ಇಸ್ವತ್ತು ತಂತ್ರಾಂಶದಲ್ಲಿ ನಮೂನೆ ಎ11, 11ಬಿ ವಿತರಣೆಯಲ್ಲಿ ತಾಂತ್ರಿಕ ದೋಷ ಸರಿಪಡಿಸಲು ಹರೀಶ್ ಕಿಣಿ ಮನವಿ
ಇ-ಸ್ವತ್ತು ತಂತ್ರಾಂಶದಲ್ಲಿ ನಮೂನೆ 11ಎ & 11 ಬಿ ವಿತರಿಸುವಲ್ಲಿ ಎದುರಾಗುತ್ತಿರುವ ತಾಂತ್ರಿಕ . ದೋಷಗಳ ಪರಿಹರಿಸುವಂತೆ ವಿಧಾನ ಪರಿಷತ್ ಸದಸ್ಯ ಡಾ. ಮಂಜುನಾಥ್ ಭಂಡಾರಿ ಅವರಿಗೆ ಉಡುಪಿ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಅಲೆವೂರು ಹರೀಶ್ ಕಿಣಿ ಅವರು ಮನವಿ ಸಲ್ಲಿಸಿದರು.
ಇ ಸ್ವತ್ತು 2.0 ತಂತ್ರಾಂಶಜಾರಿಯಾದಾಗಿನಿಂದ ತಾಂತ್ರಿಕ ದೋಷಗಳಿದ್ದು ಹಲವು ತಾಂತ್ರಿಕ ದೋಷಗಳು ಶಾಶ್ವತ ‘ಪರಿಹಾರವಾಗಿದೆ. ಇನ್ನೂ ಕೆಲವು ತಾಂತ್ರಿಕ ದೋಷಗಳಿಂದಾಗಿ ದಿನಂಪ್ರತಿ ಸಾರ್ವಜನಿಕರಿಗೆ ಗ್ರಾಮಪಂಚಾಯತ್ ಗಳು ನಮೂನೆ 11 ಎ ಮತ್ತು 11 ಬಿ ವಿತರಿಸುತ್ತಿಲ್ಲ. ಸಾರ್ವಜನಿಕರು ಕಟ್ಟಡ ಸಂಬಂಧಿತ ನಮೂನೆ 11ಎ ಮತ್ತು 11 ಬಿ ಗೆ ಅರ್ಜಿ ಸಲ್ಲಿಸುವಾಗ ಮೆಸ್ಕಾಂ ಐಡಿ ಯನ್ನು ನಮೂದಿಸುವುದು ಕಡ್ಡಾಯವಾಗಿದೆ. ಆದರೆ ಕಳೆದ ಒಂದು ತಿಂಗಳಿನಿಂದ ಮೆಸ್ಕಾಂ ಐಡಿ ನಮೂದಿಸಲು ಸಾಧ್ಯವಾಗದೆ ಸಾರ್ವಜನಿಕರಿಗೆ ಅರ್ಜಿಗಳನ್ನೇ ಸಲ್ಲಿಸಲು ಆಗುತ್ತಿಲ್ಲ.
ಸರಕಾರದ ಯೋಜನೆಯಡಿ ಮಂಜೂರಾದ 94CC ಮತ್ತು 94 C ಆಸ್ತಿಗಳನ್ನು ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಯಿಂದ ಅನುಮೋದನೆಗೊಂಡು, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಅನುಮೋದನೆ ನೀಡುವಾಗ ಸರ್ವರ್ ಸಮಸ್ಯೆ ಬರುತ್ತಿದ್ದು ಗ್ರಾಮಪಂಚಾಯತ್ ಗಳಲ್ಲಿ ಇ ಸ್ವತ್ತು ವಿತರಿಸಲು ಸಮಸ್ಯೆಯಾಗುತ್ತಿದೆ. ಸಾರ್ವಜನಿಕರು ಕ್ರಯ ಸಾಧನದ ಮೂಲಕ ಅರ್ಜಿ ಸಲ್ಲಿಸುವುದು ಕಡ್ಡಾಯವಿದ್ದು, ಕೆಲವೊಂದು ಕ್ರಯ ಸಾಧನದಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಅನುಮೋದನೆ ನೀಡುವಾಗ ಚೆಕ್ ಬಂಧಿ ನಮೂದಿಸಲು ಸಾಧ್ಯವಾಗುತ್ತಿಲ್ಲ.
ಇ ಸ್ವತ್ತು 2.0 ಮೂಲಕ ಸೃಜಿಸಲಾದ ಆಸ್ತಿಗಳು ಪಂಚತಂತ್ರ 2.0 ತಂತ್ರಾಂಶದಲ್ಲಿ ಸ್ವಯಂ ಲೆಕ್ಕಾಚಾರವಾಗದೆ ಹಲವಾರು ಆಸ್ತಿಗಳಿಗೆ ತೆರಿಗೆ ನಮೂದಾಗದೆ ಸಾರ್ವಜನಿಕರು ಆಸ್ತಿ ಪ್ರಮಾಣ ಪತ್ರ ಪಡೆಯಲು ಸಾಧ್ಯವಾಗುತ್ತಿಲ್ಲ. ಅಪಾರ್ಟೆಂಟ್ ವಿವರಗಳನ್ನು ಅನುಮೋದಿಸುವಾಗ ಮತ್ತು 11 ಬಿ ಯಿಂದ 11 ಎ ಗೆ ಬದಲಾಯಿಸುವಾಗ ತಾಂತ್ರಿಕ ಸಮಸ್ಯೆ ಬರುತ್ತಿದೆ. ಇ ಸ್ವತ್ತು 2.0 ತಂತ್ರಾಂಶದ ಮೂಲಕ ಸಲ್ಲಿಸಿದ ಅರ್ಜಿಗಳ ಸ್ಥಿತಿಯನ್ನು ಅರಿಯಲು ಸಾರ್ವಜನಿಕರಿಗೆ ಸಾಧ್ಯವಾಗುತ್ತಿಲ್ಲ. ಆದುದರಿಂದ ಈ ಎಲ್ಲಾ ತಾಂತ್ರಿಕ ದೋಷಗಳಿಗೆ ಶೀಘ್ರ ಪರಿಹಾರ ನೀಡುವಂತೆ ಮನವಿ ಮಾಡಲಾಯಿತು.













