ಸಿ.ಎ.ಎ, ಎನ್.ಆರ್.ಸಿ ಮತ್ತು ಎನ್.ಪಿ.ಆರ್ ಕಾಯಿದೆ ಜನರನ್ನು ಮರಳುಗೊಳಿಸುವ ಅಜೆಂಡಾ- ಫಣಿರಾಜ್

Spread the love

ಸಿ.ಎ.ಎ, ಎನ್.ಆರ್.ಸಿ ಮತ್ತು ಎನ್.ಪಿ.ಆರ್ ಕಾಯಿದೆ ಜನರನ್ನು ಮರಳುಗೊಳಿಸುವ ಅಜೆಂಡಾ- ಫಣಿರಾಜ್

ಉಡುಪಿ: ಸಿ.ಎ.ಎ, ಎನ್.ಆರ್.ಸಿ ಮತ್ತು ಎನ್.ಪಿ.ಆರ್ ಮೂಲಕವಾಗಿ ದೇಶದ ಹಿಂದೂಗಳನ್ನು ಒಡೆಯುವ ಮತ್ತು ಜನರೊಳಗಿನ ಐಕ್ಯತೆಯನ್ನು ಮುರಿಯುವ ಪ್ರಯತ್ನಕ್ಕೆ ಕೇಂದ್ರ ಸರಕಾರ ಮುಂದಾಗಿದೆ. ಇಂದು ಕೇವಲ ಒಂದು ಕಾಯ್ದೆ ಅಲ್ಲ. ಬದಲಾಗಿ ದೇಶದ ಜನರನ್ನು ಮರಳುಗೊಳಿಸುವ ದೊಡ್ಡ ಎಜೆಂಡಾ ಆಗಿದೆ. ಹಿಂದುತ್ವದ ಸಂವಿಧಾನವನ್ನು ಜಾರಿಗೆ ತರಲು ಮಾಡುತ್ತಿರುವ ಪ್ರಯತ್ನವಾಗಿದೆ. ಈ ಕಾರಣದಿಂದ ನಾವೆಲ್ಲರೂ ಒಗ್ಗೂಡಿ ಕಾಯ್ದೆಯನ್ನು ವಿರೋಧಿಸುವ ಅಗತ್ಯತೆಯಿದೆ ಎಂದು ಹಿರಿಯ ಚಿಂತಕ ಫಣಿರಾಜ್ ಹೇಳಿದರು.

ಜಾತ್ಯಾತೀತ ನಾಗರಿಕ ಸಮಿತಿ ಕಾಪು ಹಾಗೂ ವಿವಿಧ ಸಂಘಟನೆಗಳ ಸಹಭಾಗಿತ್ವದಲ್ಲಿ ಶನಿವಾರ ಕಾಪು ಪೇಟೆಯಲ್ಲಿ ಎನ್.ಆರ್.ಸಿ, ಸಿ.ಎ.ಎ ಮತ್ತು ಎನ್.ಪಿ.ಆರ್ ವಿರುದ್ಧ ನಡೆದ ಬೃಹತ್ ಪ್ರತಿಭಟನೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಕೇಂದ್ರ ಸರಕಾರವು ಜಾರಿಗೆ ತರುತ್ತಿರುವ ಪೌರತ್ವ ಕಾಯ್ದೆಯು ಭಾರತೀಯ ಪ್ರಜೆಗಳ ಒಗ್ಗಟ್ಟನ್ನು ಒಡೆಯುವ ಯತ್ನವಾಗಿದೆ. ದೇಶದ ಪ್ರಜೆಗಳನ್ನು ಮತದ ಆಧಾರದ ಮೇಲೆ ವಿಂಗಡಿಸಿ ಪೌರತ್ವವನ್ನು ನೀಡದೇ, ದೌರ್ಜನ್ಯಕ್ಕೆ ಒಳಗಾಗುತ್ತಿರುವ ಸಮುದಾಯದ ಜನರಿಗೆ ಪೌರತ್ವ ನೀಡುವ ಕೆಲಸ ನಡೆಯಬೇಕಿದೆ. ಸಮಾನತೆಯ ಪ್ರತಿಪಾದನೆಗಳನ್ನು ಉಳಿಸುವ ಮತ್ತು ಪ್ರಜಾಪ್ರಭುತ್ವದ ಉದ್ದೇಶಗಳನ್ನು ಬೆಂಬಲಿಸುವಂತಹ ಕಾಯ್ದೆ ದೇಶದಲ್ಲಿ ಜಾರಿಗೆ ಬರಬೇಕಿದೆ ಎಂದರು.

ಸಾಮಾಜಿಕ ಚಿಂತಕ ಮತ್ತು ಪತ್ರಕರ್ತ ಹರ್ಷ ಕುಮಾರ್ ಮಾತನಾಡಿ, ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಪಘಾನಿಸ್ಥಾನದ ನುಸುಳುಕೋರರನ್ನು ತಡೆಯಲು ಅದರದ್ದೇ ಆದ ಕಾಯ್ದೆದೆಗಳಿವೆ. ಅದರ ಬದಲು ಅಕ್ರಮ ವಲಸಿಗರನ್ನು ತಡೆಯಲು ಮತ್ತು ದೇಶದಿಂದ ಹೊರಹಾಕಲು ದೇಶದ ಜನರಿಗೆ ತೊಂದರೆ ತರುವಂತಹ ಪೌರತ್ವ ಕಾಯ್ದೆಯನ್ನು ಹೇರುವ ಅಗತ್ಯವಿಲ್ಲ. ದೇಶದಾದ್ಯಂತ ಇದರ ವಿರುದ್ಧ ಹೋರಾಟ ನಡೆಯುತ್ತಿದ್ದು, ನೂರಾರು ಮಂದಿ ಕಾಯ್ದೆಯ ವಿರುದ್ಧವಾಗಿ ಧ್ವನಿಯೆತ್ತಿ ಬಲಿಯಾಗುತ್ತಿದ್ದಾರೆ. ಬಿಜೆಪಿಯ ಧರ್ಮಾಧಾರಿತವಾದ ರಾಜಕೀಯಕ್ಕೆ ಅಮಾಯಕ ಮುಸ್ಲಿಂ ಬಂಧುಗಳು ಬಲಿಯಾಗುತ್ತಿದ್ದು ಅದರ ವಿರುದ್ಧವೂ ನಾವು ಜೊತೆಗೂಡಿ ಹೋರಾಟ ನಡೆಸುವ ಅಗತ್ಯತೆಯಿದೆ ಎಂದರು.

ಜಾತ್ಯಾತೀತ ನಾಗರಿಕ ಸಮಿತಿಯ ಅಧ್ಯಕ್ಷ ಡಾ| ದೇವಿಪ್ರಸಾದ್ ಶೆಟ್ಟಿ ಮಾತನಾಡಿ, ಕೇಂದ್ರ ಸರಕಾರ ಜಾರಿಗೆ ತರಲು ಹೊರಟಿರುವ ಕಾಯ್ದೆ ಸಂಪೂರ್ಣವಾಗಿ ಸಂವಿಧಾನ ವಿರೋಧಿಯಾಗಿದೆ. ಈ ಕಾಯ್ದೆ ಕೇವಲ ಮುಸಲ್ಮಾನರಿಗೆ ಮಾತ್ರ ಭಾದಕವಲ್ಲ. ಬದಲಾಗಿ ಇದರಿಂದ ಎರಡನೇ ಹಂತದಲ್ಲಿ ಕ್ರಿಶ್ಚಿಯನ್ ಮತ್ತು ಮೂರನೇ ಹಂತದಲ್ಲಿ ಹಿಂದೂಗಳಿಗೂ ತೊಂದರೆಯಾಗಲಿದೆ. ಈ ಬಗ್ಗೆ ಜನ ಕೂಡಲೇ ಎಚ್ಚೆತ್ತುಕೊಳ್ಳಬೇಕಿದೆ. ಇಲ್ಲದಿದ್ದರೆ ನಾವೆಲ್ಲಾ ಈ ಕಾಯ್ದೆಗೆ ಬಲಿಯಾಗುವುದು ಖಂಡಿತ ಎಂದರು.

ಪ್ರತಿಭಟನೆಯಲ್ಲಿ ಮಾಜಿ ಸಚಿವ ವಿನಯಕುಮಾರ್ ಸೊರಕೆ, ಜೆಡಿಎಸ್ ಜಿಲಾಧ್ಯಕ್ಷ ಯೋಗೀಶ್ ಶೆಟ್ಟಿ, ಶೇಖರ್ ಹೆಜಮಾಡಿ, ಅಶೋಕ್ ಕುಮಾರ್ ಕೊಡವೂರು, ಮಾಜಿ ಶಾಸಕ ಯು.ಆರ್. ಸಭಾಪತಿ, ಕಾಮ್ರೆಡ್ ವಿಶ್ವನಾಥ ರೈ, ಕಾಮ್ರೆಡ್ ಬಾಲಕೃಷ್ಣ ಶೆಟ್ಟಿ, ಕ್ರೈಸ್ತ ಧರ್ಮಗುರು ಫಾ| ವಿಲಿಯಂ ಮಾರ್ಟಿಸ್ ಉಡುಪಿ ಜಿಲ್ಲಾ ಉಲಮಾ ಒಕ್ಕೂಟದ ಅಶ್ರಫ್ ಸಖಾಫಿ ಕಣ್ಣಂಗಾರು, ಕಾಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನವೀನ್ಚಂದ್ರ ಸುವರ್ಣ, ವಿವಿಧ ಸಂಘಟನೆಗಳ ಪ್ರಮುಖರು ಉಪಸ್ಥಿತರಿದ್ದರು.


Spread the love