ಕುಂದಾಪುರ ಬ್ಲಾಕ್‌ ಕಾಂಗ್ರೆಸ್ ಗೆ ಯುವ ಸಾರಥಿ: ಕೆ. ವಿಕಾಸ್ ಹೆಗ್ಡೆಗೆ ಅಧ್ಯಕ್ಷ ಪಟ್ಟ!

Spread the love

ಕುಂದಾಪುರ ಬ್ಲಾಕ್‌ ಕಾಂಗ್ರೆಸ್ ಗೆ ಯುವ ಸಾರಥಿ: ಕೆ. ವಿಕಾಸ್ ಹೆಗ್ಡೆಗೆ ಅಧ್ಯಕ್ಷ ಪಟ್ಟ!

ಕುಂದಾಪುರ: ಕುಂದಾಪುರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಾಳಯಕ್ಕೆ ಶಕ್ತಿ ತುಂಬಲು ಆಲೋಚಿಸಿದ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಹಾಗೂ ಉಪಮುಖಮಂತ್ರಿ ಡಿಕೆ ಶಿವಕುಮಾರ್ ಬ್ಲಾಕ್‌ ಕಾಂಗ್ರೆಸ್ ಸಮಿತಿಗೆ ನೂತನ‌ ಸಾರಥಿಯನ್ನಾಗಿ ಯುವ ನಾಯಕ ಕೆ. ವಿಕಾಸ್ ಹೆಗ್ಡೆ ಅವರನ್ನು ನೇಮಕಾತಿ‌ ಮಾಡಿ ಆದೇಶ ಹೊರಡಿಸಿದ್ದಾರೆ.

ಜಿಲ್ಲೆಯ ಕುಂದಾಪುರ‌ ಮತ್ತು ಕೋಟ ಬ್ಲಾಕ್‌ ಕಾಂಗ್ರೆಸ್ ಸಮಿತಿಗಳ‌ ಅಧ್ಯಕ್ಷರ ಬದಲಾವಣೆ ಮಾಡುವಂತೆ ಹಲವು ದಿನಗಳಿಂದ ಕಾಂಗ್ರೆಸ್ ಪಾಳಯದಲ್ಲಿ ಕೂಗು‌ ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಕ್ಷೇತ್ರದ ಮುಖಂಡ‌ ದಿನೇಶ್ ಹೆಗ್ಡೆ ಮೊಳಹಳ್ಳಿಯವರು ಕೆಪಿಸಿಸಿ ಅಧ್ಯಕ್ಷರಿಗೆ ನೂತನ ಅಧ್ಯಕ್ಷರ ಆಯ್ಕೆಯ ಕುರಿತಂತೆ ಪತ್ರವನ್ನು ಬರೆದಿದ್ದರು.

ನಿಷ್ಕ್ರೀಯವಾದ ಕಾಂಗ್ರೆಸ್ ಚಟುವಟಿಕೆಗಳಿಗೆ ಶಕ್ತಿ ತುಂಬಬೇಕು ಎನ್ನುವ ಹಿನ್ನೆಲೆಯಲ್ಲಿ ಅಧ್ಯಕ್ಷ ಗಿರಿಯ ಚುಕ್ಕಾಣಿ‌ ಯಾರಿಗೆ ನೀಡಬೇಕು ಎನ್ನುವುದನ್ನು ಮಾಹಿತಿ‌ ಪಡೆದು ತೀರ್ಮಾನ ಕೈಗೊಂಡಿದ್ದ ಕೆಪಿಸಿಸಿ ಅಧ್ಯಕ್ಷರು ಕಳೆದ‌ ಫೆಬ್ರವರಿ 9 ರಂದು ಕುಂದಾಪುರ ಬ್ಲಾಕ್‌ ಕಾಂಗ್ರೆಸ್ ನ ನೂತನ‌ ಅಧ್ಯಕ್ಷರಾಗಿ ವಿಕಾಸ್ ಹೆಗ್ಡೆ ಹಾಗೂ ಕೋಟ ಬ್ಲಾಕ್ ಕಾಂಗ್ರೆಸ್ ನ ನೂತನ ಅಧ್ಯಕ್ಷರಾಗಿ ತಿಮ್ಮ‌ ಪೂಜಾರಿ ಅವರನ್ನು ನೇಮಕ‌ ಮಾಡಿ ಆದೇಶ ಹೊರಡಿಸಿದ್ದರು.

ವಿಕಾಸ್ ಹೆಗ್ಡೆ ಅವರ ಆಯ್ಕೆಗೆ ಕಾಂಗ್ರೆಸ್ ಪಾಳಯದಲ್ಲಿ ಹರ್ಷ ವ್ಯಕ್ತವಾಗಿದ್ದು, ಮಾಜಿ ಶಾಸಕ‌ ಕೆ. ಗೋಪಾಲ ಪೂಜಾರಿ ಸೇರಿದಂತೆ ಹಲವು ಮುಖಂಡರು‌ ಸಂತಸ ವ್ಯಕ್ತಪಡಿಸಿ ಅಭಿನಂದನೆ ಸಲ್ಲಿಸಿದ್ದಾರೆ‌.


Spread the love