ಸಂಸತ್ತಿಗೆ ಭದ್ರತೆ ನೀಡಲು ಸಾಧ್ಯವಾಗದ ಮೋದಿ ಜನತೆಗೆ ಭದ್ರತೆ ನೀಡುವರೇ? – ರಮೇಶ್ ಕಾಂಚನ್

Spread the love

ಸಂಸತ್ತಿಗೆ ಭದ್ರತೆ ನೀಡಲು ಸಾಧ್ಯವಾಗದ ಮೋದಿ ಜನತೆಗೆ ಭದ್ರತೆ ನೀಡುವರೇ? – ರಮೇಶ್ ಕಾಂಚನ್

ಉಡುಪಿ: ಸಂಸತ್ ಕಲಾಪ ನಡೆಯುತ್ತಿದ್ದಂತೆ ಇಬ್ಬರು ವ್ಯಕ್ತಿಗಳಾದ ಮನೋರಂಜನ್ ಹಾಗೂ ಸಾಗರ್ ಶರ್ಮಾ ಅವರು ಒಳನುಗ್ಗಿ ಗ್ಯಾಸ್ ಹೊರಸೂಸುವ ವಸ್ತುವೊಂದನ್ನು ಎಸೆದ ಘಟನೆ ನಿಜಕ್ಕೂ ಆತಂಕಕಾರಿಯಾಗಿದೆ. ಒಂದು ಸಂಸತ್ತಿಗೆ ಭದ್ರತೆ ನೀಡಲು ಸಾಧ್ಯವಾಗದ ಕೇಂದ್ರ ಬಿಜೆಪಿ ಸರಕಾರ ದೇಶದ ಜನತೆ ಭದ್ರತೆ ನೀಡಿಯಾರೇ ಎಂದು ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ರಮೇಶ್ ಕಾಂಚನ್ ಅವರು ಪ್ರಶ್ನಿಸಿದ್ದಾರೆ.

ದೇಶದ ಸಂಸತ್ ಭವನ ಎಂದರೆ ಅತೀ ಹೆಚ್ಚು ಭದ್ರತೆ ಇರುವ ಪ್ರದೇಶವಾಗಿದ್ದು ಒಂದು ಚಿಕ್ಕ ಗುಂಡು ಸೂಜಿ ಕೂಡ ಒಳಗಡೆ ಕೊಂಡೊಯ್ಯಲು ಸಾಧ್ಯವಿಲ್ಲ. ಹಾಗಿದ್ದರೂ ಕೂಡ ಮನೋರಂಜನ್ ಹಾಗೂ ಸಾಗರ್ ಶರ್ಮಾ ಎಂಬ ಇಬ್ಬರು ವ್ಯಕ್ತಿಗಳು ಗ್ಯಾಸ್ ಹೊರಸೂಸುವ ವಸ್ತುವನ್ನು ಕೊಂಡೊಯ್ಯುವಾಗ ಪರಿಶೀಲನೆ ನಡೆಸದೆ ಇರುವುದು ಭದ್ರತಾ ವೈಫಲ್ಯವಾಗಿದೆ. ದೇಶದ ಪ್ರಧಾನಿ ಸಹಿತ ಸಂಸದರು ಕಲಾಪದಲ್ಲಿ ಭಾಗವಹಿಸಿದ್ದ ವೇಳೆ ಇಂತಹ ಘಟನೆ ನಡೆದಿರುವುದು ನಿಜವಾಗಿಯೂ ದೇಶದ ಸಂಸತ್ ಭವನದ ಭದ್ರತೆಯ ಬಗ್ಗೆ ಪ್ರಶ್ನೆ ಕಾಡುತ್ತಿದೆ.

ದೇಶದ ಸಂಸದ್ ಭವನದ 2001ರ ಡಿಸೆಂಬರ್ 13 ರಂದು ದಾಳಿ ನಡೆದ ದಿನವಾಗಿದ್ದು ಅದೇ ದಿನ ಈ ಬಾರಿ ಇಷ್ಟೊಂದು ದೊಡ್ಡ ಭದ್ರತಾ ವೈಫಲ್ಯ ಆಗಿರುವುದರ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರು ಮೌನ ಮುರಿಯಬೇಕಾಗಿದೆ.

ಸಂಸತ್ ಭವನ ಪ್ರವೇಶ ಮಾಡಿದ ವ್ಯಕ್ತಿಗಳಿಗೆ ಮೈಸೂರು ಸಂಸದ ಪ್ರತಾಪ್ ಸಿಂಹ ಅವರ ಕಚೇರಿಯಿಂದ ಪಾಸ್ ವಿತರಣೆಯಾಗಿದೆ ಎನ್ನಲಾಗುತ್ತಿದ್ದು ಈ ಬಗ್ಗೆ ಸೂಕ್ತ ತನಿಖೆಯಾಗಬೇಕಾಗಿದೆ. ಈ ಹಿಂದೆ ಉಗ್ರರು ಆರ್.ಡಿ.ಎಕ್ಸ್ ತಂದು ಕಾಶ್ಮೀರದಲ್ಲಿ ಸ್ಪೋಟ ಮಾಡಿದ್ದ ವೇಳೆ ಕೂಡ ಭದ್ರತಾ ವೈಫಲ್ಯ ಆಗಿದ್ದು ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ಜನರ ಜೀವಗಳ ಮೇಲೆ ಚೆಲ್ಲಾಟ ಆಡಲು ಹೊರಟಿದಂತಿದೆ.

ಹೊಸ ಪಾರ್ಲಿಮೆಂಟ್ ಭವನದಲ್ಲಿ ಇಂದು ನಡೆದಿರುವ ಘಟನೆ ನಿಜವಾಗಿಯೂ ಭದ್ರತಾ ವೈಫಲ್ಯವೇ ಅಥವಾ ಮುಂಬರುವ ಲೋಕಸಭಾ ಚುನಾವಣೆಗೆ ಮೋದಿ ಸರಕಾರ ಮಾಡುತ್ತಿರುವ ಗಿಮಿಕ್ ಆಗಿರಬಹುದೇ ಎಂದು ತನಿಖೆಯಾಗಬೇಕಿದೆ.

ನಮ್ಮ ನೆರೆಯ ಗೋವಾ ರಾಜ್ಯದಿಂದ 2 ಬಾಟಲಿ ಮದ್ಯವನ್ನು ತಂದರೆ ಕೂಡ ತಪಾಸಣೆ ನಡೆಸಿ ವಶಕ್ಕೆ ಪಡೆಯುವ ಪೊಲೀಸರು ದೇಶದ ರಾಜಧಾನಿಯಲ್ಲಿರುವ ಸಂಸತ್ ಭವನದಲ್ಲಿ ಅನಾಮಿಕ ವ್ಯಕ್ತಿಗಳು ಪ್ರವೇಶ ಮಾಡುವಾಗ ತಪಾಸಣೆ ನಡೆಸಿದ ರೀತಿಯೂ ಕೂಡ ಪ್ರಶ್ನಾರ್ಹವಾಗಿದೆ. ಇದು ವಿಶೇಷವಾಗಿ ಡಿಸೆಂಬರ್ 13ರಂದು 2001ರಲ್ಲಿ ಸಂಸತ್ತಿನ ಮೇಲೆ ದಾಳಿಯಾದ ದಿನದಂದು ಗಂಭೀರವಾದ ಭದ್ರತಾ ಉಲ್ಲಂಘನೆಯಾಗಿದೆ ಇದರ ಬಗ್ಗೆ ಪ್ರಧಾನಿಗಳು ಮೌನ ಮುರಿದು ನಿಷ್ಪಕ್ಷಪಾತವಾದ ತನಿಖೆ ನಡೆಸಿ ದೇಶದ ಜನತೆಗೆ ಸ್ಪಷ್ಟೀಕರಣ ನೀಡಬೇಕು ಎಂದು ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ರಮೇಶ್ ಕಾಂಚನ್ ಅವರು ಪತ್ರಿಕಾ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.


Spread the love