ನಂತೂರು ಭೀಕರ ಅಪಘಾತ: ಹಿರಿಯ ಛಾಯಾಗ್ರಾಹಕ ಚಿಕಿತ್ಸೆ ಫಲಿಸದೆ ಮೃತ್ಯು

Spread the love

ನಂತೂರು ಭೀಕರ ಅಪಘಾತ: ಹಿರಿಯ ಛಾಯಾಗ್ರಾಹಕ ಚಿಕಿತ್ಸೆ ಫಲಿಸದೆ ಮೃತ್ಯು
 

ಮಂಗಳೂರು: ರಾಷ್ಟ್ರೀಯ ಹೆದ್ದಾರಿ 66ರ ನಂತೂರು ತಾರಾಯಿತೋಟದಲ್ಲಿ ಕಳೆದ ಶನಿವಾರ ರಾತ್ರಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಹಿರಿಯ ಛಾಯಾಗ್ರಾಹಕ ಕೆ. ಮೋಹನ್ ಚಂದರ್ (64) ಅವರು ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಗ್ಗೆ ಸಾವನ್ನಪ್ಪಿದ್ದಾರೆ.

ಘಟನೆ ವಿವರಗಳ ಪ್ರಕಾರ, ಧರ್ಮಸ್ಥಳದ ಕಾರ್ಯತಡ್ಕ ನಿವಾಸಿ ಗೋಪಾಲಕೃಷ್ಣ (27) ಶನಿವಾರ ರಾತ್ರಿ ಸುಮಾರು 8.30ರ ಸುಮಾರಿಗೆ ಗುರುಪುರದಿಂದ ಜಪ್ಪಿನಮೊಗರಿನಲ್ಲಿರುವ ತನ್ನ ಬಾಡಿಗೆ ಮನೆಯನ್ನು ಕಡೆಗೆ ಎಫ್‌ಜೀ ಬೈಕ್ ಅನ್ನು ಅತಿವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸುತ್ತಿದ್ದನು. ಓವರ್‌ಟೇಕ್ ಮಾಡುವ ಭರದಲ್ಲಿ ತನ್ನ ದಾರಿಗೆ ಸಾಗುತ್ತಿದ್ದ ಮೋಹನ್ ಚಂದರ್ ಅವರ ಸ್ಕೂಟರ್‌ಗೆ ಡಿಕ್ಕಿ ಹೊಡೆದ ಪರಿಣಾಮ, ನಿಯಂತ್ರಣ ತಪ್ಪಿದ ಬೈಕ್ ಟಿಪ್ಪರ್ ವಾಹನಕ್ಕೆ ಡಿಕ್ಕಿ ಹೊಡೆದು ಗೋಪಾಲಕೃಷ್ಣ ಸ್ಥಳದಲ್ಲೇ ಸಾವನ್ನಪ್ಪಿದ್ದನು.

ಈ ವೇಳೆ ರಸ್ತೆಗೆ ಎಸೆಯಲ್ಪಟ್ಟು ತಲೆಗೆ ಗಂಭೀರ ಗಾಯಗೊಂಡ ಮೋಹನ್ ಚಂದರ್ ಅವರನ್ನು ಟೆಂಪೋ ಚಾಲಕ ಗಂಗಾಧರ ಅಂಬ್ಲಮೊಗರು ಸಾರ್ವಜನಿಕರ ಸಹಕಾರದಿಂದ ಕಂಕನಾಡಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಎರಡು ದಿನಗಳ ಕಾಲ ಚಿಕಿತ್ಸೆ ಪಡೆಯುತ್ತಿದ್ದ ಅವರು ಇಂದು ಬೆಳಗ್ಗೆ ಮೃತಪಟ್ಟಿದ್ದಾರೆ.

ಅಪಘಾತದ ಭೀಕರ ದೃಶ್ಯ ಗಂಗಾಧರ ಅಂಬ್ಲಮೊಗರು ಚಲಾಯಿಸುತ್ತಿದ್ದ ಗೂಡ್ಸ್ ಟೆಂಪೋ ವಾಹನದ ಡ್ಯಾಶ್‌ಬೋರ್ಡ್ ಕ್ಯಾಮೆರಾದಲ್ಲಿ ದಾಖಲಾಗಿರುವುದು ತಿಳಿದುಬಂದಿದೆ.

ನಾಗುರಿ ನಿವಾಸಿಯಾಗಿದ್ದ ಮೋಹನ್ ಚಂದರ್ ಅವರು ಪದವಿನಂಗಡಿಯಲ್ಲಿ ‘ನವ್ಯ ಸ್ಟುಡಿಯೋ’ ನಡೆಸುತ್ತಿದ್ದರು. ಅವರ ಹಿರಿಯ ಪುತ್ರಿಯ ವಿವಾಹ ಇದೇ ಮೇ 10ರಂದು ನಿಶ್ಚಯವಾಗಿದ್ದು, ಮನೆಯಲ್ಲಿ ಸಂಭ್ರಮ ಮನೆ ಮಾಡಿತ್ತು. ಆದರೆ ಅವರ ಅಕಾಲಿಕ ನಿಧನದಿಂದ ಆ ಸಂತಸದ ಮನೆಗೆ ದುಃಖದ ವಾತಾವರಣ ಆವರಿಸಿದೆ.

ಮೋಹನ್ ಚಂದರ್ ಅವರು ದಕ್ಷಿಣ ಕನ್ನಡ-ಉಡುಪಿ ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್‌ನ ಅಜೀವ ಸದಸ್ಯರಾಗಿದ್ದು, ಅನೇಕ ಸಾಮಾಜಿಕ ಸಂಘಟನೆಗಳಲ್ಲಿ ಸಕ್ರಿಯರಾಗಿದ್ದರು. ಅವರ ಅಗಲಿಕೆಗೆ ಫೋಟೋಗ್ರಾಫರ್ಸ್ ಅಸೋಸಿಯೇಷನ್ ಹಾಗೂ ವಿವಿಧ ವಲಯಗಳಿಂದ ಸಂತಾಪ ವ್ಯಕ್ತವಾಗಿದೆ.
ಮೃತರು ಪತ್ನಿ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.


Spread the love
Subscribe
Notify of

0 Comments
Inline Feedbacks
View all comments