ಸುರತ್ಕಲ್ ಚೂರಿ ಇರಿತ ಪ್ರಕರಣ: ನಾಲ್ವರು ಆರೋಪಿಗಳು ಬಂಧನ
ಮಂಗಳೂರು: ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯ ಕಾನಾ ಪ್ರದೇಶದಲ್ಲಿ ನಡೆದ ಚೂರಿ ಇರಿತ ಪ್ರಕರಣವನ್ನು ಪೊಲೀಸರು ಭೇದಿಸಿ, ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಈ ಘಟನೆಯಲ್ಲಿ ಪ್ರಮುಖ ಆರೋಪಿ ಗುರುರಾಜ್ ಆಚಾರಿ ತಲೆಮರೆಸಿಕೊಂಡಿದ್ದು, ಪತ್ತೆ ಕಾರ್ಯ ಮುಂದುವರಿದಿದೆ.

ಅಕ್ಟೋಬರ್ 23 ರ ರಾತ್ರಿ ಸುಮಾರು 10.30 ಗಂಟೆಯ ವೇಳೆಗೆ ಕಾನಾ ದೀಪಕ್ ಬಾರ್ ಬಳಿ ಕ್ಷುಲ್ಲಕ ಕಾರಣಕ್ಕಾಗಿ ಹಸನ್ ಮುಕ್ಸಿತ್ ಮತ್ತು ನಿಝಾಂ ಎಂಬ ಯುವಕರ ಮೇಲೆ ಗುರುರಾಜ್ ಆಚಾರಿ ಮತ್ತು ಅವನ ಸಹಚರರಾದ ಅಲೆಕ್ಸ್ ಸಂತೋಷ್, ನಿತಿನ್ ಮತ್ತು ಸುಶಾಂತ್ ಚೂರಿಯಿಂದ ಇರಿದು ಕೊಲೆಗೆ ಯತ್ನಿಸಿದ್ದರು.
ಬಂಧಿತ ಆರೋಪಿಗಳನ್ನು ಸುರತ್ಕಲ್ ಕಾನಾ ನಿವಾಸಿ ಸುಶಾಂತ್ @ಕಡವಿ (29), ಕೆ ವಿ ಅಲೆಕ್ಸ್ (27), ನಿತಿನ್ (26), ಮತ್ತು ಆರೋಪಿಗಳಿಗೆ ಆಶ್ರಯ ನೀಡಿದ ಅರುಣ್ ಶೆಟ್ಟಿ (56) ಎಂದು ಗುರುತಿಸಲಾಗಿದೆ.
ಮುಖ್ಯ ಆರೋಪಿ ಗುರುರಾಜ್ ಆಚಾರಿ ಮತ್ತು ಆಶ್ರಯ ನೀಡಲು ಸಹಾಯ ಮಾಡಿದ ಅಶೋಕ್ ಎಂಬಾತ ಇನ್ನೂ ಪತ್ತೆಯಾಗಿಲ್ಲ. ಇವರ ಹುಡುಕಾಟ ಪೊಲೀಸರು ಮುಂದುವರಿಸಿದ್ದಾರೆ.
ಆರೋಪಿತರ ಪತ್ತೆ ಮತ್ತು ಬಂಧನ ಕಾರ್ಯಾಚರಣೆ ಮಂಗಳೂರು ನಗರ ಉಪ ಪೊಲೀಸ್ ಆಯುಕ್ತ (ಅಪರಾಧ ಮತ್ತು ಸಂಚಾರ) ರವಿಶಂಕರ್ ರವರ ನಿರ್ದೇಶನದಲ್ಲಿ, ಸಹಾಯಕ ಪೊಲೀಸ್ ಆಯುಕ್ತ (ಉತ್ತರ ಉಪವಿಭಾಗ) ಶ್ರೀಕಾಂತ್ ಕೆ ರವರ ಮಾರ್ಗದರ್ಶನದಲ್ಲಿ ಮತ್ತು ಸುರತ್ಕಲ್ ಪೊಲೀಸ್ ನಿರೀಕ್ಷಕ ಪ್ರಮೋದ್ ಕುಮಾರ್ ಪಿ ರವರ ನೇತೃತ್ವದಲ್ಲಿ ನಡೆದಿದ್ದು, ಕಾರ್ಯಾಚರಣೆಯಲ್ಲಿ ಪಿಎಸ್ಐ ಗಳು ರಾಘವೇಂದ್ರ ನಾಯ್ಕ್, ಜನಾರ್ಧನ ನಾಯ್ಕ್, ಶಶಿಧರ ಶೆಟ್ಟಿ, ಎಎಸ್ಐ ಗಳು ರಾಜೇಶ್ ಆಳ್ವ, ತಾರನಾಥ, ರಾಧಾಕೃಷ್ಣ ಮತ್ತು ಸಿಬ್ಬಂದಿಯರಾದ ಅಣ್ಣಪ್ಪ, ಉಮೇಶ್ ಕುಮಾರ್, ತಿರುಪತಿ, ಅಜಿತ್ ಮ್ಯಾಥ್ಯೂ, ರಾಮು ಕೆ, ಕಾರ್ತೀಕ್, ವಿನೋದ್, ಸಿಸಿಬಿ ಘಟಕದ ಅಧಿಕಾರಿಗಳು, ಎಸ್ಎಎಫ್ ಟೀಮ್ ಹಾಗೂ ಶ್ವಾನ ದಳ ಭಾಗವಹಿಸಿದ್ದರು.












