ಮಹಾ ರುದ್ರಯಾಗದಿಂದ ನಾಡು ಸುಭಿಕ್ಷೆ ಹೊಂದಲಿ – ಸಚಿವ ರಾಮಲಿಂಗ ರೆಡ್ಡಿ
ಉಡುಪಿ: ಲೋಕಕಲ್ಯಾಣಾರ್ಥವಾಗಿ ನಡೆದ ರುದ್ರ ಯಾಗದಿಂದ ದೇಶ, ರಾಜ್ಯಕ್ಕೆ ಬಂದ ಯಾವುದೇ ಸಂಕಷ್ಟಗಳು ದೂರವಾಗಿ, ಈ ನಾಡು ಸುಭಿಕ್ಷೆ ಹೊಂದಲಿ ಎಂದು ಸಾರಿಗೆ ಮತ್ತು ಮುಜರಾಯಿ ಇಲಾಖೆಯ ಸಚಿವ ರಾಮಲಿಂಗ ರೆಡ್ಡಿ ಹೇಳಿದರು.
ಅವರು ಶುಕ್ರವಾರ ಕೊಡವೂರು ಶಂಕರನಾರಾಯಣ ದೇವಸ್ಥಾನದಲ್ಲಿ ಪ್ರಸಾದ್ರಾಜ್ ಕಾಂಚನ್ ಅವರ ನೇತೃತ್ವದಲ್ಲಿ ಲೋಕ ಕಲ್ಯಾಣಾರ್ಥವಾಗಿ ನಡೆಯುತ್ತಿರುವ ಮಹಾ ರುದ್ರಯಾಗದ ಧಾರ್ಮಿಕ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.



ಈ ಭಾಗದಲ್ಲಿ ಸುಮಾರು 75 ವರ್ಷಗಳ ಹಿಂದೆ ರುದ್ರಯಾಗ ನಡೆದಿದೆ ಎನ್ನಲಾಗಿದೆ. ಇದೀಗ ಪ್ರಸಾದ್ರಾಜ್ ಕಾಂಚನ್ ಅವರಿಗೆ ಈ ಯೋಗ ದೊರೆತಿದೆ. ಲೋಕಕಲ್ಯಾಣಾರ್ಥವಾಗಿ ನಡೆದ ಈ ಯಾಗದಿಂದ ದೇಶ, ರಾಜ್ಯಕ್ಕೆ ಬಂದ ಯಾವುದೇ ಸಂಕಷ್ಟಗಳು ದೂರವಾಗಿ, ಈ ನಾಡು ಸುಭಿಕ್ಷೆ ಹೊಂದಲಿ ಎಂದರು.
ಆನಂದ ಸಿದ್ಧಿ ಪೀಠಂನ ಮತ್ತು ಶ್ರೀ ಲಕ್ಷ್ಮೀ ಭೂ ವರಾಹ ಸಾಲಿಗ್ರಾಮ ಕ್ಷೇತ್ರದ ಸಂಸ್ಥಾಪಕ ಡಾ| ಮಹರ್ಷಿ ಆನಂದ ಗುರೂಜಿ ಆಶೀರ್ವಚನ ನೀಡಿ ಮಕ್ಕಳಿಗೆ ಎಲ್ಲ ರೀತಿಯ ಜ್ಞಾನವನ್ನು ತಾಯಿಯೇ ನೀಡಬೇಕು, ಆಗ ಮಾತ್ರ ಮಕ್ಕಳು ಉತ್ತಮ ಪ್ರಜೆಯಾಗಿ ಬೆಳೆಯಲು ಸಾಧ್ಯ. ತಾಯಿ ಮಕ್ಕಳಿಗೆ ಶಿಸ್ತು, ಸಂಯಮ, ಹಿರಿಯರಿಗೆ ಗೌರವ, ತಾಳ್ಮೆಯ ಗುಣಗಳನ್ನು ತಾಯಿ ಕಲಿಸಿ ಬೆಳೆಸಬೇಕು. ಮೊದಲು ನಾವು ನಮ್ಮ ಸಂಸ್ಕೃತಿಯನ್ನು ಕಲಿತರೆ ನಮ್ಮ ಮಕ್ಕಳು ಕಲಿಯುತ್ತಾರೆ ಎಂದು ಹೇಳಿದರು

ಅಧ್ಯಕ್ಷತೆಯನ್ನು ವಹಿಸಿ ಪ್ರಾಸ್ತವಿಕವಾಗಿ ಮಾತನಾಡಿದ ಮಹಾ ರುದ್ರಯಾಗ ಸಮಿತಿಯ ಕಾರ್ಯಾಧ್ಯಕ್ಷ ಪ್ರಸಾದ್‌ರಾಜ್ ಕಾಂಚನ್ ಅವರು ನಾನು ತೀರ್ಥಯಾತ್ರೆಗೆ ತೆರಳಿದಾಗ ಶಿವನ ದೇವಸ್ಥಾನಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ನನಗೆ ದೇವರಿಂದಲೇ ಯಾಗ ನೆರವೇರಿಸಲು ಪ್ರೇರಣೆಯಾಯಿತು. ಸಾಮನ್ಯ ಜನರಿಗೆ ಯಾಗವನ್ನು ನೆರವೇರಿಸಲು ಕಷ್ಟಸಾದ್ಯ, ಜನ ಸಾಮಾನ್ಯರೂ ಯಾಗದಲ್ಲಿ ಭಾಗವಹಿಸಿ ಕಣ್ಣುಂಬಿಕೊಳ್ಳುವಂತೆ ಮಾಡಬೇಕೆನ್ನುವ ಮಹದಾಸೆ ನನ್ನದಾಗಿತ್ತು. ಇದೀಗ ಎಲ್ಲ ಕೆಲಸಗಳು ದೇವರ ದಯೆಯಿಂದ ಪವಾಡ ಸದೃಶವಾಗಿ ಆಗುತ್ತಿದೆ ಎಂದರು.
ಲೋಕ ಕಲ್ಯಾಣಾರ್ಥವಾಗಿ ಆಯೋಜಿಸಿರುವ ಮಹಾರುದ್ರಯಾಗ ಕಾರ್ಯಕ್ರಮಕ್ಕೆ ಪೇಜಾವರ ಮಠಾಧೀಶರಾದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಆಗಮಿಸಿ ದೇವರ ದರ್ಶನ ಪಡೆದು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ಮಹಾರುದ್ರಯಾಗದ ಪ್ರಯುಕ್ತ ಧಾರ್ಮಿಕ ಕಾರ್ಯಕ್ರಮಗಳಿಗೆ ಶುಕ್ರವಾರ ಬೆಳಿಗ್ಗೆ ಚಾಲನೆ ದೊರಕಿತು. ಬೆಳಿಗ್ಗೆ ಋತ್ವಿಜರ ಸ್ವಾಗತ, ತೋರಣ ಮಹೂರ್ತ, ಉಗ್ರಾಣ ಮಹೂರ್ತ, ಅರಣಿ ಮಥನ, ಜನನ, ಬ್ರಹ್ಮಕೂರ್ಚ ಹೋಮ, ಕಂಕಣ ಬಂಧ, ದ್ವಾದಶ ನಾರಿಕೇಳ ಗಣಯಾಗದೊಂದಿಗೆ ಪುರೋಹಿತರಿಂದ ಮಹಾ ರುದ್ರ ಪಠಣ ಆರಂಭಗೊಂಡಿತು.
ಮಹರ್ಷಿ ಆನಂದ ಗುರೂಜಿ, ಅಭಯಚಂದ್ರ ಜೈನ್, ಮುನಿಯಾಲು ಉದಯ್ ಕುಮಾರ್ ಶೆಟ್ಟಿ, ಕೃಷ್ಣಮೂರ್ತಿ ಆಚಾರ್ಯ, ಪಟ್ಲ ಸತೀಶ್ ಶೆಟ್ಟಿ, ನಾಗರಾಜ್ ಸುವರ್ಣ, ಜಯ ಸಿ ಕೋಟ್ಯಾನ್, ಸುರೇಂದ್ರ ಶೆಟ್ಟಿ, ಕಿಶನ್ ಹೆಗ್ಡೆ ಕೊಳ್ಕೆಬೈಲು, ಪ್ರಕಾಶ್ ಜಿ ಕೊಡವೂರು, ಜಯಕರ ಶೆಟ್ಟಿ ಇಂದ್ರಾಳಿ, ಶಂಕರ್ ಶೆಟ್ಟಿ, ನಾರಾಯಣ ಬಲ್ಲಾಳ್, ದಿನಕರ ಹೆರೂರು. ತಾರಾನಾಥ ಪೂಜಾರಿ, ಗುರುರಾಜ್, ಅಮೃತಾ ಕೃಷ್ಣಮೂರ್ತಿ, ಮಂಜುಳಾ ಹಾಗೂ ಇತರರು ಉಪಸ್ಥಿತರಿದ್ದರು.












