ಸೋಲುವ ಭೀತಿಯಿಂದ ಪ್ರಧಾನಿ ಮೋದಿಯವರಿಂದ ವ್ಯಕ್ತಿಗತ ದೂಷಣೆ – ಪ್ರಮೋದ್ ಮಧ್ವರಾಜ್

Spread the love

ಸೋಲುವ ಭೀತಿಯಿಂದ ಪ್ರಧಾನಿ ಮೋದಿಯವರಿಂದ ವ್ಯಕ್ತಿಗತ ದೂಷಣೆ – ಪ್ರಮೋದ್ ಮಧ್ವರಾಜ್

ಉಡುಪಿ: ದೇಶಕ್ಕಾಗಿ ಬಲಿದಾನ ಮಾಡಿದ ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರ ಬಗ್ಗೆ ಮೋದಿಯವರ ಹೇಳಿಕೆ ಖಂಡನೀಯ. ಬೋಫೋರ್ಸ್ ಪ್ರಕರಣದಲ್ಲಿ ನ್ಯಾಯಾಲಯವೇ ರಾಜೀವ್ ಗಾಂಧಿಯವರನ್ನು ದೋಷಮುಕ್ತರನ್ನಾಗಿಸಿದೆ. ಹೀಗಿರುವಾಗ 28 ವರ್ಷಗಳ ಹಿಂದೆ ಬಾಂಬ್ ಸ್ಫೋಟಕ್ಕೆ ಬಲಿಯಾದ ರಾಜೀವ್ ಗಾಂಧಿಯವರನ್ನು ಸಾಯುವಾಗ ನಂ.1 ಭ್ರಷ್ಟಾಚಾರಿಯಾಗಿ ಸತ್ತರು ಎಂದು ಟೀಕಿಸುವ ಮೂಲಕ ಮೋದಿಯವರು ಪ್ರಧಾನಿಯ ಹುದ್ದೆಗೆ ಕಳಂಕವನ್ನು ತಂದಿದ್ದಾರೆ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಅಶೋಕ್ ಕುಮಾರ್ ಕೊಡವೂರು ಹೇಳಿದರು.

ಅವರು ಉಡುಪಿ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಜರಗಿದ ಜಿಲ್ಲಾ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಹಾಗೂ ಬ್ಲಾಕ್ ಅಧ್ಯಕ್ಷರುಗಳ ಸಬೆಯನ್ನು ಉದ್ದೇಶಿಸಿ ಮಾತನಾಡಿದರು.

ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಶ್ರೀ ಪ್ರಮೋದ್ ಮಧ್ವರಾಜ್‍ರವರು ಮಾತನಾಡುತ್ತಾ ಅನಿವಾರ್ಯ ಕಾರಣಗಳಿಂದಾಗಿ ಉಡುಪಿ-ಚಿಕ್ಕಮಗಳೂರು ಕ್ಷೇತ್ರ ಜೆಡಿಎಸ್ ಪಾಲಾಯಿತು. ಈ ಹಿನ್ನಲೆಯಲ್ಲಿ ಅನಿರೀಕ್ಷಿತವಾಗಿ ಮೈತ್ರಿ ಪಕ್ಷದ ಅಭ್ಯರ್ಥಿಯಾಗಿ ನಾನು ಸ್ಪರ್ಧಿಸಬೇಕಾಯಿತು. ಪಕ್ಷದ ಹಾಗೂ ದೇಶದ ಹಿತದೃಷ್ಟಿಯಿಂದ ಎಲ್ಲಾ ಕಾರ್ಯಕರ್ತರು ಪ್ರಾಮಾಣಿಕವಾಗಿ ಒಮ್ಮನಸ್ಸಿನಿಂದ ನನ್ನನ್ನು ಬೆಂಬಲಿಸಿದ್ದಾರೆ. ನನ್ನನ್ನು ಬೆಂಬಲಿಸಿ ಸಹಕರಿಸಿದ ಎಲ್ಲಾ ಕಾರ್ಯಕರ್ತರಿಗೆ ಕೃತಜ್ಞತೆ ಅರ್ಪಿಸುತ್ತೇನೆ. ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಮಿತ್ರ ಪಕ್ಷಗಳೊಂದಿಗೆ ಕೇಂದ್ರದಲ್ಲಿ ಅಧಿಕಾರವನ್ನು ಪಡೆಯುವುದು ಖಂಡಿತ. ಈಗಾಗಲೇ ದೇಶದಲ್ಲಿ ಬದಲಾವಣೆಯ ಗಾಳಿ ಗೋಚರಿಸುತ್ತಿದೆ ಎಂದರು.

ಮಾಜಿ ಶಾಸಕರಾದ ಯು.ಆರ್. ಸಭಾಪತಿಯವರು ಮಾತನಾಡಿ ಮೋದಿ ಆಡಳಿತದಲ್ಲಿ ಜನಸಾಮಾನ್ಯರ ನೆಮ್ಮದಿಗೆ ಭಂಗ ಉಂಟಾಗಿದೆ. ದೇಶ ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿದೆ. ಇದನ್ನು ಮರೆ ಮಾಚಲು ನರೇಂದ್ರ ಮೋದಿಯವರು ಸಭ್ಯತೆಯ ಗಡಿ ದಾಟಿ ವ್ಯಕ್ತಿಗತ ದೂಷಣೆಗೆ ಒತ್ತು ನೀಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಪಂಚಾಯತ್ ಚುನಾವಣೆಗಳು ಬರಲಿವೆ. ಇದಕ್ಕೆ ಈಗಿಂದೀಗಲೇ ಯುವಕರನ್ನು ಸಂಘಟಿಸಿ ಮುಂಚೂಣಿ ಘಟಕಗಳನ್ನು ಸಕ್ರಿಯಗೊಳಿಸಬೇಕಾಗಿದೆ. ನಗರ ಸಮಿತಿಗಳನ್ನು ರಚಿಸಿ ನಗರದಲ್ಲಿ ಪಕ್ಷವನ್ನು ಇನ್ನಷ್ಟು ಸದೃಡಗೊಳಿಸುವ ಯೋಜನೆಯನ್ನು ರೂಪಿಸಬೇಕಾಗಿದೆ ಎಂದರು.

ಕೆ.ಪಿ.ಸಿ.ಸಿ. ಪ್ರಧಾನ ಕಾರ್ಯದರ್ಶಿ ಎಂ.ಎ. ಗಫೂರ್‍ರವರು ಮಾತನಾಡುತ್ತಾ ಪ್ರಧಾನಿ ಮೋದಿಯವರು ಅನೇಕ ಬಾರಿ ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘನೆ ಮಾಡಿದರೂ ಚುನಾವಣಾ ಆಯೋಗ ಯಾವುದೇ ಕ್ರಮ ಕೈಗೊಳ್ಳದೆ ಅಸಹಾಯಕ ಸ್ಥಿತಿಯಲ್ಲಿ ಕೈಚೆಲ್ಲಿ ಕುಳಿತಿದೆ. ಮೋದಿಯವರು ಹತಾಶರಾಗಿ ಹೇಳಿಕೆಗಳನ್ನು ನೀಡುತ್ತಿರುವುದು ಬಿಜೆಪಿಯ ಸೋಲಿನ ಭೀತಿಯಿಂದಲೇ ಎಂದರು.

ಸಭೆಯಲ್ಲಿ ಪಕ್ಷದ ಮುಖಂಡರಾದ ಬಿ. ಹಿರಿಯಣ್ಣ, ನೀರೆಕೃಷ್ಣ ಶೆಟ್ಟಿ, ಸುದಾಕರ ಕೋಟ್ಯಾನ್, ಕಿಶನ್ ಹೆಗ್ಡೆ ಕೊಳ್ಕೆಬೈಲ್, ಭಾಸ್ಕರ್ ರಾವ್ ಕಿದಿಯೂರು, ಮಲ್ಯಾಡಿ ಶಿವರಾಮ ಶೆಟ್ಟಿ, ರಮೇಶ್ ಶೆಟ್ಟಿ, ವೆರೋನಿಕಾ ಕರ್ನೇಲಿಯೋ, ಗೀತಾ ವಾಗ್ಲೆ, ಸರಸು ಡಿ. ಬಂಗೇರಾ, ಡಾ. ಸುನಿತಾ ಶೆಟ್ಟಿ, ರೊಶನಿ ಒಲಿವರ್, ಕೇಶವ ಕೋಟ್ಯಾನ್, ಮದನ್ ಕುಮಾರ್, ಮಂಜುನಾಥ ಪೂಜಾರಿ, ಶಂಕರ್ ಕುಂದರ್, ಕಾಪು ದಿವಾಕರ ಶೆಟ್ಟಿ, ಶಬ್ಬೀರ್ ಅಹಮ್ಮದ್, ಪ್ರಖ್ಯಾತ್ ಶೆಟ್ಟಿ, ಶಶಿಧರ ಶೆಟ್ಟಿ ಎಲ್ಲೂರು, ನಿತ್ಯಾನಂದ ಶೆಟ್ಟಿ, ಸತೀಶ್ ಅಮೀನ್ ಪಡುಕರೆ, ವಿಶ್ವಾಸ್ ಅಮೀನ್, ಹಬೀಬ್ ಅಲಿ, ಸುರೇಶ್ ನಾಯ್ಕ್, ಮಹಾಬಲ ಕುಂದರ್, ಉದ್ಯಾವರ ನಾಗೇಶ್ ಕುಮಾರ್, ದಿಲೀಪ್ ಹೆಗ್ಡೆ ಕುಕ್ಕೆಹಳ್ಳಿ, ಇಸ್ಮಾಯಿಲ್ ಆತ್ರಾಡಿ, ಸತೀಶ್ ಪೂಜಾರಿ, ನಾರಾಯಣ ಕುಂದರ್, ಬಾಲಕೃಷ್ಣ ಪೂಜಾರಿ, ಜನಾರ್ದನ ಭಂಡಾರ್ಕಾರ್, ರಮೇಶ್ ಕಾಂಚನ್ ಮೊದಲಾದವರು ಉಪಸ್ಥಿತರಿದ್ದರು. ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಅಲೆವೂರು ಹರೀಶ್ ಕಿಣಿ ಕಾರ್ಯಕ್ರಮ ನಿರ್ವಹಿಸಿ, ಧನ್ಯವಾದವಿತ್ತರು.


Spread the love