ಸುಹಾಸ್ ಶೆಟ್ಟಿ ಕೊಲೆ ಪ್ರಕರಣ: ಮೂವರು ಆರೋಪಿಗಳ ಸೆರೆ

Spread the love

ಸುಹಾಸ್ ಶೆಟ್ಟಿ ಕೊಲೆ ಪ್ರಕರಣ: ಮೂವರು ಆರೋಪಿಗಳ ಸೆರೆ

ಮಂಗಳೂರು: ಬಜ್ಪೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮೇ 1ರಂದು ರಾತ್ರಿ ನಡೆದ ರೌಡಿಶೀಟರ್ ಸುಹಾಸ್ ಶೆಟ್ಟಿ ಕೊಲೆ ಪ್ರಕರಣದ ಮೂವರು ಆರೋಪಿಗಳನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಕಳವಾರು ಗ್ರಾಮದ ಅಝರುದ್ದೀನ್ ಯಾನೆ ಅಝರ್ ಯಾನೆ ಅಜ್ಜು (29), ಮೂಲತಃ ಉಡುಪಿ ಜಿಲ್ಲೆಯ ಬೆಳಪು ಗ್ರಾಮದ ಪ್ರಸಕ್ತ ಬಜ್ಪೆಯಲ್ಲಿ ವಾಸವಾಗಿರುವ ಅಬ್ದುಲ್ ಖಾದರ್ ಯಾನೆ ನೌಫಲ್ (24), ಮೂಲತಃ ಫರಂಗಿಪೇಟೆ ಕುಂಪನಮಜಲಿನ ಪ್ರಸಕ್ತ ಹಾಸನ ಜಿಲ್ಲೆ ಕೆ.ಆರ್.ಪುರಂ ನಿವಾಸಿ ನೌಷಾದ್ ಯಾನೆ ವಾಮಂಜೂರು ನೌಷಾದ್ (39) ಬಂಧಿತ ಆರೋಪಿಗಳಾಗಿದ್ದಾರೆ.

ಆರೋಪಿಗಳ ಪೈಕಿ ಅಝರುದ್ದೀನ್ ಎಂಬಾತನ ವಿರುದ್ಧ ಈ ಹಿಂದೆ ಪಣಂಬೂರು, ಸುರತ್ಕಲ್, ಮುಲ್ಕಿ ಪೊಲೀಸ್ ರಾಣೆಗಳಲ್ಲಿ 3 ಕಳವು ಪ್ರಕರಣ ದಾಖಲಾಗಿದೆ. ಈತನು ಸುಹಾಸ್ ಶೆಟ್ಟಿಯ ಚಲನವಲನದ ಬಗ್ಗೆ ಮಾಹಿತಿಯನ್ನು ನೀಡಿ ಕೊಲೆಗೆ ಸಹಕರಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿ ಅಬ್ದುಲ್ ಖಾದರ್ ಎಂಬಾತನು ಆರೋಪಿಗಳು ಕೊಲೆ ಕೃತ್ಯ ನಡೆಸಿದ ನಂತರ ಕಾರಿನಲ್ಲಿ ಪರಾರಿಯಾಗುವ ವೇಳೆ ಆರೋಪಿಗಳಿಗೆ ಸಹಕರಿಸಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಇನ್ನೋರ್ವ ಆರೋಪಿ ನೌಷಾದ್ ಎಂಬಾತನು ಇತರ ಆರೋಪಿಗಳ ಜೊತೆ ಕೊಲೆಗೆ ಸಂಚು ರೂಪಿಸಿದ್ದ. ಈತನು ಈ ಹಿಂದೆ ಸುರತ್ಕಲ್, ಬಜ್ಪೆ, ಮೂಡುಬಿದಿರೆ, ಮಂಗಳೂರು ಉತ್ತರ, ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಗಳಲ್ಲಿ ಕೊಲೆ, ಕೊಲೆಯತ್ನ, ದರೋಡೆಗೆ ಸಂಚು ಸಹಿತ 6 ಪ್ರಕರಣಗಳಲ್ಲಿ ಭಾಗಿಯಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಈ ಪೈಕಿ ಅಝರುದ್ದೀನ್‌ಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಇತರ ಇಬ್ಬರನ್ನು ಹೆಚ್ಚಿನ ವಿಚಾರಣೆಗಾಗಿ 7 ದಿನಗಳ ಪೊಲೀಸ್ ಕಸ್ಟಡಿಗೆ ಪಡೆಯಲಾಗಿದೆ. ಈ ಕೊಲೆ ಪ್ರಕರಣದಲ್ಲಿ ಭಾಗಿಯಾದ ಇತರ ಆರೋಪಿಗಳ ಪತ್ತೆ ಕಾರ್ಯ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.


Spread the love
Subscribe
Notify of

0 Comments
Inline Feedbacks
View all comments