ಮಂಗಳೂರು ಪೊಲೀಸ್ ಆಯುಕ್ತರಿಂದ ಜಲ ಸಂರಕ್ಷಣಾ ಅಭಿಯಾನದ ಪೋಸ್ಟರ್ ಬಿಡುಗಡೆ

Spread the love

ಮಂಗಳೂರು ಪೊಲೀಸ್ ಆಯುಕ್ತರಿಂದ ಜಲ ಸಂರಕ್ಷಣಾ ಅಭಿಯಾನದ ಪೋಸ್ಟರ್ ಬಿಡುಗಡೆ

  • ಎಲ್ ನಿನೋ ಪರಿಣಾಮದ ಹಿನ್ನೆಲೆಯಲ್ಲಿ ನೀರು ಉಳಿಸುವ ಕುರಿತು ಜನಜಾಗೃತಿಗೆ ಕರೆ

ಮಂಗಳೂರು: ಕರ್ನಾಟಕ ರಾಜ್ಯ ಮಹಾವಿದ್ಯಾಲಯ ಶಿಕ್ಷಕ ಸಂಘ ಆಯೋಜಿಸುತ್ತಿರುವ “ಜಲ ಸಂರಕ್ಷಣಾ ಅಭಿಯಾನ” ದ ಪೋಸ್ಟರ್ ಅನ್ನು ಮಂಗಳೂರು ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ, ಐಪಿಎಸ್ ಅವರು ಇಂದು ಬಿಡುಗಡೆಗೊಳಿಸಿದರು.

ಪೋಸ್ಟರ್ ಬಿಡುಗಡೆಗೊಳಿಸಿ ಮಾತನಾಡಿದ ಪೊಲೀಸ್ ಆಯುಕ್ತರು, ಎಲ್ ನಿನೋ (El Niño) ಪರಿಣಾಮದಿಂದ ಈ ವರ್ಷ ದೇಶದ ಹಲವೆಡೆ ಮಳೆಯ ಪ್ರಮಾಣ ಕಡಿಮೆಯಾಗುವ ಸಾಧ್ಯತೆಗಳಿರುವ ಹಿನ್ನೆಲೆಯಲ್ಲಿ ಪ್ರತಿಯೊಬ್ಬ ನಾಗರಿಕರೂ ನೀರಿನ ಮಹತ್ವವನ್ನು ಅರಿತು ಅದನ್ನು ಸಂರಕ್ಷಿಸುವ ಜವಾಬ್ದಾರಿಯನ್ನು ಹೊತ್ತುಕೊಳ್ಳಬೇಕು ಎಂದು ಹೇಳಿದರು. ನೀರು ಪ್ರಕೃತಿಯ ಅಮೂಲ್ಯ ಸಂಪತ್ತಾಗಿದ್ದು, ಅದರ ದುರುಪಯೋಗವನ್ನು ತಡೆಯುವುದು ಮತ್ತು ಮಳೆನೀರು ಕೊಯ್ಲು ಸೇರಿದಂತೆ ನೀರಿನ ಸಂರಕ್ಷಣೆಯ ವಿವಿಧ ವಿಧಾನಗಳನ್ನು ಪ್ರತಿಯೊಂದು ಮನೆ, ಶಾಲೆ, ಕಾಲೇಜು ಹಾಗೂ ಸಾರ್ವಜನಿಕ ಸಂಸ್ಥೆಗಳಲ್ಲಿ ಅಳವಡಿಸಿಕೊಳ್ಳುವುದು ಇಂದಿನ ಅಗತ್ಯವಾಗಿದೆ. ಈ ನೆಲೆಯಲ್ಲಿ ಕೆ ಆರ್ ಎಂ ಎಸ್ ಎಸ್ ಮಾಡುತ್ತಿರುವ ಈ ಕಾರ್ಯ ಶ್ಲಾಘನೀಯ ಎಂದು ಅವರು ಅಭಿಪ್ರಾಯಪಟ್ಟರು.

ಕೆ ಆರ್ ಎಂ ಎಸ್ ಎಸ್ ರೂಪಿಸಿರುವ ಈ ಪೋಸ್ಟರ್‌ನಲ್ಲಿ ಎಲ್ ನಿನೋ ಪರಿಣಾಮ, ಮಳೆಯ ಕೊರತೆಯಿಂದ ಉಂಟಾಗುವ ನೀರಿನ ಬಿಕ್ಕಟ್ಟು, ಭೂಗರ್ಭ ಜಲಮಟ್ಟ ಕುಸಿತ, ಕೃಷಿ ಮತ್ತು ಪರಿಸರದ ಮೇಲಿನ ಪರಿಣಾಮಗಳು, ನೀರನ್ನು ಮಿತವಾಗಿ ಬಳಸುವ ಕ್ರಮಗಳು, ಮಳೆನೀರು ಕೊಯ್ಲು, ಮರ ನೆಡುವಿಕೆ ಹಾಗೂ ಜಲ ಸಂರಕ್ಷಣೆಗೆ ಪ್ರತಿಯೊಬ್ಬರೂ ಅನುಸರಿಸಬಹುದಾದ ಸರಳ ಮತ್ತು ಪರಿಣಾಮಕಾರಿ ಮಾರ್ಗಗಳನ್ನು ತಿಳಿಸುವುದರ ಮೂಲಕ ಶಾಲಾ ಕಾಲೇಜುಗಳಲ್ಲಿ ಹಾಗೂ ಪ್ರತಿಯೊಬ್ಬ ನಾಗರಿಕರಿಗೆ ಜಲ ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯವನ್ನು ಮಾಡುತ್ತಿದೆ.

ರಾಷ್ಟ್ರ ಮೊದಲು ಎಂಬ ಧ್ಯೇಯದೊಂದಿಗೆ ಕಾರ್ಯನಿರ್ವಹಿಸುತ್ತಿರುವ ಕೆ ಆರ್ ಎಂ ಎಸ್ ಎಸ್ ಕೇವಲ ಶಿಕ್ಷಕರ ಹಿತರಕ್ಷಣೆಗೆ ಸೀಮಿತವಾಗದೆ, ಸಮಾಜಮುಖಿ ಕಾರ್ಯಕ್ರಮಗಳ ಮೂಲಕ ಪರಿಸರ ಸಂರಕ್ಷಣೆ, ಜಲ ಸಂರಕ್ಷಣೆ, ರಾಷ್ಟ್ರೀಯ ಚಿಂತನೆ ಹಾಗೂ ಸಾಮಾಜಿಕ ಜವಾಬ್ದಾರಿಯ ಅರಿವು ಮೂಡಿಸುವ ಕೆಲಸವನ್ನು ನಿರಂತರವಾಗಿ ಮಾಡುತ್ತಿವೆ. ಅದರ ಒಂದು ಭಾಗವಾಗಿ ಈ ಬಾರಿಯ ಮಳೆ ಕೊರತೆಯ ಪರಿಣಾಮ ಮುಂದಿನ ದಿನಗಳಲ್ಲಿ ಬಹಳ ಗಂಭೀರವಾಗಿ ಕಾಡುವ ನಿಟ್ಟಿನಲ್ಲಿ ಜಲ ಸಂರಕ್ಷಣೆ ಅಧ್ಯಯನವನ್ನು ಆರಂಭಿಸಿದೆ.

ಎಲ್ ನಿನೋ ಹಿನ್ನೆಲೆಯಲ್ಲಿ ಜಲ ಸಂರಕ್ಷಣೆಯ ಅಗತ್ಯವನ್ನು ಮನಗಂಡು ರಾಜ್ಯದಾದ್ಯಂತ ಶಿಕ್ಷಣ ಸಂಸ್ಥೆಗಳು, ಸರ್ಕಾರಿ ಕಚೇರಿಗಳು, ಸಾರ್ವಜನಿಕ ಸ್ಥಳಗಳು ಹಾಗೂ ವಿವಿಧ ಸಂಘ-ಸಂಸ್ಥೆಗಳ ಮೂಲಕ ಈ ಜಾಗೃತಿ ಪೋಸ್ಟರ್ ಅನ್ನು ವ್ಯಾಪಕವಾಗಿ ತಲುಪಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಜೊತೆಗೆ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಸಾರ್ವಜನಿಕರ ಸಹಭಾಗಿತ್ವದಲ್ಲಿ ಮಳೆನೀರು ಕೊಯ್ಲು, ನೀರು ಉಳಿಸುವ ಪ್ರತಿಜ್ಞೆ, ಜಾಗೃತಿ ಉಪನ್ಯಾಸ, ಪರಿಸರ ಸಂರಕ್ಷಣಾ ಕಾರ್ಯಕ್ರಮಗಳು ಸೇರಿದಂತೆ ಹಲವು ಜನಜಾಗೃತಿ ಚಟುವಟಿಕೆಗಳನ್ನು ನಡೆಸಲಾಗುವುದು ಎಂದು ಕೆ ಆರ್ ಎಂ ಎಸ್ ಎಸ್ ರಾಜ್ಯ ಜಂಟಿ ಕಾರ್ಯದರ್ಶಿ ಡಾ ಮಾಧವ ಎಂ ಕೆ ತಿಳಿಸಿದರು.

ಜಲ ಸಂರಕ್ಷಣೆ ಎಂಬುದು ಸರ್ಕಾರ ಅಥವಾ ಕೆಲವೇ ಸಂಸ್ಥೆಗಳ ಜವಾಬ್ದಾರಿಯಲ್ಲ; ಪ್ರತಿಯೊಬ್ಬ ನಾಗರಿಕನ ಕರ್ತವ್ಯವೂ ಆಗಿದೆ. “ಇಂದಿನ ನೀರು ಉಳಿಸುವ ನಮ್ಮ ಕೆಲಸ ನಾಳಿನ ಸುರಕ್ಷಿತ ಬದುಕಿಗೆ ಭದ್ರ ಬುನಾದಿ” ಎಂಬ ಸಂದೇಶವನ್ನು ಸಮಾಜದ ಪ್ರತಿಯೊಬ್ಬರಿಗೂ ತಲುಪಿಸುವ ಉದ್ದೇಶದಿಂದ ಈ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು.

ಕಾರ್ಯಕ್ರಮದಲ್ಲಿ ಆಕಾಶವಾಣಿಯ ಚಂದ್ರಶೇಖರ್ ಶೆಟ್ಟಿ, ಕೆ ಆರ್ ಎಂ ಎಸ್ ಎಸ್ ರಾಜ್ಯ ಮಾಧ್ಯಮ ಪ್ರಮುಖ್ ಮಮತಾ ಶೆಟ್ಟಿ, ಕೆ ಆರ್ ಎಂ ಎಸ್ ಎಸ್ ದಕ್ಷಿಣ ಕನ್ನಡ ಜಿಲ್ಲಾ ನಿಕಟ ಪೂರ್ವಾಧ್ಯಕ್ಷರಾದ ಡಾ. ಸುಧಾ ಎನ್ ವೈದ್ಯ, ಕಾರ್ಯದರ್ಶಿ ರಾಜೇಶ್ ಕುಮಾರ್, ಕೋಶಾಧಿಕಾರಿ ಗೀತಾ ಜೈನ್, ಮಾಧ್ಯಮ ಪ್ರಮುಖ್ ಪ್ರಿಯಾ ಭಟ್ ಉಪಸ್ಥಿತರಿದ್ದರು.


Spread the love
Subscribe
Notify of

0 Comments