ಸರಣಿ ಕಳ್ಳತನ ಪ್ರಕರಣಗಳ ಕುಖ್ಯಾತ ಆರೋಪಿ ಬಂಧನ; ದಕ್ಷಿಣ ಕನ್ನಡದ 5 ಸೇರಿ ಒಟ್ಟು 11 ಪ್ರಕರಣಗಳು ಪತ್ತೆ
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಹಾಗೂ ಉಪ್ಪಿನಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳೆದ ಮೇ ತಿಂಗಳಲ್ಲಿ ನಡೆದಿದ್ದ ಸರಣಿ ಕಳ್ಳತನ ಪ್ರಕರಣಗಳನ್ನು ಭೇದಿಸಿರುವ ಪೊಲೀಸರು, ಕುಖ್ಯಾತ ಆರೋಪಿಯೊಬ್ಬನನ್ನು ಬಂಧಿಸಿ ದಕ್ಷಿಣ ಕನ್ನಡ ಜಿಲ್ಲೆಯ 5 ಪ್ರಕರಣಗಳು ಸೇರಿದಂತೆ ಒಟ್ಟು 11 ಪ್ರಕರಣಗಳನ್ನು ಪತ್ತೆಹಚ್ಚಿದ್ದಾರೆ.
ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಅಪರಾಧ ಸಂಖ್ಯೆ 58/2026, 59/2026 ಹಾಗೂ 64/2026 ಮತ್ತು ಉಪ್ಪಿನಂಗಡಿ ಪೊಲೀಸ್ ಠಾಣೆಯ ಅಪರಾಧ ಸಂಖ್ಯೆ 78/2026 ಹಾಗೂ 79/2026 ಪ್ರಕರಣಗಳ ತನಿಖೆ ನಡೆಸುತ್ತಿದ್ದ ವೇಳೆ ಆರೋಪಿಯನ್ನು ಬಂಧಿಸಲಾಗಿದೆ.
ಬಂಧಿತ ಆರೋಪಿಯನ್ನು ತಮಿಳುನಾಡಿನ ಕೊಯಂಬತ್ತೂರು ನಿವಾಸಿ ಜಯಕುಮಾರ್ ವಿ. (55) ಎಂದು ಗುರುತಿಸಲಾಗಿದೆ. ಆರೋಪಿಯನ್ನು ಜು.8ರಂದು ಬಂಧಿಸಿದ ಪೊಲೀಸರು, ಆತನ ಬಳಿಯಿದ್ದ ಕಬ್ಬಿಣದ ಸಲಾಕೆ, ಸ್ಕ್ರೂ ಡ್ರೈವರ್, ಬ್ಯಾಗ್ ಹಾಗೂ ಎರಡು ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಂಡಿದ್ದಾರೆ.
ವಿಚಾರಣೆ ವೇಳೆ ಆರೋಪಿ ದಕ್ಷಿಣ ಕನ್ನಡ ಜಿಲ್ಲೆಯ ಐದು ಪ್ರಕರಣಗಳಷ್ಟೇ ಅಲ್ಲದೆ, ಮಂಗಳೂರು ಸುರತ್ಕಲ್ ಪೊಲೀಸ್ ಠಾಣೆಯ ಒಂದು ಪ್ರಕರಣ, ಕೇರಳ ರಾಜ್ಯದ ನಾಲ್ಕು ವಿವಿಧ ಪೊಲೀಸ್ ಠಾಣೆಗಳ ತಲಾ ಒಂದು ಪ್ರಕರಣ ಹಾಗೂ ಬೆಂಗಳೂರಿನ ಒಂದು ಪ್ರಕರಣ ಸೇರಿದಂತೆ ಒಟ್ಟು 11 ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿರುವುದು ಬೆಳಕಿಗೆ ಬಂದಿದೆ.
ಆರೋಪಿ ಪತ್ತೆ ಕಾರ್ಯಾಚರಣೆಯನ್ನು ಬೆಳ್ತಂಗಡಿ ಪೊಲೀಸ್ ಠಾಣೆಯ ಪ್ರಭಾರ ಪೊಲೀಸ್ ನಿರೀಕ್ಷಕ ರವಿ ಬಿ.ಎಸ್. ಹಾಗೂ ಉಪ್ಪಿನಂಗಡಿ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ನಾಗರಾಜ್ ಅವರ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ ನಡೆಸಿತು.
ತಂಡದಲ್ಲಿ ಬೆಳ್ತಂಗಡಿ ಪೊಲೀಸ್ ಠಾಣೆಯ ಪಿಎಸ್‌ಐಗಳಾದ ಆನಂದ ಎಂ., ಸಿಖಂದರ್ ಪಾಷಾ, ಉಪ್ಪಿನಂಗಡಿ ಪೊಲೀಸ್ ಠಾಣೆಯ ಪಿಎಸ್‌ಐ ಸುತೇಶ್ ಕೆ.ಪಿ., ಬೆಳ್ತಂಗಡಿ ಠಾಣೆಯ ಅಪರಾಧ ದಳದ ಸಿಬ್ಬಂದಿ, ಉಪ್ಪಿನಂಗಡಿ ಹಾಗೂ ಕಡಬ ಪೊಲೀಸ್ ಠಾಣೆಗಳ ಸಿಬ್ಬಂದಿ ಮತ್ತು ಸಿಡಿಆರ್ ವಿಭಾಗದ ಸಿಬ್ಬಂದಿ ಭಾಗವಹಿಸಿ ಕಾರ್ಯಾಚರಣೆಯನ್ನು ಯಶಸ್ವಿಗೊಳಿಸಿದ್ದಾರೆ.













