ಮನಮೋಹನ್ ಸಿಂಗ್ ಮೌನಿಯಲ್ಲ, ಪ್ರಧಾನಿ ಮೋದಿ ಮೌನಿ: ಮಾಜಿ ಸಚಿವ ಕೆ. ಜಯಪ್ರಕಾಶ ಹೆಗ್ಡೆ ಕಿಡಿ
ಕುಂದಾಪುರ: ಕೇಂದ್ರ ಸರ್ಕಾರದ ತಪ್ಪುಗಳನ್ನು ಚರ್ಚೆ ಮಾಡಲು ರಾಜ್ಯದ ಸಂಸದರು ತಯಾರಿಲ್ಲ. ಕೇಂದ್ರದಲ್ಲಿ ಹಿಂದೆ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗ ಅಂದಿನ ಪ್ರಧಾನಿ ಮನಮೋಹನ್ಸಿಂಗ್ ಅವರನ್ನು ಮೌನ ಸಿಂಗ್ ಎಂದು ಟೀಕಿಸುತ್ತಿದ್ದ ಬಿಜೆಪಿ ಇಂದು ಹಗರಣಗಳು ನಡೆಯುತ್ತಿದ್ದರೂ ತುಟಿ ಬಿಚ್ಚುತ್ತಿಲ್ಲ. ಅಂದು ಮನಮೋಹನ್ಸಿಂಗ್ ಮೌನ ಸಿಂಗ್ ಆಗಿರಲಿಲ್ಲ. ಆದರೆ ಇಂದು ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಸಚಿವರು ಮೌನವಾಗಿದ್ದಾರೆ ಎಂದು ಮಾಜಿ ಸಚಿವ ಕೆ. ಜಯಪ್ರಕಾಶ ಹೆಗ್ಡೆ ಟೀಕಿಸಿದರು.

ಬುಧವಾರ ನಗರದ ಶಾಸ್ತ್ರೀವೃತ್ತದ ಫ್ಲೈಓವರ್ ಕೆಳಭಾಗದಲ್ಲಿ ನೀಟ್ ಪ್ರಶ್ನೆಪತ್ರಿಕೆ ಸೋರಿಕೆಯ ವಿರುದ್ದ ಕುಂದಾಪುರದ ಎನ್ಎಸ್ಯುಐ ಆಯೋಜಿಸಿದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.
ನೀಟ್ ಪ್ರಶ್ನೆಪತ್ರಿಕೆ ಹಗರಣದಿಂದಾಗಿ ಇಂದು ಲಕ್ಷಾಂತರ ವಿದ್ಯಾರ್ಥಿಗಳ ಬದುಕು ಬೀದಿಗೆ ಬಂದಿದೆ. ನೀಟ್ ಪ್ರಶ್ನೆಪತ್ರಿಕೆ ಸೋರಿಯಾಗಿಲ್ಲ, ಮಾರಾಟವಾಗಿದೆ. ಸಮಾಜದಲ್ಲಿ ಅತ್ಯಂತ ಗೌರವ ಕೊಡುವ ವೃತ್ತಿ ಇದ್ದರೆ ಅದು ಶಿಕ್ಷಕ ವೃತ್ತಿ. ಆದರೆ ಪ್ರಶ್ನೆ ಪತ್ರಿಕೆ ತಯಾರಿ ಮಾಡಿದ ಶಿಕ್ಷಕರೇ ಬಂಧನಕ್ಕೊಳಗಾಗಿರುವುದು ದುರಂತ. ವಿದೇಶದಲ್ಲಿ ಪತ್ರಕರ್ತರು ಪ್ರಶ್ನೆ ಕೇಳಿದಾಗ ಉತ್ತರ ಹೇಳದೇ ಪ್ರಧಾನಿ ಮೋದಿಯವರು ಎದ್ದು ಹೋಗುತ್ತಾರೆ. ಆರ್ಥಿಕ ವ್ಯವಸ್ಥೆ ಏರುಪೇರಾದಾಗ ನಿರ್ಮಲಾ ಸೀತರಾಮನ್ ಅವರು ಕಾಣೆಯಾಗುತ್ತಾರೆ. ಈಗ ನೀಟ್ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆಯಾದಾಗ ಧರ್ಮೇಂದ್ರ ಪ್ರಧಾನ್ ಅವರು ಕಾಣೆಯಾಗಿದ್ದಾರೆ ಎಂದರು.
ವೈದ್ಯಕೀಯ ಪ್ರವೇಶಾತಿ ಪರೀಕ್ಷೆ ನಡೆಸಲು ರಾಜ್ಯ ಸರ್ಕಾರಕ್ಕೆ ಬಿಡಬೇಕು. ಸಿಇಟಿ ಮೂಲಕ ಪರೀಕ್ಷೆ ನಡೆಯಲಿ. ಈ ಹಿಂದೆ ಸಿಇಟಿ ಪರೀಕ್ಷೆ ಇದ್ದಾಗ ಎಂದಿಗೂ ಪ್ರಶ್ನೆ ಪತ್ರಿಕೆ ಸೋರಿಕೆಯಾಗಲಿಲ್ಲ. ಮಾರಾಟವೂ ಆಗಲಿಲ್ಲ. ಪ್ರಶ್ನೆ ಪತ್ರಿಕೆ ಮಾರಾಟದಲ್ಲಿ ಯಾರ್ಯಾರು ತೊಡಗಿಕೊಂಡಿದ್ದಾರೋ ಅವರೆಲ್ಲರ ವಿರುದ್ದ ತನಿಖೆಯಾಗಿ ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು. ನೀಟ್ ಪರೀಕ್ಷೆಯನ್ನು ಕೇಂದ್ರ ಸರ್ಕಾರದಿಂದ ಮಾಡುವುದನ್ನು ಬಿಟ್ಟು ನೇರವಾಗಿ ರಾಜ್ಯ ಸರ್ಕಾರದ ಸಿಇಟಿ ಮೂಲಕ ನಡೆಸಿ ರಾಜ್ಯದ ಮಕ್ಕಳಿಗೆ ಹೆಚ್ಚೆಚ್ಚು ಮೆಡಿಕಲ್ ಸೀಟ್ ಗಳು ಸಿಗುವಂತಾಗಬೇಕು ಎಂದರು.
ಚರ್ಚೆ ಮಾಡುವ ಪ್ರತಿನಿಧಿಗಳನ್ನು ಆರಿಸಿ:
ಡಿಸೇಲ್ ದರ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಇದರಿಂದ ಪ್ರತಿಯೊಂದು ಸಾಮಾನ್ಯ ವಸ್ತುವಿನ ದರ ಜಾಸ್ತಿಯಾಗುತ್ತದೆ. ಮುಂದಿನ ದಿನದಲ್ಲಿ ಸಮಸ್ಯೆ ಪರಿಹಾರ ಮಾಡಬೇಕಾದರೆ ಜವಾಬ್ದಾರಿಯುತ ಪ್ರತಿನಿಧಿಗಳನ್ನು ಆಯ್ಕೆ ಮಾಡಿ ಕಳುಹಿಸಬೇಕು. ಲೋಕಸಭೆ ಹಾಗೂ ವಿಧಾನಸಭೆಯಲ್ಲಿ ಚರ್ಚೆ ಮಾಡುವಂತಹ ಪ್ರತಿನಿಧಿಗಳನ್ನು ಆರಿಸಿ ಕಳುಹಿಸಿ. ಸಂಸದರು ಲೋಕಸಭೆಯಲ್ಲಿ ಬಾಯಿಬಿಟ್ಟು ಮಾತನಾಡಿದರೆ ಸಮಸ್ಯೆಗಳು ಕಡಿಮೆಯಾಗುತ್ತದೆ ಎಂದರು.
ಕಾಂಗ್ರೆಸ್ ಮುಖಂಡ ದಿನೇಶ್ ಹೆಗ್ಡೆ ಮೊಳಹಳ್ಳಿ ಮಾತನಾಡಿ, ನೀಟ್ ಪರೀಕ್ಷೆ ಪತ್ರಿಕೆ ಪ್ರತೀ ವರ್ಷವೂ ಸೋರಿಕೆಯಾಗುತ್ತಿದ್ದು, ವಿದ್ಯಾರ್ಥಿಗಳ ಪರಿಶ್ರಮಕ್ಕೆ ಬೆಲೆ ಇಲ್ಲದಂತಾಗಿದೆ. 22 ಲಕ್ಷ ವಿದ್ಯಾರ್ಥಿಗಳ ಭವಿಷ್ಯದಲ್ಲಿ ಚೆಲ್ಲಾಟವಾಡಿದ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಬೇಕು, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.
ಜಿಲ್ಲಾ ಕಾಂಗ್ರೆಸ್ ವಕ್ತಾರ ವಿಕಾಸ್ ಹೆಗ್ಡೆ ಮಾತನಾಡಿ, ವೈದ್ಯೆಯಾಗುವ ಕನಸು ಹೊತ್ತ ಅದೆಷ್ಟೋ ವಿದ್ಯಾರ್ಥಿಗಳ ಹೆತ್ತವರು ಇಂದು ಪ್ರಧಾನಿ ನರೆಂದ್ರ ಮೋದಿಯವರಿಗೆ ಹಿಡಿಶಾಪ ಹಾಕುತ್ತಿದ್ದಾರೆ.
ಬಡ ವಿದ್ಯಾರ್ಥಿಗಳಿಗೆ ಗಗನಕುಸುಮವಾಗಿದ್ದ ವೈದ್ಯಕೀಯ ಹಾಗೂ ಇಂಜಿನಿಯರಿಂಗ್ ಶಿಕ್ಷಣಕ್ಕೆ ಸಿಇಟಿ ಪ್ರವೇಶ ಪರೀಕ್ಷೆಯನ್ನು ತಂದು ಬಡ ವಿದ್ಯಾರ್ಥಿಗಳು ವೈದ್ಯಕೀಯ ಹಾಗೂ ಇಂಜಿನಿಯರಿಂಗ್ ಶಿಕ್ಷಣ ಪಡೆಯಲು ನೆರವಾದರು ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಅವರು. ಆದರೆ ದೇಶದಲ್ಲಿ ಆಡಳಿತ ಚುಕ್ಕಾಣಿ ಹಿಡಿದ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಬಡವರ ಮನೆಯ ಮಕ್ಕಳು ವೈದ್ಯರಾಗಬಾರದು ಎಂದು ಇಡೀ ದೇಶಕ್ಕೆ ಹೊಸ ಶಿಕ್ಷಣ ನೀತಿ ನೀಟ್ ಅನ್ನು ಜಾರಿಗೆ ತಂದಿತ್ತು. ನೀಟ್ ಪರೀಕ್ಷೆಯನ್ನು ನಾವು ಅಂದೇ ವಿರೋಧ ಮಾಡಿದ್ದೆವು. ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ನಿರಂತರ ಪ್ರಕ್ರಿಯೆಯಾಗಿದೆ. ಕೇಂದ್ರದ ದಲ್ಲಾಳಿಗಳೇ ಸೋರಿಕೆ ಮಾಡಿ ಶ್ರೀಮಂತರ ಮಕ್ಕಳಿಗೆ ಮಾರಾಟ ಮಾಡುವ ಮೂಲಕ ಶ್ರೀಮಂತರ ಮಕ್ಕಳನ್ನು ವೈದ್ಯರಾಗಿ ಮಾಡಲು ಹೊರಟಿರುವುದು ದುರಂತ. ಕುಂದಾಪುರದ ಬ್ಲಾಕ್ ಕಾಂಗ್ರೆಸ್ ಕಾನೂನುಬದ್ದವಾಗಿ ಪಡೆದ ನಿವೇಶನದ ವಿರುದ್ದ ಹೋರಾಟ ಮಾಡಿದ ಕುಂದಾಪುರದ ಬಿಜೆಪಿ ಇಂದು ನೀಟ್ ಮೂಲಕ ಅದೆಷ್ಟೋ ಬಡ ವಿದ್ಯಾರ್ಥಿಗಳ ಕನಸು ನುಚ್ಚು ನೂರಾಗುತ್ತಿರುವ ಬಗ್ಗೆ ಯಾಕೆ ಪ್ರತಭಟನೆ ನಡೆಸುತ್ತಿಲ್ಲ ಎಂದು ಪ್ರಶ್ನಿಸಿದರು.
ಎನ್ಎಸ್ಯುಐ ಜಿಲ್ಲಾಧ್ಯಕ್ಷ ಸೌರಭ್ ಬಲ್ಲಾಳ್, ಜಿಲ್ಲಾ ಕಾರ್ಯದರ್ಶಿ ಸುಮಂತ್ ಶೆಟ್ಟಿ ಮಾತನಾಡಿದರು.
ಎನ್ಎಸ್ಯುಐ ರಾಜ್ಯ ಕಾರ್ಯದರ್ಶಿ ಸಯ್ಯದ್ ಪುರ್ಖಾನ್ ಯಾಸಿನ್, ತಾಲೂಕು ಅಧ್ಯಕ್ಷ ಸುಜನ್ ಶೆಟ್ಟಿ, ಯುವ ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷರಾದ ಸುದೀಶ್ ಶೆಟ್ಟಿ ಕರ್ಕಿ, ಶಮಂತ್ ಕುಂದಾಪುರ, ಅರ್ಜುನ್ ನಾಯರಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶೆಟ್ಟಿ, ಯುವ ಕಾಂಗ್ರೆಸ್ ಉಡುಪಿ ವಿಧಾನಸಭಾ ಅಧ್ಯಕ್ಷ ಸುದೇಶ್ ಶೆಟ್ಟಿ, ಯುವ ಕಾಂಗ್ರೆಸ್ ಮುಖಂಡರಾದ ಪ್ರಮೋದ್ ಪೂಜಾರಿ, ಅಭಿಜಿತ್ ಪೂಜಾರಿ, ಎನ್ಎಸ್ಯುಐ ಪದಾಧಿಕಾರಿಗಳಾದ ದರ್ಶನ ಶೆಟ್ಟಿ, ಧನುಷ್ ಕಾಳಾವರ, ಸುಮುಖ್, ರಂಜಿತ್ ಬ್ರಹ್ಮಾವರ ಮತ್ತಿತರರು ಇದ್ದರು.
ರಸ್ತೆ ತಡೆದು ಪ್ರತಿಭಟನೆ: ಬಂಧನ
ಪ್ರತಿಭಟನಾ ಸಭೆಯ ಬಳಿಕ ಪ್ರತಿಭಟನಾನಿರತ ಎನ್ಎಸ್ಯುಐ ಕಾರ್ಯಕರ್ತರು ರಸ್ತೆ ತಡೆದು ಪ್ರತಿಭಟನೆ ನಡೆಸಿದರು. ನೋಟುಗಳ ಜೆರಾಕ್ಸ್ ಪ್ರತಿಯನ್ನು ಎಸೆದು ಕೇಂದ್ರ ಸರ್ಕಾರದ ವಿರುದ್ದ ಆಕ್ರೋಶಭರಿತ ಘೋಷಣೆಗಳನ್ನು ಕೂಗುತ್ತಾ ರಸ್ತೆಯಲ್ಲೇ ಕೂತು ಪ್ರತಿಭಟಿಸಿದರು. ಪೊಲೀಸರು ಪ್ರತಿಭಟನಾನಿರತ ಎನ್ಎಸ್ಯುಐ ಮುಖಂಡರನ್ನು ಬಂಧಿಸಿದರು.
ಇನ್ಸ್ಪೆಕ್ಟರ್ ಜಯರಾಮ್ ಗೌಡ ನೇತೃತ್ವದಲ್ಲಿ ನಗರ ಠಾಣೆಯ ಪಿಎಸ್ಐ ನಂಜಾನಾಯ್ಕ್, ಅಪರಾಧ ವಿಭಾಗದ ಪುಷ್ಪಾ, ಶಂಕರನಾರಾಯಣ ಠಾಣೆಯ ಯೂನೂಸ್ ಗಡ್ಡೇಕರ್, ಅಮಾಸೆಬೈಲು ಠಾಣಾ ಪಿಎಸ್ಐ ಅಶೋಕ್, ಕುಂದಾಪುರ ಸಂಚಾರ ಠಾಣೆಯ ಅನೂಪ್ ನಾಯ್ಕ್ ಹಾಗೂ ಸುಧಾ ಪ್ರಭು ಮತ್ತು ಸಿಬ್ಬಂದಿಗಳು ಬಂದೋಬ್ಸ್ತ್ ವ್ಯವಸ್ಥೆ ಕಲ್ಪಿಸಿದರು.













