ದಕ ಜಿಲ್ಲಾ ಯುವ ಜೆಡಿಎಸ್ ವತಿಯಿಂದ ರೈಲ್ವೆ ಸಮಸ್ಯೆಗಳ ಕುರಿತು ಸಚಿವ ಸೋಮಣ್ಣಗೆ ಮನವಿ ಸಲ್ಲಿಕೆ

Spread the love

ದಕ ಜಿಲ್ಲಾ ಯುವ ಜೆಡಿಎಸ್ ವತಿಯಿಂದ ರೈಲ್ವೆ ಸಮಸ್ಯೆಗಳ ಕುರಿತು ಸಚಿವ ಸೋಮಣ್ಣಗೆ ಮನವಿ ಸಲ್ಲಿಕೆ

ಮಂಗಳೂರು: ಜನತಾದಳ (ಜಾತ್ಯತೀತ) ಪಕ್ಷದ ದಕ್ಷಿಣ ಕನ್ನಡ ಜಿಲ್ಲಾ ಯುವ ಘಟಕದ  ಜಿಲ್ಲಾಧ್ಯಕ್ಷರಾದ ಅಕ್ಷಿತ್ ಸುವರ್ಣ  ನೇತ್ರತ್ವದ ನಿಯೋಗವು ಶನಿವಾರ ಮಂಗಳೂರಿನಲ್ಲಿ ಕೇಂದ್ರ ರೈಲ್ವೆ ಹಾಗೂ ಜಲಶಕ್ತಿ ರಾಜ್ಯ ಸಚಿವರಾದ ಶ್ರೀ ವಿ. ಸೋಮಣ್ಣ ಅವರನ್ನು ಭೇಟಿ ಮಾಡಿ, ಮಂಗಳೂರು ಮತ್ತು ಕರಾವಳಿ ಕರ್ನಾಟಕ ಭಾಗದ ಬಹುಕಾಲದ ಪ್ರಮುಖ ರೈಲ್ವೆ ಸಮಸ್ಯೆಗಳ ಕುರಿತು ಸಮಗ್ರ ಮನವಿಪತ್ರ ಸಲ್ಲಿಸಿತು

 ಕರಾವಳಿ ಭಾಗದ ಜನರ ಬಹುಕಾಲದ ಬೇಡಿಕೆಯಾದ ಪ್ರತ್ಯೇಕ “ಮಂಗಳೂರು ರೈಲ್ವೆ ವಿಭಾಗ” ರಚನೆಗೆ ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿತು. ಪ್ರಸ್ತುತ ಮಂಗಳೂರು ಪಾಲಕ್ಕಾಡ್ ರೈಲ್ವೆ ವಿಭಾಗದ ಅಧೀನದಲ್ಲಿರುವುದರಿಂದ ಆಡಳಿತಾತ್ಮಕ ವಿಳಂಬಗಳು ಉಂಟಾಗುತ್ತಿದ್ದು, ಕರಾವಳಿ ಭಾಗದ ರೈಲ್ವೆ ಮೂಲಸೌಕರ್ಯ ಅಭಿವೃದ್ಧಿ ಹಾಗೂ ಪ್ರಯಾಣಿಕರ ಅಗತ್ಯತೆಗಳಿಗೆ ಸಮರ್ಪಕ ಆದ್ಯತೆ ಸಿಗುತ್ತಿಲ್ಲ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.

ಪ್ರತ್ಯೇಕ ಮಂಗಳೂರು ರೈಲ್ವೆ ವಿಭಾಗ ಸ್ಥಾಪನೆಯಾದರೆ ರೈಲ್ವೆ ಅಭಿವೃದ್ಧಿ ಕಾಮಗಾರಿಗಳಿಗೆ ವೇಗ ಸಿಗುವುದರ ಜೊತೆಗೆ ಪ್ರಯಾಣಿಕರ ಸೌಲಭ್ಯ, ಕಾರ್ಯಾಚರಣಾ ದಕ್ಷತೆ ಮತ್ತು ಹೊಸ ಯೋಜನೆಗಳ ಅನುಷ್ಠಾನ ಸುಗಮವಾಗಲಿದೆ ಎಂದು ನಿಯೋಗ ತಿಳಿಸಿತು.

ಇದೇ ವೇಳೆ ಮಂಗಳೂರಿನ ಪಾಂಡೇಶ್ವರ ರೈಲ್ವೆ ಲೆವೆಲ್ ಕ್ರಾಸಿಂಗ್‌ನಿಂದ ಉಂಟಾಗುತ್ತಿರುವ ಭಾರೀ ಟ್ರಾಫಿಕ್ ದಟ್ಟಣೆ ಸಮಸ್ಯೆಯನ್ನು ಸಚಿವರ ಗಮನಕ್ಕೆ ತರಲಾಯಿತು. ಬಂಡರ್ ಯಾರ್ಡ್‌ಗೆ ರೈಲು ಸಂಚಾರಕ್ಕಾಗಿ ದಿನದಲ್ಲಿ ಅನೇಕ ಬಾರಿ ಗೇಟ್ ಮುಚ್ಚಲಾಗುತ್ತಿರುವುದರಿಂದ ವಾಹನ ಸವಾರರು, ವಿದ್ಯಾರ್ಥಿಗಳು, ಉದ್ಯೋಗಿಗಳು ಹಾಗೂ ತುರ್ತು ಸೇವಾ ವಾಹನಗಳಿಗೆ ತೀವ್ರ ತೊಂದರೆ ಉಂಟಾಗುತ್ತಿದೆ ಎಂದು ವಿವರಿಸಲಾಯಿತು. ಈ ಸಮಸ್ಯೆಗೆ ಶಾಶ್ವತ ಪರಿಹಾರವಾಗಿ ಮೇಲ್ಸೇತುವೆ ಅಥವಾ ಅಂಡರ್‌ಪಾಸ್ ನಿರ್ಮಾಣಕ್ಕೆ ತಕ್ಷಣ ಅನುಮೋದನೆ ನೀಡುವಂತೆ ಮನವಿ ಮಾಡಲಾಯಿತು.

ಬೆಂಗಳೂರು–ಮಂಗಳೂರು ರೈಲ್ವೆ ಸಂಪರ್ಕದ ಸುಧಾರಣೆಯ ಅಗತ್ಯತೆಯನ್ನೂ ನಿಯೋಗ ಒತ್ತಿ ಹೇಳಿತು. ಶಿರಾಡಿ ಘಾಟ್ ವಿಭಾಗದಲ್ಲಿನ ತೀವ್ರ ತಿರುವುಗಳು ಹಾಗೂ ಏರುಬೀಳುಗಳಿಂದ ರೈಲುಗಳ ವೇಗ ಕುಂಠಿತವಾಗುತ್ತಿದ್ದು ಪ್ರಯಾಣ ಸಮಯ ಹೆಚ್ಚುತ್ತಿದೆ. ಜೊತೆಗೆ ಹಾಸನ–ಮಂಗಳೂರು ರೈಲ್ವೆ ಮಾರ್ಗದಲ್ಲಿ ಸಂಪೂರ್ಣ ಡಬಲ್ ಟ್ರ್ಯಾಕ್ ಮತ್ತು ಪೂರ್ಣ ವಿದ್ಯುದೀಕರಣದ ಕೊರತೆಯಿಂದ ಹೆಚ್ಚುವರಿ ರೈಲು ಸೇವೆಗಳಿಗೆ ಅಡಚಣೆ ಉಂಟಾಗುತ್ತಿದೆ ಎಂದು ವಿವರಿಸಲಾಯಿತು.

ಬೆಂಗಳೂರು ಮತ್ತು ಮಂಗಳೂರು ನಡುವೆ ಇನ್ನಷ್ಟು ನೇರ, ವೇಗದ ಹಾಗೂ ಪ್ರಯಾಣಿಕ ಸ್ನೇಹಿ ಸಮಯದ ರೈಲು ಸೇವೆಗಳನ್ನು ಆರಂಭಿಸುವಂತೆ ಕೂಡ ಸಚಿವರಿಗೆ ಮನವಿ ಸಲ್ಲಿಸಲಾಯಿತು. ಇತ್ತೀಚೆಗೆ ಆರಂಭವಾದ ಕೆಲವು ವೇಗದ ರೈಲು ಸೇವೆಗಳು ಮಂಗಳೂರಿಗೆ ಸಮರ್ಪಕವಾಗಿ ಸಂಪರ್ಕ ಕಲ್ಪಿಸದಿರುವುದು ಕರಾವಳಿ ಭಾಗದ ಜನರಲ್ಲಿ ನಿರಾಸೆ ಮೂಡಿಸಿದೆ ಎಂದು ನಿಯೋಗ ತಿಳಿಸಿತು.

ಮಂಗಳೂರು ರಾಜ್ಯದ ಪ್ರಮುಖ ಶೈಕ್ಷಣಿಕ, ವಾಣಿಜ್ಯ, ಕೈಗಾರಿಕಾ ಹಾಗೂ ಬಂದರು ನಗರವಾಗಿರುವುದರಿಂದ ಈ ಭಾಗದ ರೈಲ್ವೆ ಅಭಿವೃದ್ಧಿಗೆ ವಿಶೇಷ ಆದ್ಯತೆ ನೀಡುವುದು ಅತ್ಯವಶ್ಯಕ ಎಂದು ಮನವಿಯಲ್ಲಿ ಉಲ್ಲೇಖಿಸಲಾಯಿತು.

ಮನವಿಯನ್ನು ಸ್ವೀಕರಿಸಿದ ಕೇಂದ್ರ ಸಚಿವ ವಿ. ಸೋಮಣ್ಣ ಅವರು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ ಅಗತ್ಯ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.

ಸಂಸದ ಬ್ರಿಜೇಶ್ ಚೌಟ ಮತ್ತು ದ.ಕ. ಜಿಲ್ಲಾ ಬಿಜೆಪಿ ಅದ್ಯಕ್ಷ ಸತೀಶ್ ಕುಂಪಲ ಸಚಿವರ ಜೊತೆಗಿದ್ದರು

ನಿಯೋಗದಲ್ಲಿ ರಾಜ್ಯ ಮೀನುಗಾರ ಘಟಕ ಅದ್ಯಕ್ಷ ರತ್ನಕರ್ ಸುವರ್ಣ, ಜಿಲ್ಲಾ ಕಾರ್ಯದ್ಯಕ್ಷರಾದ ವಸಂತ್ ಪೂಜಾರಿ , ಇಕ್ಬಲ್ ಅಹಮದ್ ಮುಲ್ಕಿ ,ಜಿಲ್ಲಾ ಮಹಾ ಪ್ರಧಾನ ಕಾರ್ಯದರ್ಶಿ ಯೋಗಿಶ್ ಶೆಟ್ಟಿ ಜಪ್ಪು , ಸೇವಾ ದಳ ಮಾಜಿ ಅದ್ಯಕ್ಷ ನಜೀರ್ ಸಾಮಾನಿಗೆ ಯುವ ಘಟಕ ಪ್ರಧಾನ ಕಾರ್ಯದರ್ಶಿ ಹೀತೆಶ್ ರೈ , ಯುವ ಮುಖಂಡ ಸುಷಂತ್ , ಪ್ರಶಾಂತ್ ಭಟ್ ಕಡಬ ಮತ್ತಿತರರು ಉಪಸ್ಥಿತ ರಿದ್ದರು


Spread the love
Subscribe
Notify of

0 Comments
Inline Feedbacks
View all comments