯ ಮೂಲಭೂತ ಕೊರತೆಗಳನ್ನು ನೀಗಿಸಿ ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿ ಮೂಡಿಸಿದ ದಯಾನಂದ ಪೈ ಮತ್ತು ಅವರ ಸಹೋದರರ ಕೊಡಗೆ ಅಪಾರ ಸರಕಾರದ ಪರವಾಗಿ ಅವರಿಗೆ ಅಭಿನಂದನೆ ಸಲ್ಲಿಸುತ್ತೆನೆ ಎಂದು ಮುಜರಾಯಿ ಮೀನುಗಾರಿಕೆ ಹಾಗೂ ಬಂದರುಗಳ ಮತ್ತು ಒಳನಾಡು ಜಲಸಾರಿಗೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಸೋಮವಾರ ಡಾ.ಪಿ.ದಯಾನಂದ ಪೈ-ಪಿ. ಸತೀಶ್ ಪೈ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ತೆರೆದ ರಂಗಮದಿರದಲ್ಲಿ ಆಯೋಜಿಸಿದ್ದ ಪ್ರಥಮ ವರ್ಷದ ಪದವಿ ವಿದ್ಯಾರ್ಥಿಗಳಿಗೆ ಲ್ಯಾಪ್‍ಟಾಪ್ ವಿತರಣೆ, ರ್ಯಾಂಕ್ ವಿಜೇತರಿಗೆ ಚಿನ್ನದ ಪದಕ ಪ್ರದಾನ ಹಾಗೂ ಸನ್ಮಾನ, ಕಾಲೇಜಿನ ನೂತನ ವೆಬ್‍ಸೈಟ್‍ಗೆ ಚಾಲನಾ ಕಾರ್ಯಕ್ರಮ ಹಾಗೂ ವಿದ್ಯಾರ್ಥಿಗಳ ಪ್ರತಿಭಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ರಾಜ್ಯದ ಸರಕಾರಿ ಶಾಲಾ ಕಾಲೇಜುಗಳಲ್ಲಿ ಮೂಲಭೂತ ಸೌಕರ್ಯಗಳ ಕೊರತೆಯನ್ನು ನೀಗಿಸುವಲ್ಲಿ, ಕೋಟ್ಯಾಂತರ ರೂಪಾಯಿಗಳನ್ನು ವಿನಿಯೋಗ ಮಾಡಿ ತಮ್ಮ ಮಕ್ಕಳಂತೆ ಭಾವಿಸಿ ಪ್ರೋತ್ಸಾಹ ನೀಡುತ್ತಿರುವ ದಯಾನಂದ ಪೈ ಮತ್ತು ಅವರ ಸಹೋದರರ ಕಾರ್ಯ ಶ್ಲಾಘನೀಯ ಎಂದರು.

ಶಿಕ್ಷಣ ಮತ್ತು ಆರೋಗ್ಯಕ್ಕೆ ಮೊದಲ ಆದ್ಯತೆ ನೀಡುತ್ತಾ, ಈ ಕ್ಷೇತ್ರದಲ್ಲಿ ದೊಡ್ಡ ಕ್ರಾಂತಿ ಮೂಡಿಸಿ ಕೀರ್ತಿ ಹೊಂದಿದ ಜಿಲ್ಲೆ ನಮ್ಮ ದಕ್ಷಿಣ ಕನ್ನಡ ಜಿಲ್ಲೆ. ಈ ರೀತಿಯ ಸಾಧನೆ ಮಾಡಲು ಮೂಲ ಕಾರಣ ಟಿ.ಎಂ.ಎ.ಪೈ, ಟಿ.ಎಂ.ಪೈ, ಶ್ರೀನಿವಾಸ ಮಲ್ಯರಂತಹ ಹಿರಿಯ ವ್ಯಕ್ತಿತ್ವ ಹಾಕಿದ ತಳಹದಿ. ಟಿ.ಎಂ.ಎ.ಪೈ, ಟಿ.ಎಂ.ಪೈ, ಅಂತಹ ಹಿರಿಯರು ಮೂಲಸೌಕರ್ಯ ಕೊರತೆಗಳನ್ನು ನೀಗಿಸುವಂತಹ ಯೋಜನೆಗಳ ಮಂದಾಲೋಚನೆಗಳನ್ನು ಈ ಹಿಂದೆಯೇ ಮಾಡಿದ ಕಾರಣ ಇಂದು ಜಿಲ್ಲೆ ಎಲ್ಲಾ ಕ್ಷೇತ್ರದಲ್ಲಿ ಅಭಿವೃಧ್ಧಿಗೊಂಡಿದೆ ಎಂಬುವುದನ್ನು ಸ್ಮರಿಸಿಕೊಳ್ಳಬೇಕಾದ ಸಂಗತಿ. ಈ ರೀತಿಯಾಗಿ ಶಿಕ್ಷಣ ಕ್ಷೇತ್ರವನ್ನು ಉತ್ತುಂಗಕ್ಕೇರಿಸುವಲ್ಲಿ ಸಾಧನೆ ಮಾಡಿದ ಹಿರಿಯರ ಪೈಕಿ ಡಾ.ಪಿ.ದಯಾನಂದ ಪೈ ಮತ್ತು ಸತೀಶ್ ಪೈ ಹೆಸರನ್ನು ದಾಖಲಿಸಬಹುದು. ವಿದ್ಯಾರ್ಥಿಗಳು ಜವಾಬ್ದಾರಿ, ಪ್ರಾಮಾಣಿಕತೆ, ಶ್ರದ್ದೆ, ನಿಷ್ಠೆಯನ್ನು ತಮ್ಮಲ್ಲಿ ಅಳವಡಿಸಿ ಮತ್ತಷ್ಟು ಸಾಧನೆ ಮಾಡಬೇಕು ಎಂದು ಹೇಳಿದರು.

ದಕ್ಷಿಣ ಶಾಸಕ ಡಿ. ವೇದವ್ಯಾಸ ಕಾಮತ್ ವಿದ್ಯಾರ್ಥಿಗಳಿಗೆ ಲ್ಯಾಪ್‍ಟಾಟ್ ವಿತರಸಿ, ಸರಕಾರದ ಎಲ್ಲಾ ಯೋಜನೆಗಳನ್ನು ಹಾಗೂ ಸವಲತ್ತುಗಳನ್ನು ವಿದ್ಯಾರ್ಥಿಗಳು ಯೋಗ್ಯವಾದ ರೀತಿಯಲ್ಲಿ ಸದ್ಬಳಕೆ ಮಾಡಿಕೊಳ್ಳು ಮೂಲಕ ಉನ್ನತ ಸಾಧನೆ ಮಾಡಬೇಕು ಎಂದರು. ರ್ಯಾಂಕ್ ವಿದ್ಯಾರ್ಥಿಗಳನ್ನು ಚಿನ್ನದ ಪದಕ ನೀಡಿ ಗೌರವಿಸಿ, ಸರಕಾರಿ ಶಿಕ್ಷಣ ಸಂಸ್ಥೆಯನ್ನು ಪ್ರೋತ್ಸಾಹಿಸಿ ಬೆಳೆಸುತ್ತ್ತಿರುವ ಪಿ. ದಯಾನಂದ್ ಪೈ ಮತ್ತು ಅವರ ಸಹೋದರನ್ನು ಶ್ಲಾಘಿಸಿದರು.

ಕಾರ್ಯಕ್ರಮದಲ್ಲಿ ರಾಜ್ಯಶಾಸ್ತ್ರ ವಿಭಾಗದಲ್ಲಿ ಪ್ರಥಮ ರ್ಯಾಂಕ್ ಪಡೆದ ಪೂಜಾಶ್ರೀ, ಸಮಾಜಕಾರ್ಯ ವಿಭಾಗದಲ್ಲಿ ಎರಡನೇ ರ್ಯಾಂಕ್ ಪಡೆದ ಪೂಜಾ ಕೆ., ವಾಣಿಜ್ಯಶಾಸ್ತ್ರ ವಿಭಾಗದಲ್ಲಿ ನಾಲ್ಕನೇ ರ್ಯಾಂಕ್ ಪಡೆದ ಮೊನಿಶಾ ಶೆಟ್ಟಿ ಇವರಿಗೆ ಚಿನ್ನದ ಪದಕ ನೀಡುವ ಮೂಲಕ ಸನ್ಮಾನಿಸಲಾಯಿತು. ಸಂಸ್ಥೆಯ ಮಹಾ ಪೋಷಕ, ಡಾ. ಪಿ. ದಯಾನಂದ್ ಪೈ ಹಾಗೂ ಮೋಹಿನಿ ಪಿ. ದಯಾನಂದ್ ಪೈ ಅವರನ್ನು ಸನ್ಮಾನಿಸಲಾಯಿತು. ಪ್ರಥಮ ವರ್ಷದ ಪದವಿ ವಿದ್ಯಾರ್ಥಿಗಳಿಗೆ ಲ್ಯಾಪ್ ವಿತರಿಸಲಾಯಿತು, ಜೊತೆಗೆ ಕಾಲೇಜಿನ ನೂತನ ವೆಬ್‍ಸೈಟ್‍ಗೆ ಚಾಲನೆ ನೀಡಲಾಯಿತು.

ಕಾರ್ಯಕ್ರಮದಲ್ಲಿ ಸಂಸ್ಥೆಯ ಮಹಾ ಪೋಷಕ, ಡಾ. ಪಿ. ದಯಾನಂದ್ ಪೈ, ಮೋಹಿನಿ ಪಿ. ದಯಾನಂದ್ ಪೈ, ಯೋಗೀಶ್ ಭಟ್, ಮುಖ್ಯ ಶೈಕ್ಷಣಿಕ ಸಲಹೆಗಾರ ಡಾ.ಪಿ. ಶಿವರಾಮ ಹಾಗೂ ಇನ್ನಿತರರು, ವಿದ್ಯಾಥಿ ಪ್ರತಿನಿಧಿಗಳು ಉಪಸ್ಥಿತರಿದ್ದರು. ಕಾಲೇಜಿನ ಪ್ರಾಶುಂಪಾಲ ಪ್ರೋ. ರಾಜಶೇಖರ್ ಹೆಬ್ಬಾರ್ ಸಿ. ಪ್ರಸ್ತಾವಿಕ ನುಡಿಗಳನ್ನಾಡಿದರು.


Spread the love