ಮಂಗಳೂರು ಮನಪಾಕ್ಕೆ MGNVP 2ನೇ ಹಂತದಲ್ಲಿ 165 ಕೋಟಿ ರೂ. ಅನುದಾನ ಬಿಡುಗಡೆ: ಐವನ್ ಡಿಸೋಜ
ಮಂಗಳೂರು: ಮಹಾತ್ಮ ಗಾಂಧಿ ನಗರ ವಿಕಾಸ ಯೋಜನೆ (MGNVP) 2ನೇ ಹಂತದ ಯೋಜನೆಯಡಿ ರಾಜ್ಯ ಸರಕಾರದಿಂದ ಮಂಗಳೂರು ಮಹಾನಗರ ಪಾಲಿಕೆಗೆ 165 ಕೋಟಿ ರೂ. ವೆಚ್ಚದ ಕಾಮಗಾರಿಗಳಿಗೆ ಅನುದಾನ ಬಿಡುಗಡೆಯಾಗಿದೆ. ಎ. 18ರಂದು ಅಭಿವೃದ್ಧಿ ಕಾಮಗಾರಿಗಳಿಗೆ ಶಿಲಾನ್ಯಾಸ ನೆರವೇರಲಿದೆ ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಹೇಳಿದ್ದಾರೆ.
ಮನಪಾ ಕಟ್ಟಡದಲ್ಲಿರುವ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಅವರು ಮಾಹಿತಿ ನೀಡಿದರು.
ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಎ.18ರಂದು ಬೆಳಗ್ಗೆ 9ಕ್ಕೆ ಮರವೂರು ಸೇತುವೆ ಬಳಿ 3 ಕೋಟಿ ರೂ. ವೆಚ್ಚದ ಕಾಮಗಾರಿ, 9.45ಕ್ಕೆ ವೆಲೆನ್ಸಿಯಾ ಚರ್ಚ್ ಬಳಿ 1.95 ಕೋಟಿ ರೂ. ವೆಚ್ಚದ ಕಾಮಗಾರಿ, 10:30ಕ್ಕೆ ಚಿಲಿಂಬಿಗುಡ್ಡೆ ಬಳಿ 2 ಕೋಟಿ ರೂ. ವೆಚ್ಚ ಹಾಗೂ ಸುಂಕದಕಟ್ಟೆ ಉರ್ವಾಸ್ಟೋರ್ ಬಳಿ 10:45ಕ್ಕೆ ಪ್ರಮುಖ ಕಾಮಗಾರಿಗಳಿಗೆ ಶಿಲಾನ್ಯಾಸ ನೆರವೇರಿಸುವರು. ಬಳಿಕ ಸಭಾ ಕಾರ್ಯಕ್ರಮ ಉರ್ವಾಸ್ಟೋರ್ ನ ಅಂಬೇಡ್ಕರ್ ಭವನದಲ್ಲಿ 11ಕ್ಕೆ ನಡೆಯಲಿದೆ ಎಂದವರು ಹೇಳಿದರು.
ರಾಜ್ಯ ಸರಕಾರವು ಮೈಸೂರು, ಮಂಗಳೂರು, ಹುಬ್ಬಳ್ಳಿ- ಧಾರವಾಡ, ಬೆಳಗಾವಿ, ಕಲಬುರಗಿ, ಬಳ್ಳಾರಿ, ದಾವಣಗೆರೆ, ಶಿವಮೊಗ್ಗ, ವಿಜಯಪುರ ಮತ್ತು ತುಮಕೂರುಗಳಲ್ಲಿ ಅಂದಾಜು 2,000 ಕೋಟಿ ರೂ.ಗಳ ಮಹಾತ್ಮ ಗಾಂಧಿ ನಗರ ವಿಕಾಸ ಯೋಜನೆ ಹಂತ 2ನ್ನು 2024-25ನೇ ಸಾಲಿನಿಂದ 2026-27ನೆ ಸಾಲಿನವರೆಗೆ ಟೆಂಡರ್ ಕರೆದು ಮಾರ್ಗಸೂಚಿಗಳನ್ವಯ ಅನುಷ್ಠಾನಗೊಳಿಸಲು ಅನುಮೋದನೆ ನೀಡಿದೆ. ಮಂಗಳೂರು ನಗರ ಪಾಲಿಕೆಯಲ್ಲೂ ಈಗಾಗಲೇ ಕೆಲವು ಕಾಮಗಾರಿಗಳು ಆರಂಭಗೊಂಡಿವೆ. ಅಧಿಕೃತ ಸಮಾರಂಭವನ್ನು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಉಪಸ್ಥಿತಿಯಲ್ಲಿ ಶನಿವಾರ ನಡೆಯಲಿದೆ ಎಂದು ಐವನ್ ತಿಳಿಸಿದರು.
ಪ್ರಮುಖ ಕಾಮಗಾರಿಗಳು
*ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಮರಕಡದಿಂದ ಮರವೂರು ಸೇತುವೆ ವರೆಗೆ ಕಾಂಕ್ರಿಟ್ ರಸ್ತೆ, ಯುಟಿಲಿಟಿ ಡಕ್ ನಿರ್ಮಾಣ ಹಾಗೂ ಬಾಕ್ಸ್ ಚರಂಡಿ ನಿರ್ಮಾಣ ಹಾಗೂ ಕಾಮಗಾರಿ ಸ್ಲ್ಯಾಬ್ ಅಳವಡಿಸುವಿಕೆಯು 9 ಕೋಟಿ ರೂ. ವೆಚ್ಚದಲ್ಲಿ ನಡೆಯಲಿದೆ.
*ಬಿಜೈ ಆನೆಗುಂಡಿಯಿಂದ ಕಾಪಿಕಾಡು 4ನೇ ಅಡ್ಡ ರಸ್ತೆ, ಫಾದರ್ ಮುಲ್ಲರ್ ಆಸ್ಪತ್ರೆಯಿಂದ ಕೋಟಿ- ಚೆನ್ನಯ ಸರ್ಕಲ್, ವೆಲೆನ್ಸಿಯಾ ಸರ್ಕಲ್ನಿಂದ ಗೋರಿಗುಡ್ಡೆ ನಾಗನಕಟ್ಟೆ, ಕೆ.ಎಸ್. ರಾವ್ ರಸ್ತೆಯಿಂದ ನ್ಯಾಯಾಲಯಗಳ ಸಂಕೀರ್ಣಕ್ಕೆ ಹೋಗುವ ಕೋರ್ಟ್ನ ಕಾಂಕ್ರಿಟ್ ರಸ್ತೆ ನಿರ್ಮಾಣ 9.50 ಕೋಟಿ ರೂ. ವೆಚ್ಚದಲ್ಲಿ ನಡೆಯಲಿದೆ.
*ವಾಟರ್ ಫ್ರಂಟ್ ವಾಯು ವಿಹಾರ ಸಂಪರ್ಕ ಕಲ್ಪಿಸುವ ಬೋಳಾರ ಸೀ ಫೇಸ್ ಇನ್ ಫ್ರಂಟ್ ರಸ್ತೆ, ಕೆ.ಎನ್. ಬೋರ್ಡ್ ಯಾರ್ಡ್ ರಸ್ತೆ, ಲೋಬೋ ರಿವರ್ ರಸ್ತೆ, ಟಿವಿಎಸ್ ಫ್ಯಾಕಟಿ ರಸ್ತೆ, ಕೆನರಾ ಫ್ಲೈ ವುಡ್ ರಸ್ತೆ ಹಾಗೂ 60ನೇ ಬೆಂಗ್ರೆ ವಾರ್ಡ್ ನ ರಸ್ತೆಗಳಿಗೆ 5 ಕೋಟಿ ರೂ. ವೆಚ್ಚದಲ್ಲಿ ಕಾಂಕ್ರಿಟ್ ಅಳವಡಿಕೆ ಸೇರಿದಂತೆ ಒಟ್ಟು 25 ವಿವಿಧ ಕಾಮಗಾರಿಗಳನ್ನು ಕೈಗೆತ್ತಿಗೊಳ್ಳಲಾಗಿದೆ.
ಇದರದಲ್ಲಿ ಸಾಮಾನ್ಯ ಘಟಕದ ಅನುದಾನದಡಿ 124.50 ಕೋಟಿ ರೂ., ಪರಿಶಿಷ್ಟ ಜಾತಿ ಅನುದಾನದಲ್ಲಿ 28.50 ಕೋಟಿ ರೂ. ಹಾಗೂ ಪರಿಶಿಷ್ಟ ಪಂಗಡದ ಅನುದಾನದಡಿ 12 ಕೋಟಿ ರೂ.ಗಳ ಕಾಮಗಾರಿಗಳು ಒಳಗೊಂಡಿವೆ ಎಂದು ಐವನ್ ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಗಟ್ಟಿ, ಮುಖಂಡರಾದ ಶಶಿಧರ ಹೆಗ್ಡೆ, ಅಪ್ಪಿ, ಭಾಸ್ಕರ್, ಡಿ.ಕೆ.ಅಶೋಕ್, ಪ್ರೇಮ್, ಕೇಶವ, ಚೇತನ್, ಇಮ್ರಾನ್, ಸೋನ್ಸ್, ಚಂದ್ರಹಾಸ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.
‘ನಗರದಲ್ಲಿ ಒಳಚರಂಡಿ ಸಮಸ್ಯೆ ಸಾಕಷ್ಟು ಬಿಗಡಾಯಿಸಿದೆ. ನದಿ, ಬಾವಿ ಸೇರಿದಂತೆ ಜಲಮೂಲಗಳು ಒಳಚರಂಡಿ ನೀರಿನಿಂದಾಗಿ ಕಲುಷಿತವಾಗಿವೆ. ಈ ನಿಟ್ಟಿನಲ್ಲಿ 1250 ಕೋಟಿ ರೂ.ಗಳ ಸಮಗ್ರ ಒಳಚರಂಡಿ ಯೋಜನೆಗೆ ಡಿಪಿಆರ್ ಸರಕಾರಕ್ಕೆ ಸಲ್ಲಿಕೆಯಾಗಿದೆ. ಈ ಯೋಜನೆ ಅನುಷ್ಠಾನದ ನಿಟ್ಟಿನಲ್ಲಿ ಸ್ಥಳೀಯ ಜನಪ್ರತಿನಿಧಿಗಳು ಒಟ್ಟಾಗಿ ರಾಜ್ಯ ಸರಕಾರವನ್ನು ಮನವರಿಕೆ ಮಾಡಬೇಕಾಗಿದೆ. ಅಭಿವೃದ್ಧಿ ವಿಚಾರದಲ್ಲಿ ಸ್ಥಳೀಯ ಶಾಸಕರು ರಾಜಕೀಯ ಬಿಟ್ಟು ಕಾರ್ಯ ನಿರ್ವಹಿಸಬೇಕಾಗಿದೆ’ ಎಂದು ಐವನ್ ಡಿಸೋಜ ಹೇಳಿದರು.
‘ರಸ್ತೆಗಳ ಕಾಂಕ್ರಿಟ್ ಕಾಮಗಾರಿಗಳ ಸಂದರ್ಭ ಯುಟಿಲಿಟಿ ಡಕ್ ನಿರ್ಮಾಣ, ಬಾಕ್ಸ್ ಚರಂಡಿ ನಿರ್ಮಾಣ ಹಾಗೂ ಕವರಿಂಗ್ ಸ್ಲಾಬ್ ಮೂಲಕ ಕಾಮಗಾರಿಯ ಬಳಿಕ ಮತ್ತೆ ರಸ್ತೆಯನ್ನು ಅಗೆಯುವುದು, ಕತ್ತರಿಸುವ ಕಾಮಗಾರಿಗಳಿಗೆ ನಿಯಂತ್ರಣ ಮಾಡಲಾಗುತ್ತಿದೆ. ಸ್ಥಳೀಯ ಮಟ್ಟದಲ್ಲಿ ಜಾಗೃತಿ ಸಮಿತಿ ರಚನೆ ಮಾಡಿ ಕಾಮಗಾರಿ ನಡೆಯು ಸಂದರ್ಭ ಗುತ್ತಿಗೆದಾರರ ಕಾಮಗಾರಿಗೆ ಈ ನಿಟ್ಟಿನಲ್ಲಿ ಅಗತ್ಯ ಸಲಹೆ ಸೂಚನೆಗಳನ್ನು ನೀಡುವ ನಿಟ್ಟಿನಲ್ಲಿ ಕ್ರಮ ವಹಿಸಲಾಗುವುದು’ ಎಂದು ಐವನ್ ಡಿಸೋಜ ಹೇಳಿದರು.
ದಕ್ಷಿಣ ರಾಜ್ಯಗಳಿಗೆ ಅನ್ಯಾಯ
‘ಕೇಂದ್ರ ಸರಕಾರವು ಐದು ರಾಜ್ಯಗಳ ಚುನಾವಣೆಯ ಸಂದರ್ಭ ಈ ವಿಶೇಷ ಅಧಿವೇಶನ ನಡೆಸುತ್ತಿರುವುದು ರಾಜಕೀಯ ಪ್ರೇರಿತ. ಈಗಾಗಲೇ ತೀರ್ಮಾನ ಆಗಿರುವ ಶೇ.33 ಮಹಿಳಾ ಮೀಸಲಾತಿ ಜಾರಿ ಸ್ವಾಗತಾರ್ಹ. 2010ರಲ್ಲಿ ಡಾ.ಮನಮೋಹನ್ ಸಿಂಗ್ ಪ್ರಧಾನ ಮಂತ್ರಿ ಆಗಿದ್ದಾಗಲೇ ಸೋನಿಯಾ ಗಾಂಧಿಯವರು ಮಹಿಳಾ ಮೀಸಲಾತಿಯನ್ನು ಪ್ರಸ್ತಾವಿಸಿದಾಗ ಇದೇ ಬಿಜೆಪಿಯವರು ವಿರೋಧಿಸಿದ್ದರು. ಈಗ ಅದನ್ನು ಜಾರಿಗೆ ತರುವುದು ಸ್ವಾಗತಾರ್ಹ. ಆದರೆ ಸದ್ಯ ಜನಗಣತಿ ನಡೆಯುತ್ತಿರುವ ಸಂದರ್ಭ ಕ್ಷೇತ್ರ ವಿಂಗಡನೆ ಆಧಾರದಲ್ಲಿ ಮೀಸಲಾತಿ ಮಾತ್ರ ಸಂವಿಧಾನ ವಿರೋಧವಾಗಿದೆ. ಇದರಿಂದ ಕರ್ನಾಟಕ, ತಮಿಳುನಾಡು, ಆಂಧ್ರ ಪ್ರದೇಶ, ತೆಲಂಗಾಣ, ಕೇರಳ ಮೊದಲಾದ ದಕ್ಷಿಣ ರಾಜ್ಯಗಳಿಗೆ ಅನ್ಯಾಯವಾಗಲಿದೆ’ ಎಂದು ಐವನ್ ಡಿಸೋಜ ಹೇಳಿದರು.













